ADVERTISEMENT

ಕೋವಿಡ್ ಸಂಕಷ್ಟ: ಬೀದಿ ಬದಿ ವರ್ತಕರಿಗೆ ಅರೆಹೊಟ್ಟೆ

ಕೊರೋನಾ ಅಪಾಯ ಲೆಕ್ಕಿಸದೆ ವ್ಯಾಪಾರ ನಡೆಸಿದರೂ ತಣಿಸಲಾಗುತ್ತಿಲ್ಲ ಹಸಿವು

ವಿಜಯಕುಮಾರ್‌ ಎಸ್‌.ಕೆ
Published 22 ಮೇ 2021, 19:31 IST
Last Updated 22 ಮೇ 2021, 19:31 IST
ತಳ್ಳುಗಾಡಿಗಳಲ್ಲಿ ಬೀದಿಯಲ್ಲಿ ಹಣ್ಣಿನ ವ್ಯಾಪಾರ ನಡೆಯುತ್ತಿರುವುದು –ಪ್ರಜಾವಾಣಿ ಚಿತ್ರಗಳು
ತಳ್ಳುಗಾಡಿಗಳಲ್ಲಿ ಬೀದಿಯಲ್ಲಿ ಹಣ್ಣಿನ ವ್ಯಾಪಾರ ನಡೆಯುತ್ತಿರುವುದು –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಹಲವು ಕುಟುಂಬಗಳನ್ನು ಬೀದಿಗೆ ತಳ್ಳಿದ್ದರೆ, ಬೀದಿಯಲ್ಲೇ ಬದುಕು ಕಟ್ಟಿಕೊಳ್ಳುವ ಬೀದಿ ಬದಿ ಮತ್ತು ತಳ್ಳುಗಾಡಿ ನಡೆಸುವ ವ್ಯಾಪಾರಿಗಳಿಗೆ ಅರೆಹೊಟ್ಟೆಯೇ ಗತಿಯಾಗಿದೆ.

ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದರೂ, ಲಾಕ್‌ಡೌನ್ ಇದ್ದರೂ ಹೊಟ್ಟೆಪಾಡಿಗಾಗಿ ಈ ವ್ಯಾಪಾರಿಗಳು ಬೀದಿಯಲ್ಲೇ ನಿಲ್ಲಬೇಕಾದ ಅನಿವಾರ್ಯ ಇದೆ. ಸೋಂಕಿಗೆ ಹೆದರಿ ವ್ಯಾಪಾರ ನಿಲ್ಲಿಸಿದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ.

ಬೀದಿ ಬದಿಯಲ್ಲಿ ವ್ಯಾಪಾರ ನಡೆಸಲು ಬೆಳಗ್ಗೆ 6ರಿಂದ 10 ಗಂಟೆ ತನಕ ಅವಕಾಶವನ್ನು ಸರ್ಕಾರ ನೀಡಿದೆ. ಬೆಳಿಗ್ಗೆ ಮಾರುಕಟ್ಟೆಗೆ ಹೋಗಿ ತರಕಾರಿ, ಹೂವು, ಹಣ್ಣು ತಂದು ಅವುಗಳನ್ನು ವಿಂಗಡಿಸಿ ಜೋಡಿಸಿಕೊಳ್ಳುವಷ್ಟರಲ್ಲಿ 8 ಗಂಟೆ ದಾಟಲಿದೆ. ಗಡಿಯಾರದ ಮುಳ್ಳು 9 ದಾಟುತ್ತಿದ್ದಂತೆಯೇ ಪೊಲೀಸ್ ಇಲಾಖೆಯ ಗಸ್ತು ವಾಹನಗಳ ಸೈರನ್ ಮೊಳಗಲು ಆರಂಭವಾಗುತ್ತದೆ.

ADVERTISEMENT

‘ಸಾಲ ಮಾಡಿಕೊಂಡು ತಂದ ತರಕಾರಿಯನ್ನು ಮಾರಾಟ ಮಾಡಿ ಅಂದೇ ಸಾಲವನ್ನು ಮರುಪಾವತಿಸಬೇಕು. ಉಳಿದ ಹಣದಲ್ಲಿ ಜೀವನ ನಡೆಸಬೇಕು. ಆದರೆ, ಒಂದೆರಡು ಗಂಟೆಯಲ್ಲಿ ತಂದ ತರಕಾರಿಯನ್ನೆಲ್ಲ ಮಾರಾಟ ಮಾಡಲು ಆಗುವುಲ್ಲ. ಉಳಿದ ತರಕಾರಿಯಲ್ಲಿ ಬಹುತೇಕ ಹಾಳಾಗಿ ಹೋಗುತ್ತದೆ. ಮರುದಿನ ಮಾರಾಟ ಮಾಡೋಣವೆಂದರೆ ಬಾಡಿರುತ್ತವೆ. ಇರುವ ಒಂದೆರಡು ಗಂಟೆ ಅವಕಾಶದಲ್ಲಿ ಎಷ್ಟು ತರಕಾರಿ ತಾನೆ ಮಾರಾಟ ಮಾಡಲು ಸಾಧ್ಯ’ ಎಂದು ವಿಜಯನಗರದ ಬೀದಿ ಬದಿ ವ್ಯಾಪಾರಿ ಬಾಬು ಪ್ರಶ್ನಿಸಿದರು.

