ADVERTISEMENT

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಎಬಿವಿಪಿ ಕಾರ್ಯಕರ್ತರಿಂದ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 16:01 IST
Last Updated 17 ಜುಲೈ 2025, 16:01 IST
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಎದುರು ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಎದುರು ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು    

ಬೆಂಗಳೂರು: ಎಂಜಿನಿಯರಿಂಗ್, ನರ್ಸಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಕಾಲೇಜು ಮತ್ತು ಕೋರ್ಸ್‌ಗಳ ಆಯ್ಕೆ (ಆಪ್ಷನ್‌) ಸಮಯದಲ್ಲೇ ವಿದ್ಯಾರ್ಥಿಗಳಿಗೆ ₹750 ಶುಲ್ಕ ವಿಧಿಸಿರುವುದನ್ನು ವಿರೋಧಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಗೆ ಗುರುವಾರ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.

ಸಿಇಟಿ ಅರ್ಜಿ ಶುಲ್ಕ ಪಾವತಿಸಿದ ಬಳಿಕ ಮತ್ತೆ ಆಯ್ಕೆ ಶುಲ್ಕ ನಿಗದಿಪಡಿಸಿರುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಸರ್ಕಾರಿ ಸೀಟುಗಳಿಗೂ ಹೆಚ್ಚುವರಿ ಹಣ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಮೊದಲ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಕೃಷಿ ಕಾಲೇಜು, ವಿಶ್ವವಿದ್ಯಾಲಯ, ಬಿಎಸ್‌ಸಿ ನರ್ಸಿಂಗ್, ಬಿ ಫಾರ್ಮಾ, ಆರ್ಕಿಟೆಕ್ಟರ್ ಕೋರ್ಸ್‌ಗಳನ್ನು ಆಯ್ಕೆ ನಮೂದಿನಲ್ಲಿ ತೋರಿಸಿಲ್ಲ. ಹಲವು ಕೋರ್ಸ್‌ಗಳನ್ನು ಎರಡು ಅಥವಾ ಮೂರನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಪ್ರಕಟ ಮಾಡಲಾಗಿದೆ. ಆದರೆ, ಈ ಕುರಿತು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗದಿರುವ ಕಾರಣ ಮೊದಲ ಸುತ್ತಿನ ಆಯ್ಕೆಯಲ್ಲಿ ಕಾಲೇಜು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್ ಅಥವಾ ಕಾಲೇಜುಗಳ ಬಗ್ಗೆ ಮಾಹಿತಿ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ADVERTISEMENT

ಬೆಂಗಳೂರು ದಕ್ಷಿಣ ವಿಭಾಗದ ಸಂಚಾಲಕ ಅಭಿನಂದನ್‌ ಮಾತನಾಡಿ, ‘ಪ್ರಾಧಿಕಾರದ ಕೆಲವು ಲೋಪದೋಷಗಳಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸರ್ವರ್ ಸಮಸ್ಯೆ, ಸೀಟು ಹಂಚಿಕೆ ಹಾಗೂ ಇತರೆ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿಜಯನಗರ ಜಿಲ್ಲಾ ಸಂಚಾಲಕ ಸಿ. ಬಸವರಾಜ, ಮಹಾನಗರ ಸಂಘಟನಾ ಕಾರ್ಯದರ್ಶಿ ಮಣಿಕಂಠ ಕಳಸ, ಸಹ ಕಾರ್ಯದರ್ಶಿ ಶಶಾಂಕ್ ಬೋಪಣ್ಣ ಸೇರಿದಂತೆ ಎಬಿವಿಪಿಯ ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಹಲವು ವರ್ಷಗಳಿಂದ ಪ್ರಕ್ರಿಯೆ ಶುಲ್ಕವಿದೆ: ಕೆಇಎ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಲವು ವರ್ಷಗಳಿಂದ ಸಿಇಟಿ ಪ್ರಕ್ರಿಯೆ ಶುಲ್ಕ ₹750 ಸಂಗ್ರಹಿಸುತ್ತಿದೆ. ಇದು ಮೊದಲ ಬಾರಿ ವಿಧಿಸಿದ ಶುಲ್ಕವಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ಪ್ರತಿಕ್ರಿಯಿಸಿದರು. 

‘ಸಿಇಟಿ ಪ್ರಕ್ರಿಯೆ ಶುಲ್ಕವನ್ನೂ ಒಳಗೊಂಡು ಅಭ್ಯರ್ಥಿಗಳು ಕಾಲೇಜು ಶುಲ್ಕ ಪಾವತಿಸುತ್ತಿದ್ದರು. ಈಗ ಕೋರ್ಸ್‌ ಕಾಲೇಜುಗಳ  ಆಯ್ಕೆ ನಮೂದಿಸುವ ವೇಳೆ ಸಂಗ್ರಹಿಸಲಾಗುತ್ತಿದೆ. ಸೀಟ್‌ಬ್ಲಾಕಿಂಗ್‌ ದಂಧೆಗೆ ಕಡಿವಾಣ ಹಾಕಲು ತೆಗೆದುಕೊಂಡ ನಿರ್ಧಾರಗಳಲ್ಲಿ ಇದೂ ಒಂದು ನಿರ್ಧಾರ’ ಎಂದು ಹೇಳಿದರು.  

ಕಳೆದ ವರ್ಷ ಮೊದಲ ಸುತ್ತಿನಲ್ಲಿ ಸೀಟು ಪಡೆದ 16000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯನ್ನೇ ನಮೂದಿಸಲಿಲ್ಲ. ಕೆಇಎ ತೆಗೆದುಕೊಂಡ ಇಂತಹ ನಿರ್ಧಾರದಿಂದ ಆಸಕ್ತ ವಿದ್ಯಾರ್ಥಿಗಳು ಮಾತ್ರ ಆಯ್ಕೆಗಳನ್ನು ನಮೂದಿಸುತ್ತಾರೆ. ಆರಂಭದಲ್ಲೇ ಶುಲ್ಕ ಪಾವತಿಸುವ ಕಾರಣ ಯಾರಾದರೂ ಸೀಟು ಬ್ಲಾಕ್‌ ಮಾಡಲು ಪ್ರಯತ್ನಿಸಿದರೆ ಬ್ಯಾಂಕ್‌ ಖಾತೆ ವಿವರಗಳ ಆಧಾರದ ಮೇಲೆ ಪೊಲೀಸರು ಪತ್ತೆ ಮಾಡಲು ಸಹಾಯವಾಗುತ್ತದೆ ಎಂದು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.