
ಕೆ.ಆರ್.ಪುರ: ‘ಮಕ್ಕಳು ತಮ್ಮ ಮೇಲೆ ವಿಶ್ವಾಸವಿಟ್ಟು ಓದಿದರೆ ಅಂದುಕೊಂಡಿದ್ದನ್ನು ಸಾಧಿಸಬಹುದು’ ಎಂದು ಕೆ.ಆರ್.ಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್.ರಾಧಾ ಅಭಿಪ್ರಾಯಪಟ್ಟರು.
ಕೆ.ಆರ್.ಪುರದ ಶ್ರೀವೆಂಕಟೇಶ್ವರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ಹೆಚ್ಚು ಅಂಕಪಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮತ್ತು ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಪ್ರೋತ್ಸಾಹಧನ ವಿತರಿಸಿ ಮಾತನಾಡಿದರು.
‘ಮಕ್ಕಳು ಅಡ್ಡದಾರಿ ಹಿಡಿಯದಂತೆ ಪೋಷಕರು ಮನ ಒಲಿಸಬೇಕು. ಸುಲಭವಾಗಿ ಸಿಕ್ಕಿದ್ದು ಹೆಚ್ಚು ದಿನ ಉಳಿಯುವುದಿಲ್ಲ. ಕಷ್ಟಪಟ್ಟು ಓದಿ ಸಾಧನೆ ಮಾಡಿದರೆ ಸಾಧನೆಗೆ ಬೆಲೆ ಬರುತ್ತದೆ. ಮಕ್ಕಳ ಆಸಕ್ತಿಗನುಗುಣವಾಗಿ ಓದಲು ಅವಕಾಶ ಮಾಡಿಕೊಡಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ವಿ.ಮುನಿಸ್ವಾಮಿ ಮಾತನಾಡಿ, ‘ಕೆಲ ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗಾಗಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ವರ್ಷ ₹2.95 ಲಕ್ಷವನ್ನು 93 ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ’ ಎಂದರು.
ಚಾರ್ಟರ್ಡ್ ಅಕೌಂಟೆಂಟ್ ನವೀನ್ ಕುಮಾರ್, ಕಾಲೇಜು ನಿರ್ದೇಶಕ ಎಂ.ರವಿ, ಆಡಳಿತಾಧಿಕಾರಿ ಪುಟ್ಟರಾಜು, ಪ್ರಾಂಶುಪಾಲ ಜಿ.ಇ.ಪ್ರಕಾಶ್, ಉಪಪ್ರಾಂಶುಪಾಲ ನಾಗಾರ್ಜುನ, ಎಚ್.ಎಂ. ಗೀತಾಂಜಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.