ADVERTISEMENT

ಬೆಂಗಳೂರು: ಬೀದಿ ನಾಯಿಗಳ ಹುಚ್ಚಾಟ, ಜನರಿಗೆ ಪ್ರಾಣ ಸಂಕಟ

ಆರ್. ಮಂಜುನಾಥ್
Published 11 ಆಗಸ್ಟ್ 2025, 23:32 IST
Last Updated 11 ಆಗಸ್ಟ್ 2025, 23:32 IST
<div class="paragraphs"><p>ರಸ್ತೆಯಲ್ಲಿ ಬೀದಿ ನಾಯಿಗಳು</p></div>

ರಸ್ತೆಯಲ್ಲಿ ಬೀದಿ ನಾಯಿಗಳು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹುಚ್ಚಾಟ, ಕಡಿತ ಪ್ರಕರಣಗಳು ಹೆಚ್ಚಾಗಿದ್ದು, ಆಗಾಗ್ಗೆ ಸಾವೂ ಸಂಭವಿಸುತ್ತಿರುವುದರಿಂದ ನಾಗರಿಕರು ಪ್ರಾಣ ಸಂಕಟದಲ್ಲಿದ್ದಾರೆ.

ADVERTISEMENT

2023ರ ಅಕ್ಟೋಬರ್  23ರಂದು ಪ್ರಕಟಿಸಿರುವ ಗಣತಿ ವರದಿ ಪ್ರಕಾರ, ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಶೇ 10ರಷ್ಟು ಕಡಿಮೆಯಾಗಿವೆ. ಶೇ 71.85ರಷ್ಟು ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೆ, ನಾಯಿ ಕಡಿತ ಪ್ರಕರಣಗಳು ಮಾತ್ರ ಹೆಚ್ಚಾಗುತ್ತಲೇ ಇವೆ.

ವಿಧಾನಸೌಧ, ವಿಕಾಸಸೌಧ, ಎಂ.ಜಿ. ರಸ್ತೆಯ ಮೆಯೊ ಹಾಲ್‌, ಲಾಲ್‌ಬಾಗ್‌, ಕಬ್ಬನ್‌ಪಾರ್ಕ್ ಸುತ್ತಮುತ್ತ ಸೇರಿದಂತೆ ನಗರದ ಹಲವು ಪ್ರದೇಶ, ಮೈದಾನ, ರಸ್ತೆಗಳಲ್ಲಿ ಕತ್ತಲಾದ ಮೇಲೆ, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಒಬ್ಬರೇ ನಡೆದು ಹೋಗದಂತಹ ಪರಿಸ್ಥಿತಿ ಇದೆ. ವ್ಯಗ್ರ ಬೀದಿ ನಾಯಿಗಳ ಆಟಾಟೋಪಕ್ಕೆ ಮಕ್ಕಳು, ವೃದ್ಧರೂ ಸೇರಿದಂತೆ ಎಲ್ಲ ವಯೋಮಾನದ ನಾಗರಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಐದು ವರ್ಷಗಳಲ್ಲಿ ವರ್ಷಕ್ಕೆ ಸರಾಸರಿ 15 ಸಾವಿರ ಬೀದಿ ನಾಯಿ ಕಡಿತ ಪ್ರಕರಣಗಳು ದಾಖಲಾಗುತ್ತಿವೆ ಎಂದು ಬಿಬಿಎಂಪಿ ಅಂಕಿ–ಅಂಶಗಳು ಹೇಳುತ್ತಿವೆ. ಆದರೆ, 2025ರ ಜನವರಿಯಿಂದ ಜೂನ್‌ವರೆಗೇ 13 ಸಾವಿರಕ್ಕೂ ಹೆಚ್ಚು ಬೀದಿ ನಾಯಿ ಪ್ರಕರಣಗಳು ದಾಖಲಾಗಿವೆ. ಬ್ಯಾಟರಾಯನಪುರದ ಕೆಂಪೇಗೌಡ ನಗರದಲ್ಲಿ ಇತ್ತೀಚೆಗೆ ನಡೆದ ಬೀದಿ ನಾಯಿ ದಾಳಿ, ಕಡಿತ ಪ್ರಕರಣದಲ್ಲಿ ಸೀತಪ್ಪ ಎಂಬುವರು ಮೃತಪಟ್ಟಿದ್ದಾರೆ. ನಗರದಲ್ಲಿ ಹಲವು ಪ್ರದೇಶಗಳಲ್ಲಿ ಬೀದಿ ನಾಯಿ ಕಡಿತ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ. ವ್ಯಗ್ರ ಹಾಗೂ ಕಡಿಯುವುದನ್ನೇ ಅಭ್ಯಾಸ ಮಾಡಿಕೊಂಡ ನಾಯಿಗಳನ್ನು  ಬಿಬಿಎಂಪಿ ಪಶುಸಂಗೋಪನೆ ವಿಭಾಗದಿಂದ ಹಿಡಿದು, ನಿಗಾ ಕೇಂದ್ರಕ್ಕೆ ದಾಖಲಿಸಲಾಗುತ್ತಿದೆ. ಆದರೂ, ನಾಗರಿಕರು ನೆಮ್ಮದಿಯಿಂದ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ.

