ADVERTISEMENT

ಬೀದಿ ನಾಯಿ‌ ನಿಯಂತ್ರಣಕ್ಕೆ ಕ್ರಮ: ಪ್ರಭು ಚವ್ಹಾಣ್‌

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಂಖ್ಯೆ ನಿತ್ಯ 400ಕ್ಕೆ ಹೆಚ್ಚಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 5:11 IST
Last Updated 12 ಜುಲೈ 2022, 5:11 IST
ಪ್ರಭು ಚವ್ಹಾಣ್‌
ಪ್ರಭು ಚವ್ಹಾಣ್‌   

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಂಖ್ಯೆಯನ್ನು ನಿತ್ಯ 400ಕ್ಕೆ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ತಿಳಿಸಿದರು.

ಬೀದಿನಾಯಿಗಳ ರಕ್ಷಣೆ ಕುರಿತು ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಸದ್ಯ ನಿತ್ಯ 240 ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ’ ಎಂದರು.

‘ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಪ್ರಾಣಿ ಸಹಾಯವಾಣಿ ಕೇಂದ್ರಕ್ಕೆ ಪ್ರತಿನಿತ್ಯ ಕರೆಗಳು ಬರುತ್ತಿವೆ. ಹೀಗಾಗಿ, ಬಿಬಿಎಂಪಿ, ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು, ಪಶುಸಂಗೋಪನೆ ಕಾಲೇಜು ಪ್ರಾಧ್ಯಾಪಕರ ಜೊತೆ ಚರ್ಚೆ ನಡೆಸಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಂಟು ವಲಯಗಳಲ್ಲಿ ಬೀದಿ ನಾಯಿ ಗಳನ್ನು ನಿಯಂತ್ರಿಸುವ ಕಾರ್ಯವನ್ನು ಸರ್ಕಾರೇತರ ಸಂಸ್ಥೆಗಳಿಗೆ ವಹಿಸಲಾಗಿದೆ. ಇದರ ಹೊರತಾಗಿಯೂ ಇಲಾಖೆಯ ಆಸ್ಪತ್ರೆಗಳಲ್ಲಿಯೂ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ.‌ ಇಲಾಖೆಯಿಂದಲೇ ಸಂತಾನೋತ್ಪತ್ತಿ ತಡೆಗಟ್ಟಲು ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ಚುಚ್ಚುಮದ್ದು ನೀಡುವ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಬಿಬಿಎಂಪಿ ಪಶುಸಂಗೋಪನೆ ಇಲಾಖೆ ಅಧಿಕಾರಿ ಗೆ ಸೂಚಿಸಿದ್ದೇನೆ’ ಎಂದರು.

ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ. ಫಾಹೀಮ್, ಆಯುಕ್ತ ಬಸವರಾಜೇಂದ್ರ, ನಿರ್ದೇಶಕ ಮಂಜುನಾಥ್ ಪಾಳೇಗಾರ್, ಬಿಬಿಎಂಪಿ ಪಶುಸಂಗೋಪನೆ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಮಂಜುನಾಥ್ ಶಿಂಧೆ, ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಸಿ.ಎಸ್.ನಾಗರಾಜ್, ಪ್ರಾಧ್ಯಾಪಕ ಶ್ರೀಕೃಷ್ಣ ಇಸ್ಳೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.