ಬೆಂಗಳೂರು: ನಗರದ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿದ ನವೀನ ವಿಜ್ಞಾನ ಮತ್ತು ತಂತ್ರಜ್ಞಾನ ಸಾಧನಗಳ ‘ರಾಷ್ಟ್ರೀಯ ಮಟ್ಟದ ಸೋಶಿಯಲ್ ಹ್ಯಾಕಥಾನ್-2025’ ಸ್ಪರ್ಧೆ ನಡೆಯಿತು.
ದೇಶದಾದ್ಯಂತ 480 ತಂಡಗಳು ಸ್ಪರ್ಧೆಗೆ ನೋಂದಾಯಿಸಿಕೊಂಡಿದ್ದು, 95 ತಂಡಗಳನ್ನು ತಜ್ಞರ ಸಮಿತಿ ಸ್ಪರ್ಧೆಗೆ ಆಯ್ಕೆ ಮಾಡಿತು.
ಆಯ್ಕೆಯಾದ ತಂಡಗಳಲ್ಲಿ 23 ಹಾರ್ಡ್‌ವೇರ್ ಮತ್ತು 72 ಸಾಫ್ಟ್‌ವೇರ್ ಯೋಜನೆಗಳು (ಪ್ರಾಜೆಕ್ಟ್) ಅಂತಿಮ ಸುತ್ತಿಗೆ ಆಯ್ಕೆಯಾದವು. ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯ, ಸಿಎಂಆರ್ ವಿಶ್ವವಿದ್ಯಾಲಯ, ಮೋಹನ್ ಬಾಬು ವಿಶ್ವವಿದ್ಯಾಲಯ, ನ್ಯಾಷನಲ್ ಪಬ್ಲಿಕ್ ಸ್ಕೂಲ್, ಎಸ್ಆರ್‌ಎಂ ಚೆನ್ನೈ, ಎನ್ಐಟಿ ರಾಯಪುರ್, ವಿಐಟಿ, ಅಮೃತ ವಿಶ್ವವಿದ್ಯಾಪೀಠ, ಅಣ್ಣಾ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿದ್ದವು.
ಹ್ಯಾಕಥಾನ್-2025 ಸ್ಪರ್ಧೆಯಲ್ಲಿ ಪ್ರಮುಖವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತವಾಗಿ ಸಂಶೋಧಿಸಿ ಅಭಿವೃದ್ಧಿಪಡಿಸಿದ ಸಾಧನಗಳು ಗಮನಸೆಳೆದವು. ನ್ಯಾಷನಲ್ ಪಬ್ಲಿಕ್ ಶಾಲೆಯ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಾದ ಜೋಶಿಸ್ ಮತ್ತು ಧ್ರುವ್ ಅಭಿವೃದ್ಧಿಪಡಿಸಿದ್ದ ರಸ್ತೆಯಲ್ಲಿ ಗುಂಡಿಗಳನ್ನು ಪತ್ತೆ ಹಚ್ಚಿ ಅಪಘಾತಗಳನ್ನು ತಡೆಯುವ ‘ಸ್ಮಾರ್ಟ್ ಪಾತ್ ಹೋಲ್ ಪತ್ತೆ ಸಾಧನ’ ಹೆಚ್ಚು ಗಮನ ಸೆಳೆಯಿತು. ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿಗಳು ‘ರಸ್ತೆ ಅಪಘಾತಗಳನ್ನು ತಪ್ಪಿಸಿ ಜೀವಗಳನ್ನು ಉಳಿಸಲು ಮತ್ತು ಸುರಕ್ಷಿತ ನಗರ ಯೋಜನೆ ರೂಪಿಸುವಲ್ಲಿ ಈ ಸಾಫ್ಟ್‌ವೇರ್ ಸಹಾಯ ಮಾಡುತ್ತದೆ’ ಎಂದರು.
ಸೃಜನಾತ್ಮಕ ತಂತ್ರಜ್ಞಾನ ಸಾಧನಗಳಾದ ಮೆಡಿಬ್ರಿಡ್ಜ್, ಭಿನ್ನ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲು ಸಹಾಯಕವಾಗುವ ಸಾಫ್ಟ್‌ವೇರ್, ರೋಗಿಯ ಆರೋಗ್ಯವನ್ನು ನಿರ್ವಹಣೆ ಮಾಡುವ ರಿಮೋಟ್, ಗುಹೆ ಭೂಕಂಪ ಮತ್ತು ಅನಿಲ ಸೋರಿಕೆಗಳನ್ನು ಊಹಿಸುವ ಗಣಿ ಸುರಕ್ಷತಾ ಸಾಧನಗಳು ನೋಡುಗರನ್ನು ಆಕರ್ಷಿಸಿದವು.
ಹ್ಯಾಕಥಾನ್ -2025ರ ಸ್ಪರ್ಧೆಯ ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.