‘ಕಗ್ಗದಾಸಪುರದ ನೇತ್ರಾವತಿ ಕಾಲೊನಿಯಲ್ಲಿ ನಾಲ್ಕು ನಾಯಿಗಳು ತುಂಬಾ ಕ್ರೂರಿಯಾಗಿದ್ದು, ಈ ವರ್ಷದ ಜನವರಿಯಿಂದ ಈವರೆಗೆ ಸುಮಾರು 40 ಜನರಿಗೆ ಕಡಿದಿವೆ. ಕೆಲವು ಪ್ರಕರಣಗಳು ಅರಿವಿಗೆ ಬಂದಿಲ್ಲ’ ಎಂದು ನೇತ್ರಾವತಿ ಕಾಲೊನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಲೋಕಾಯುಕ್ತರಿಗೂ ದೂರು ನೀಡಿದ್ದಾರೆ. 

‘ನಾಗರಿಕರನ್ನು ಕಚ್ಚುವ ಬೀದಿ ನಾಯಿಗಳನ್ನು ಹಿಡಿದೊಯ್ಯುವ ಬಿಬಿಎಂಪಿಯವರು ಒಂದಷ್ಟು ದಿನವಾದ ಮೇಲೆ ಅದೇ ಸ್ಥಳಕ್ಕೆ ಬಂದು ಬಿಡುತ್ತಾರೆ. ಆ ನಾಯಿ ಮತ್ತೆ ಬೇರೆಯವರಿಗೆ ಕಚ್ಚುತ್ತದೆ’ ಎಂಬುದು ನಾಗರಿಕರ ಆರೋಪ.

ವ್ಯಗ್ರ ಬೀದಿ ನಾಯಿ

‘ವ್ಯಗ್ರ ಅಥವಾ ಕಚ್ಚಿದ ಬೀದಿ ನಾಯಿಗಳನ್ನು ಹಿಡಿದು, ನಿಗಾ ಕೇಂದ್ರದಲ್ಲಿ ಇರಿಸಲಾಗುತ್ತದೆ. ವೈದ್ಯರು ಅವುಗಳಿಗೆ ಚಿಕಿತ್ಸೆ ನೀಡಿ, ಅವುಗಳು ಸಹಜ ಸ್ಥಿತಿಗೆ ಬಂದ ನಂತರ ಆ ನಾಯಿಗಳನ್ನು ಅವುಗಳಿದ್ದ ಸ್ಥಳಕ್ಕೇ ಬಿಡಬೇಕು, ಇದು ನಿಯಮ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.

‘ಬೀದಿ ನಾಯಿಗಳು ಕಚ್ಚಲು ಇಂತಹದ್ದೇ ನಿರ್ದಿಷ್ಟ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ವ್ಯಗ್ರ ಬೀದಿ ನಾಯಿಗಳು ಯಾವ ಕಾರಣವಿಲ್ಲದಿದ್ದರೂ ಕಚ್ಚುತ್ತವೆ. ಲೈಂಗಿಕಾಸಕ್ತಿಯ ಸಮಯವೂ ಕಚ್ಚಾಟದ ಕಾರಣಗಳಲ್ಲಿ ಒಂದು. ಆಹಾರ ಸಿಗದಿರುವುದು, ಹೆಚ್ಚಿನ ಆಹಾರ ಸಿಗುವುದು, ಮಾಂಸಕ್ಕಾಗಿ ಪರಸ್ಪರ ಕಿತ್ತಾಟದಲ್ಲಿ ಜನರ ಮೇಲೆರಗುವುದೂ ಬೀದಿ ನಾಯಿಗಳ ಕಚ್ಚಾಟಕ್ಕೆ ಕಾರಣಗಳಾಗಿವೆ’ ಎಂದು ಮಾಹಿತಿ ನೀಡಿದರು.

