ADVERTISEMENT

ವಿದ್ಯಾರ್ಥಿಯಿಂದ ಅಡ್ಡಾದಿಡ್ಡಿ ಕಾರು ಚಾಲನೆ: ಹೋಟೆಲ್‌ ಕ್ಯಾಷಿಯರ್ ಸಾವು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 14:25 IST
Last Updated 22 ಡಿಸೆಂಬರ್ 2025, 14:25 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಎಚ್‍ಎಸ್‍ಆರ್ ಲೇಔಟ್‍ನಲ್ಲಿ ವಿದ್ಯಾರ್ಥಿಯು ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಪರಿಣಾಮ ಅಪಘಾತ ಸಂಭವಿಸಿ, ಹೋಟೆಲ್‌ನ ಕ್ಯಾಷಿಯರ್‌ ಮೃತಪಟ್ಟಿದ್ದಾರೆ.

ADVERTISEMENT

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸಂತೋಷ್ (28), ಎಚ್‍ಎಸ್‍ಆರ್ ಲೇಔಟ್‍ನ ಹೋಟೆಲ್‍ನಲ್ಲಿ ಕ್ಯಾಷಿಯರ್ ಆಗಿದ್ದರು. ರಾಜೀವ್‍ಗಾಂಧಿ ನಗರದ ಪೇಯಿಂಗ್ ಗೆಸ್ಟ್‌ನಲ್ಲಿ ವಾಸವಾಗಿದ್ದ ಅವರು ಸ್ನೇಹಿತರ ಜತೆ ಊಟ ಮಾಡಿ ಪಿ.ಜಿಗೆ ನಡೆದು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

‘ಎಚ್‍ಎಸ್‍ಆರ್ ಲೇಔಟ್ 7ನೇ ಸೆಕ್ಟರ್‌ನ ಅಬ್ದುಲ್ ರೆಹಮಾನ್ (23) ಎಂಬಾತ ಭಾನುವಾರ ರಾತ್ರಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿಕೊಂಡು ಬಂದು, ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಸಂತೋಷ್‍ಗೆ ಡಿಕ್ಕಿ ಹೊಡೆದು, ಬಳಿಕ ರಸ್ತೆ ಬದಿಯಲ್ಲಿ ನಿಂತಿದ್ದ ಮತ್ತೊಂದು ಕಾರಿಗೂ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ರಭಸಕ್ಕೆ ನಾಲ್ಕೈದು ಅಡಿ ದೂರ ಹೋಗಿ ಬಿದ್ದ ಸಂತೋಷ್‍ಗೆ ತೀವ್ರ ಪೆಟ್ಟಾಗಿ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಿಬಿಎ ವಿದ್ಯಾರ್ಥಿಯಾದ ಅಬ್ದುಲ್ ರೆಹಮಾನ್, ತನ್ನ ತಾಯಿಯ ಕಾರು ಚಾಲನೆ ಮಾಡಿಕೊಂಡು ಬಂದಿದ್ದರು. ಘಟನೆ ನಡೆದಾಗ ಸ್ನೇಹಿತ ಸಹ ಕಾರಿನಲ್ಲಿದ್ದ. ಮದ್ಯ ಕುಡಿದು ಕಾರು ಚಲಾಯಿಸುತ್ತಿದ್ದರೇ ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತದಲ್ಲಿ ಎರಡು ಕಾರುಗಳು ಜಖಂಗೊಂಡಿವೆ. ಎಚ್‍ಎಸ್‍ಆರ್ ಲೇಔಟ್ ಸಂಚಾರ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ, ಕಾರು ಜಪ್ತಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.