‘ತಳ್ಳು ಗಾಡಿಗಳನ್ನು ಬೀದಿ ಬೀದಿಗೆ ತೆಗೆದುಕೊಂಡು ಹೋಗಲು ಸಂಜೆ 6 ಗಂಟೆ ತನಕ ಅವಕಾಶ ಇದೆ. ಆದರೆ, ಬಹುತೇಕ ವ್ಯಾಪಾರಿಗಳು ವಯಸ್ಸಾದವರು, ಮಹಿಳೆಯರೇ ಆಗಿದ್ದಾರೆ. ಈ ಸಾಹಸ ಮಾಡುವುದು ಕಷ್ಟ. ಆದರೂ, ಕೆಲವರು ಹೊಟ್ಟೆಪಾಡಿಗಾಗಿ ಶ್ರಮ ವಹಿಸುತ್ತಿದ್ದಾರೆ. ನಗರದಲ್ಲಿ ಅಲ್ಲಲ್ಲಿ ತಳ್ಳುಗಾಡಿಗಳಿವೆ. ಆದರೆ, ಈಗ ಅವುಗಳನ್ನು ತಳ್ಳಿಕೊಂಡು ಹೋಗುವ ವ್ಯಾಪಾರಿಗಳ ಸಂಖ್ಯೆ ಕಡಿಮೆ. ತಳ್ಳುಗಾಡಿಗಳನ್ನು ನಿಂತಲ್ಲೇ ನಿಲ್ಲಿಸಿಕೊಂಡು ವ್ಯಾಪಾರ ಮಾಡುವವರೇ ಹೆಚ್ಚು. ತಳ್ಳಿಕೊಂಡು ಹೋಗುವ ಸ್ಥಿತಿಯಲ್ಲೂ ಆ ಗಾಡಿಗಳು ಇರುವುದಿಲ್ಲ’ ಎಂದು ವಿವರಿಸಿದರು.

‘ತರಕಾರಿ ಮಾತ್ರವಲ್ಲದೆ ಬೀದಿ ಬದಿಯಲ್ಲಿ ಬಟ್ಟೆ, ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚು. ಅವರಿಗೆ ಒಂದು ತಿಂಗಳಿಂದ ವ್ಯಾಪಾರವೇ ಇಲ್ಲ. ಈ ನಡುವೆ ದಿನಸಿ ಪದಾರ್ಥಗಳ ಬೆಲೆ ದುಪ್ಪಟ್ಟಾಗಿದೆ. ಸರ್ಕಾರ ₹2 ಸಾವಿರ ನೆರವು ನೀಡುವುದಾಗಿ ತಿಳಿಸಿದೆ. ಅದನ್ನು ಪಡೆಯುವುದು ಹೇಗೆ ಎಂಬುದು ಇನ್ನೂ ಗೊತ್ತಿಲ್ಲ. ಕೊಟ್ಟರೂ ಅದು ಯಾವುದಕ್ಕೂ ಸಾಕಾಗದು’ ಎಂದರು.

ಕೋವಿಡ್: ವ್ಯಾಪಾರಿಗಳ ಸರಣಿ ಸಾವು

ಬೀದಿ ಬದಿ ವ್ಯಾಪಾರಿಗಳನ್ನು ಕೋವಿಡ್‌ ಬಿಟ್ಟು ಬಿಡದೆ ಕಾಡುತ್ತಿದೆ. ಗಾಂಧಿ ಬಜಾರ್ ಒಂದರಲ್ಲೇ 10ಕ್ಕೂ ಹೆಚ್ಚು ವ್ಯಾಪಾರಿಗಳು ಎರಡನೇ ಅಲೆಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

‘ಒಂದೇ ಕುಟುಂಬದ ಮೂವರು, ಅತ್ತೆ–ಅಳಿಯನನ್ನು ಕೋವಿಡ್‌ ಬಲಿ ಪಡೆಯಿತು. 39 ವರ್ಷ ವಯಸ್ಸಿನ ವ್ಯಾಪಾರಿಯೊಬ್ಬರು ಪ್ರಾಣ ಕಳೆದುಕೊಂಡರು. ಕೋವಿಡ್‌ಗೆ ಹೆದರಿ ಮನೆಯಲ್ಲಿದ್ದರೆ ಹಸಿವಿನಿಂದ ಸಾಯಬೇಕಾಗುತ್ತದೆ. ಮುನ್ನುಗ್ಗಿ ಬಂದರೆ ಕೋವಿಡ್‌ ಬಿಡುತ್ತಿಲ್ಲ. ಬೀದಿ ಬದಿ ವ್ಯಾಪಾರಿಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ’ ಎಂದು ಗಾಂಧಿ ಬಜಾರ್ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷೆ ವನಜಾ ಹೇಳಿದರು.

