ADVERTISEMENT

ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಹೂವಿನ ಹಕ್ಕಿ ನೋವಿಗೆ ಮಿಡಿದ ಹೃದಯ

ರಕ್ಷಣೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2018, 15:44 IST
Last Updated 4 ಸೆಪ್ಟೆಂಬರ್ 2018, 15:44 IST
ಹೂವಿನ ಹಕ್ಕಿ
ಹೂವಿನ ಹಕ್ಕಿ   

ಬೆಂಗಳೂರು: ಹೆಬ್ಬೆರಳಿಗಿಂತ ಸ್ವಲ್ಪ ದೊಡ್ಡ ಗಾತ್ರದ ಹಕ್ಕಿಯದು. ರಸ್ತೆ ಬದಿಯಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದ ಈ ಪುಟ್ಟ ಹೂವಿನ ಹಕ್ಕಿಯ (ಫ್ಲವರ್‌ ಪೆಕ್ಕರ್‌) ರೋದನ ಸ್ಥಳೀಯ ವಿದ್ಯಾರ್ಥಿಯೊಬ್ಬರ ಮನ ಕಲಕಿದೆ. ಅವರ ಪ್ರಯತ್ನದಿಂದಾಗಿ ಆ ಹಕ್ಕಿಯನ್ನು ಮಂಗಳವಾರ ಸಂರಕ್ಷಣೆ ಮಾಡಲಾಯಿತು.

ಪೀಣ್ಯದ ‘ನಮ್ಮ ಮೆಟ್ರೊ’ ನಿಲ್ದಾಣದ ಸಮೀಪ ಸಿಂಗಪುರ ಚೆರ್ರಿ ಮರವೊಂದನ್ನು ಕಡಿಯಲಾಗಿದೆ. ಈ ಮರದಲ್ಲಿ ವಾಸವಿದ್ದ ಹಕ್ಕಿಯೊಂದು ರಸ್ತೆಯಲ್ಲಿ ಬಿದ್ದು ನರಳಾಡುವ ದೃಶ್ಯವನ್ನು ಕಂಡ ವಿದ್ಯಾರ್ಥಿ ಹೇಮಂತ್‌ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದ್ದರು. ಅವರು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಪ್ರಸನ್ನ ಕುಮಾರ್‌ ಅವರ ಮೊಬೈಲ್‌ ಸಂಖ್ಯೆಯನ್ನು ನೀಡಿದ್ದರು. ವಿದ್ಯಾರ್ಥಿಯು ಕರೆ ಮಾಡಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪ್ರಸನ್ನ, ಆ ಹಕ್ಕಿಗೆ ಪ್ರಥಮ ಚಿಕಿತ್ಸೆ ನೀಡಿದರು.

‘ನೆಲೆ ಕಳೆದುಕೊಂಡ ಹಕ್ಕಿ ಗಾಬರಿಗೊಳಗಾಗಿತ್ತು. ಈ ಜಾತಿಯ ಹಕ್ಕಿಗಳು ಹಣ್ಣುಗಳನ್ನು ಮಾತ್ರ ಸೇವಿಸುತ್ತವೆ. ಪಪ್ಪಾಯಿ ಹಣ್ಣನ್ನು ಕಿವುಚಿ, ಗ್ಲೋಕೋಸ್‌ ನೀರಿನ ಜೊತೆ ಮಿಶ್ರಮಾಡಿ ಹಕ್ಕಿಗೆ ಕುಡಿಸಿದೆವು. ಬಳಿಕ ಅದು ಚೇತರಿಸಿಕೊಂಡಿತು. ಹೆಚ್ಚಿನ ಚಿಕಿತ್ಸೆ ಸಲುವಾಗಿ ಅದನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವಶಕ್ಕೆ ಒಪ್ಪಿಸಿದ್ದೇವೆ’ ಎಂದು ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಅತಿ ಸಣ್ಣ ಹಕ್ಕಿ: ‘ವಿಶ್ವದಲ್ಲಿ ಹಮ್ಮಿಂಗ್‌ ಬರ್ಡ್‌ ಅತಿ ಸಣ್ಣ ಹಕ್ಕಿ. ಆದರೆ, ಭಾರತದಲ್ಲಿ ಕಂಡು ಬರುವ ಪಕ್ಷಿಗಳಲ್ಲಿ ಹೂವಿನ ಹಕ್ಕಿ ಅತಿ ಸಣ್ಣ ಗಾತ್ರದ್ದು. ನಗರದಲ್ಲಿ ಅವುಗಳಿಗೆ ನೆಲೆ ಒದಗಿಸುತ್ತಿದ್ದ ಮರಗಳು ಈಗ ಉಳಿದಿಲ್ಲ. ಗಸಗಸೆ ಮರಗಳಲ್ಲಿ (ಸಿಂಗಪುರ ಚೆರ್ರಿ) ಸಾಮಾನ್ಯವಾಗಿ ಇವು ಗೂಡುಕಟ್ಟುತ್ತವೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.