
ಬೀದಿ ನಾಯಿ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳ ಮಾಹಿತಿಗಳನ್ನು ಸಂಗ್ರಹಿಸಲು ಐದೂ ನಗರ ಪಾಲಿಕೆಗಳು ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿವೆ.
ಸುಪ್ರೀಂ ಕೋರ್ಟ್ ನ.7ರಂದು ಆದೇಶ ನೀಡಿ, ಎಂಟು ವಾರಗಳೊಳಗೆ ಮಾಹಿತಿಯ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಿದೆ. ಹೀಗಾಗಿ, ಜಿಬಿಎ ವ್ಯಾಪ್ತಿಯಲ್ಲಿರುವ ವಿವಿಧ ಇಲಾಖೆ/ಸಂಸ್ಥೆಗಳನ್ನು ಗುರುತಿಸಲಾಗಿದೆ. ಅವುಗಳ ಆವರಣದಲ್ಲಿರುವ ಬೀದಿ ನಾಯಿಗಳ ಮಾಹಿತಿಯನ್ನು ಪಡೆದು, ಅವುಗಳನ್ನು ಅಲ್ಲಿಂದ ಆಶ್ರಯತಾಣಕ್ಕೆ ಸ್ಥಳಾಂತರಿಸಿ ಪೋಷಣೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು-ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕೋಚಿಂಗ್ ಕೇಂದ್ರಗಳು (ಹಾಸ್ಟೆಲ್‌ಸಹಿತ/ ರಹಿತ), ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು/ ಆರೋಗ್ಯ ಕೇಂದ್ರಗಳು–ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳು (ಸಾರ್ವಜನಿಕ ಅಥವಾ ಖಾಸಗಿ), ಬಸ್ ನಿಲ್ದಾಣಗಳು/ ಡಿಪೋಗಳು, ಅಂತರ್‌ರಾಜ್ಯ ಬಸ್ ನಿಲ್ದಾಣಗಳು, ರೈಲು ನಿಲ್ದಾಣ ಸೇರಿದಂತೆ ಇತರೆ ಇಲಾಖೆ/ಸಂಸ್ಥೆಗಳಿಗೆ ನೋಟೀಸ್ ನೀಡಿ ಮಾಹಿತಿ ಒದಗಿಸಲು ಸೂಚಿಸಲಾಗಿದೆ.
ಬೀದಿ ನಾಯಿಗಳ ಸಂಖ್ಯೆ, ಸಂಸ್ಥೆಗಳ ಆವರಣದೊಳಗೆ ಬೀದಿ ನಾಯಿಗಳ ಮರು ಪ್ರವೇಶವನ್ನು ತಡೆಯಲು ತಡೆಗೋಡೆ ಹಾಕುವುದು, ತ್ಯಾಜ್ಯ ನಿರ್ವಹಣೆ, ಸ್ವಚ್ಛತೆ ಕಾಪಾಡುವುದು, ಪಾಲಿಕೆಯೊಂದಿಗೆ ಸಮನ್ವಯ ಸಾಧಿಸಲು ಒಬ್ಬ ಜವಾಬ್ದಾರಿಯುತ ಅಧಿಕಾರಿಯ ನಾಮ ನಿರ್ದೇಶನ, ಆ ನೋಡಲ್ ಅಧಿಕಾರಿಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಆವರಣದಲ್ಲಿ ಪ್ರದರ್ಶಿಸುವುದರ ಜೊತೆಗೆ ಪಾಲಿಕೆಗೆ ನೋಡಲ್ ಅಧಿಕಾರಿಯ ಮಾಹಿತಿ ನೀಡಬೇಕು. ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳು ಆವರಣದಲ್ಲಿ ಬೀದಿ ನಾಯಿಗಳ ಪ್ರವೇಶ ತಡೆಗಟ್ಟಲು 24x7 ನಿಗಾ ವಹಿಸಲು ಭದ್ರತಾ ಸಿಬ್ಬಂದಿ ನೇಮಿಸಬೇಕು. ಅವರಿಗೆ ಗೂಗಲ್ ಫಾರಂ ಲಿಂಕ್ ಕಳುಹಿಸಲಾಗಿದ್ದು, ಅದರಲ್ಲಿ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಜಿಬಿಎ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.