‘ಇನ್ನೂ ಸಾಕಷ್ಟು ಮಂದಿ ಸೋಂಕು ತಗುಲಿ ಆಸ್ಪತ್ರೆಯಲ್ಲಿದ್ದಾರೆ. ಚಿಕಿತ್ಸೆ ಪಡೆಯಲು ಹಣ ಇಲ್ಲದೆ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಮನೆಯಲ್ಲಿರುವ ಕುಟುಂಬದ ಸದಸ್ಯರು ಹೊಟ್ಟೆಗೆ ಹಿಟ್ಟಿಲ್ಲದೆ ಪರಿತಪಿಸುತ್ತಿದ್ದಾರೆ. ದಾನಿಗಳು 50 ಜನರಿಗೆ ದಿನಸಿ ಕಿಟ್‌ ನೀಡಿದ್ದಾರೆ’ ಎಂದು ವಿವರಿಸಿದರು.

ಶಿವಾಜಿನಗರದ ವರ್ತಕರ ಕಣ್ಣೀರು

ಶಿವಾಜಿನಗರದ ಬೀದಿ ಬದಿ ವ್ಯಾಪಾರಿಗಳ ಪರಿಸ್ಥಿತಿಯೇ ಬೇರೆ ಇದೆ. ಇಲ್ಲಿ ಬಟ್ಟೆ, ಚಪ್ಪಲಿ, ಚಾಪೆ, ಬೆಲ್ಟ್, ಟೋಪಿ, ಖರ್ಜೂರ, ಇನ್ನಿತರ ತಿನಿಸು ಮಾರಾಟ ಮಾಡಿಕೊಂಡು ಜೀವನ ಮಾಡುವವರೇ ಶೇ 70ರಷ್ಟಿದ್ದಾರೆ.

‘ಬೆಳಗಿನ ವೇಳೆಯೂ ಈ ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲ. ತೆರೆದರೂ ಬಟ್ಟೆ, ಚಪ್ಪಲಿ ಖರೀದಿ ಮಾಡುವ ಮನಸ್ಥಿತಿಯಲ್ಲಿ ಜನರಿಲ್ಲ. ಹೀಗಾಗಿ, ಈ ವ್ಯಾಪಾರಿಗಳ ಕುಟುಂಬಗಳು ಹೊಟ್ಟೆಗಿಲ್ಲದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ’ ಎಂದು ಶಿವಾಜನಗರ ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಜಮೀರ್ ತಿಳಿಸಿದರು.

‘ಅಂದಿನ ದುಡಿಮೆಯೇ ಊಟಕ್ಕೆ ಗತಿಯಾಗಿತ್ತು. ಒಂದು ತಿಂಗಳಿಂದ ದುಡಿಮೆ ಇಲ್ಲ. ಒಂದೊಂದು ಕುಟುಂಬದಲ್ಲಿ 5ರಿಂದ 10 ಜನರಿದ್ದಾರೆ. ಹೊಟ್ಟೆಗಿಲ್ಲದೆ ಪರದಾಡುತ್ತಿದ್ದಾರೆ’ ಎಂದು ವಿವರಿಸಿದರು.

ಪರಿಹಾರಕ್ಕೆ ಒತ್ತಾಯ

‘ಬೀದಿ ಬದಿ ವ್ಯಾಪಾರಿಗಳ ಸ್ಥಿತಿ ಚಿಂತಾಜನಕವಾಗಿದೆ. ಹಲವರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇವರಿಗೆ ನೆರವು ನೀಡಬೇಕು ಎಂಬ ಮನವಿಯನ್ನು ಸರ್ಕಾರ ಪರಿಗಣಿಸಿಯೇ ಇಲ್ಲ’ ಎಂದು ಬೀದಿಬದಿ ವ್ಯಾಪಾರಿಗಳ ಸಂಘಟನೆ ಸದಸ್ಯ ವಿನಯ್‌ ಶ್ರೀನಿವಾಸ್‌ ಹೇಳಿದರು.

‘ಮಾರುಕಟ್ಟೆ ಅಥವಾ ಮನೆಗಳ ಬಳಿ ಕೋವಿಡ್‌ ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು. ಉಚಿತ ಲಸಿಕೆ, ಉಚಿತ ಚಿಕಿತ್ಸೆಗೆ ಆದ್ಯತೆ ನೀಡಬೇಕು. ಕೇರಳ ಮಾದರಿಯಲ್ಲಿ ಪೌಷ್ಠಿಕ ಆಹಾರಕ್ಕೆ ಬೇಕಿರುವ ಎಲ್ಲಾ ಪದಾರ್ಥ ನೀಡಬೇಕು. ಮೇ ಮತ್ತು ಜೂನ್‌ ತಿಂಗಳಿಗೆ ₹10 ಸಾವಿರ ಪರಿಹಾರ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.