ಆಹಾರ ನೀಡಬೇಡಿ ಎಂದರೆ ಚಿಕನ್‌ ನೀಡುತ್ತಾರಂತೆ!
‘ಬೀದಿ ನಾಯಿಗಳು ಆಹಾರಕ್ಕಾಗಿ ಮಕ್ಕಳು ಹಾಗೂ ವೃದ್ಧರ ಮೇಲೆ ಎರಗುತ್ತಿವೆ. ಅವುಗಳಿಗೆ ಆಹಾರ ನೀಡುವ ಗುಂಪೇ ಇದೆ. ಕೋಳಿ ಮಾಂಸ ಮೀನು ಮಾಂಸ ಮೂಳೆ ಸೇರಿದಂತೆ ಎಲ್ಲೆಲ್ಲಿಂದಲೋ ತಂದು ಕೆಲವು ಬೀದಿ ನಾಯಿಗಳಿಗೆ ಹಾಕುತ್ತಾರೆ. ಕೆಲವು ಪ್ರದೇಶಗಳಲ್ಲಿ ನಿತ್ಯವೂ ಬಿಸ್ಕತ್‌ ಹಾಕುವುದು ಸಾಮಾನ್ಯವಾಗಿದೆ. ಹೀಗೆ ಸಿಗುವ ಆಹಾರ ಸಿಗದಾಗ ಬೀದಿ ನಾಯಿಗಳು ನಾಗರಿಕರ ಮೇಲೆ ದಾಳಿ ಮಾಡುತ್ತಿವೆ. ಅವುಗಳಿಗೆ ಆಹಾರ ಹಾಕದಿದ್ದರೆ ಬೇರೆ ಪ್ರದೇಶಗಳಿಗೆ ಹೋಗುತ್ತವೆ ಎಂದು ಹಲವು ಬಾರಿ ಹೇಳುತ್ತಿದ್ದೇವೆ. ಆದರೆ ಯಾರೂ ಕೇಳುತ್ತಿಲ್ಲ. ಬಿಬಿಎಂಪಿಯೇ ಅವರ ಬೆಂಬಲಕ್ಕೆ ನಿಂತಿದೆ. ₹2 ಕೋಟಿ ವೆಚ್ಚ ಮಾಡಿ ಬೀದಿ ನಾಯಿಗಳಿಗೆ ಕೋಳಿ ಮಾಂಸ ಸೇರಿದಂತೆ ಪೌಷ್ಟಿಕ ಆಹಾರ ನೀಡಲು ಮುಂದಾಗಿದೆ. ಇದರ ಬದಲು ಬೀದಿ ನಾಯಿಗಳ ಹಾವಳಿಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಿ’ ಎಂದು ನಾಗರಿಕರಾದ ಶ್ರೀನಿವಾಸ್‌ ಜಗದೀಶ್‌ ಶರ್ಮಿಳಾ ಉಮಾ ಅವರು ಆಗ್ರಹಿಸಿದರು.
ಮತ್ತಿಕೆರೆಯಲ್ಲಿ ಇರಿಸಲಾಗಿದ್ದ ‘ಟ್ರ್ಯಾ‍ಪ್‌ ಕೇಜ್‌’ನಲ್ಲಿ ಸಿಲುಕಿದ ಬೀದಿ ನಾಯಿಗಳು
ದೂರಿನ ಮೇಲೆ ಕ್ರಮ: ಬಿಬಿಎಂಪಿ
‘ಬೀದಿ ನಾಯಿಗಳ ಕಡಿತ ಪ್ರಕರಣಗಳ ಬಗ್ಗೆ ದಾಖಲಾಗುವ ದೂರಿನಂತೆ ಕ್ರಮ ಕ್ರಮ ಕೈಗೊಳ್ಳಲಾಗುತ್ತಿದೆ. ಆ ಪ್ರದೇಶಗಳಿಗೆ ನಮ್ಮ ವೈದ್ಯರ ತಂಡ ಭೇಟಿ ನೀಡಿ ವ್ಯಗ್ರ ಬೀದಿ ನಾಯಿಗಳನ್ನು ಹಿಡಿಯುವ ಕೆಲಸ ಮಾಡುತ್ತದೆ. ತಕ್ಷಣಕ್ಕೆ ಸಿಗದ ಬೀದಿ ನಾಯಿಗಳನ್ನು ಹಿಡಿಯಲು ಬೋನ್‌ಗಳನ್ನೂ ಹಿಡಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು. ‘ವ್ಯಗ್ರ ಅಥವಾ ಕಚ್ಚುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಬೀದಿ ನಾಯಿಗಳನ್ನು ಹಿಡಿದು ಅವುಗಳನ್ನು ನಿಗಾ ಕೇಂದ್ರಗಳಲ್ಲಿ ಇರಿಸಲಾಗುತ್ತದೆ. ವೈದ್ಯರು ಅವುಗಳಿಗೆ ಚಿಕಿತ್ಸೆ ನೀಡುತ್ತಾರೆ. ಅವುಗಳು ಸಹಜ ಸ್ಥಿತಿಗೆ ಬಂದಿವೆ ಎಂದು ವೈದ್ಯರು ದೃಢೀಕರಿಸಿದ ಮೇಲೆ ಅವುಗಳನ್ನು ಬಿಡಲಾಗುತ್ತದೆ’ ಎಂದರು.
ಹೆಬ್ಬಾಳದಲ್ಲಿ ‘ಟ್ರ್ಯಾ‍ಪ್‌ ಕೇಜ್‌’ನಲ್ಲಿ ಸಿಲುಕಿದ ಬೀದಿ ನಾಯಿಗಳು

ಚುಚ್ಚುಮದ್ದು ಶಸ್ತ್ರಚಿಕಿತ್ಸೆಗೆ ‘ಟ್ರ್ಯಾ‍ಪ್‌ ಕೇಜ್‌’

ರಸ್ತೆ ಬೀದಿಯಲ್ಲಿ ಹತ್ತಾರು ಸಂಖ್ಯೆಯಲ್ಲಿ ಬೀದಿ ನಾಯಿಗಳು ನಿತ್ಯವೂ ಅಡ್ಡಾಡುತ್ತಿರುತ್ತವೆ ಬೊಗಳುತ್ತಿರುತ್ತವೆ. ಅವುಗಳನ್ನು ಹಿಡಿಯಲು ಬಿಬಿಎಂಪಿ ವಾಹನ ಬಂದ ಸಂದರ್ಭದಲ್ಲಿ ಎಲ್ಲವೂ ಮಾಯವಾಗುತ್ತವೆ. ಬೀದಿ ನಾಯಿಗಳನ್ನು ಹಿಡಿಯಲು ಸಿಬ್ಬಂದಿ ಹರಸಾಹಸ ಪಡಬೇಕಾಗಿದೆ. ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಚುಚ್ಚು ಮದ್ದು ಹಾಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಬಿಬಿಎಂಪಿ ಹೊಸ ಯೋಜನೆ ಜಾರಿಗೊಳಿಸಿದೆ ಅದುವೇ ‘ಟ್ರ್ಯಾಪ್‌ ಕೇಜ್’.

‘ನಗರದಲ್ಲಿ ಹಲವರು ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಅವರು ಬಂದಾಗ ನಾಯಿಗಳೆಲ್ಲ ಅವರ ಹಿಂದೆ ಅವರು ಆಹಾರ ಹಾಕುವ ಸ್ಥಳಕ್ಕೆ ಬರುತ್ತವೆ. ಹೀಗಾಗಿ ಅಂತಹವರನ್ನು ಮನವಿ ಮಾಡಿಕೊಂಡಿದ್ದು ಬಿಬಿಎಂಪಿ ಇರಿಸುವ ‘ಟ್ರ್ಯಾಪ್‌ ಕೇಜ್‌’ನಲ್ಲಿ ಆಹಾರ ಹಾಕುವಂತೆ ಕೇಳಿಕೊಳ್ಳಲಾಗಿದೆ. 10 x 15 ಅಡಿಯ ಬೋನಿನಲ್ಲಿ ಆಹಾರ ಸೇವಿಸಲು ಬರುವ ನಾಯಿಗಳನ್ನು ಹಿಡಿದು ಅವುಗಳಿಗೆ ಅಗತ್ಯವಾದ ಚುಚ್ಚುಮದ್ದು ನೀಡಲಾಗುತ್ತದೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಾಗಿರದಿದ್ದರೆ ಅದನ್ನು ಮಾಡಿದ ನಂತರ ಆ ಸ್ಥಳಗಳಲ್ಲೇ ಬೀದಿ ನಾಯಿಗಳನ್ನು ಬಿಡಲಾಗುತ್ತಿದೆ’ ಎಂದು ಬಿಬಿಎಂಪಿ ಪಶುಸಂಗೋಪನೆ ವಿಭಾಗದ ಜಂಟಿ ನಿರ್ದೇಶಕ ಚಂದ್ರಯ್ಯ ಅವರು ಮಾಹಿತಿ ನೀಡಿದರು.

‘ಆಶ್ರಯ ಕೇಂದ್ರ’ಗಳಿಗೆ ಬೇಕು ನೂರಾರು ಎಕರೆ!
ದೆಹಲಿಯ ಎಲ್ಲ ಪ್ರದೇಶಗಳಲ್ಲಿರುವ ಬೀದಿ ನಾಯಿಗಳನ್ನು ‘ಆಶ್ರಯ ಕೇಂದ್ರ’ಕ್ಕೆ ಸ್ಥಳಾಂತರಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶವನ್ನು ಬೆಂಗಳೂರಿನಲ್ಲೂ ಪಾಲಿಸಿದರೆ ಸಾವಿರಾರು ‘ಆಶ್ರಯ ಕೇಂದ್ರ’ಗಳನ್ನು ಬಿಬಿಎಂಪಿ ಸ್ಥಾಪಿಸಬೇಕಾಗುತ್ತದೆ. ವ್ಯಗ್ಯ ಹಾಗೂ ಕಚ್ಚುವ ನಾಯಿಗಳನ್ನು ಇರಿಸಿ ಅವುಗಳಿಗೆ ಚಿಕಿತ್ಸೆ ನೀಡಲು ‘ನಿಗಾ ಕೇಂದ್ರ’ಗಳನ್ನೇ ಬಿಬಿಎಂಪಿ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ದಾಸರಹಳ್ಳಿಯಲ್ಲಿ ಸುಮಾರು 50 ಬೀದಿ ನಾಯಿಗಳನ್ನು ಇರಿಸುವ ‘ನಿಗಾ ಕೇಂದ್ರ’ವಿದೆ. ಯಲಹಂಕ ಹಾಗೂ ಆರ್.ಆರ್‌. ನಗರದಲ್ಲಿ ಇದೇ ರೀತಿಯ ‘ನಿಗಾ ಕೇಂದ್ರ’ಗಳು ನಿರ್ಮಾಣವಾಗುತ್ತಿವೆ. ಇಲ್ಲಿ ಸುಮಾರು 500 ನಾಯಿಗಳಿಗೆ ಅವಕಾಶವಿದೆ. ವ್ಯಗ್ರ ನಾಯಿಗಳನ್ನೇ ನಿಗಾ ವಹಿಸಲು ಬಿಬಿಎಂಪಿಯಲ್ಲಿ ಸ್ಥಳಾವಕಾಶದ ಕೊರತೆ ಇದೆ. ಇನ್ನು ಎಲ್ಲ 2.79 ಲಕ್ಷ ಬೀದಿ ನಾಯಿಗಳಿಗೆ ‘ಆಶ್ರಯ ಕೇಂದ್ರ’ ಸ್ಥಾಪಿಸಬೇಕಾದರೆ ನೂರಾರು ಎಕರೆ ಭೂಮಿ ಬೇಕಾಗುತ್ತದೆ. ನಿರ್ಮಾಣಕ್ಕೆ ಸಾವಿರಾರು ಕೋಟಿ ಬೇಕಾಗುತ್ತದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.