ADVERTISEMENT

ಅಧಿಕಾರಿಗಳ ಜತೆಗೆ ಮತ್ತೆ ಸಭೆ

ಉಪನಗರ ರೈಲು ಯೋಜನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 19:50 IST
Last Updated 3 ಜನವರಿ 2019, 19:50 IST
   

ಬೆಂಗಳೂರು: ನಗರದಲ್ಲಿ ಉಪನಗರ ರೈಲು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇರುವ ಗೊಂದಲಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತೊಂದು ಸಭೆ ನಡೆಸಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚಿಸಿದರು.

ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನೈರುತ್ಯ ರೈಲ್ವೆಯು ಯೋಜನೆಯ ವಿಸ್ತೃತ ಯೋಜನಾ ವರದಿಯ (ಡಿಪಿಆರ್‌) ಕರಡನ್ನು ರಾಜ್ಯ ಸರ್ಕಾರಕ್ಕೆ 2018ರ ಡಿಸೆಂಬರ್ 4ರಂದು ಸಲ್ಲಿಸಿದೆ. ಅದಕ್ಕೆ ಜನವರಿ 6ರೊಳಗೆ ಒಪ್ಪಿಗೆ ನೀಡಲಾಗುತ್ತದೆ. ಫೆಬ್ರುವರಿಯಲ್ಲಿ ಮಂಡಿಸುವ ರಾಜ್ಯ ಬಜೆಟ್‌ನಲ್ಲಿ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿಡಲಾಗುತ್ತದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ADVERTISEMENT

ರೈಲ್ವೆ ಇಲಾಖೆಯ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಅವರು, ಉಪನಗರ ರೈಲು ಹಾಗೂ ಮೆಟ್ರೊ ಓವರ್‌ಲ್ಯಾಪ್‌ ಆಗುವ ಪ್ರದೇಶಗಳಿಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳ ಜತೆಗೆ ಚರ್ಚಿಸಬೇಕು ಎಂದರು.

ರೈಲ್ವೆಯ ಇಲಾಖೆಯ ಅಧಿಕಾರಿಗಳು, ‘ಡಿಪಿಆರ್‌ಗೆ ರಾಜ್ಯ ಸರ್ಕಾರ ಆದಷ್ಟು ಬೇಗ ಅನುಮೋದನೆ ನೀಡಬೇಕು. ಜಾಗ ಇರುವ ಕಡೆಗಳಲ್ಲಿ ಯೋಜನೆಗೆ ಉಚಿತವಾಗಿ ಜಾಗ ನೀಡಲು ಸಿದ್ಧರಿದ್ದೇವೆ’ ಎಂದರು.

‘ಬೆಂಗಳೂರು ನಗರದೊಳಗೆ ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಇಷ್ಟಕ್ಕೆ ಸೀಮಿತವಾಗಬಾರದು. ತುಮಕೂರು, ಮಂಡ್ಯಕ್ಕೂ ಈ ಯೋಜನೆ ವಿಸ್ತರಣೆಯಾಗಬೇಕು’ ಎಂದು ಅವರು ಪ್ರತಿಪಾದಿಸಿದರು.

ಕೇಂದ್ರ ಸರ್ಕಾರವು ಕಳೆದ ವರ್ಷ ಬಿಡುಗಡೆ ಮಾಡಿದ್ದ ಹೊಸ ಉಪನಗರ ರೈಲು ನೀತಿಯ ಪ್ರಕಾರ ಒಟ್ಟು ಯೋಜನಾ ವೆಚ್ಚದಲ್ಲಿ ಶೇ 80ರಷ್ಟು ಅನುದಾನ ಹೊಂದಿಸುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ಕೇಂದ್ರ ಸರ್ಕಾರ ಶೇ 20ರಷ್ಟು ಹೂಡಿಕೆ ಮಾಡಲಿದೆ.

ಕೇಂದ್ರ ಸರ್ಕಾರ ಯೋಜನೆಯ ಶೇ 50ರಷ್ಟು ಪಾಲನ್ನು ಭರಿಸಬೇಕು ಎಂದು ರಾಜ್ಯ ಸರ್ಕಾರ ಒತ್ತಾಯಿಸಿತ್ತು. ಇದಕ್ಕೆ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರು ಮೇ ತಿಂಗಳಲ್ಲಿ ಒಪ್ಪಿಗೆ ಸೂಚಿಸಿದ್ದರು. ವಿಶೇಷ ಉದ್ದೇಶದ ಘಟಕದಲ್ಲಿ (ಎಸ್‌ಪಿವಿ) ರೈಲ್ವೆ ಇಲಾಖೆ ಶೇ 49 ಹಾಗೂ ಕರ್ನಾಟಕ ಸರ್ಕಾರ ಶೇ 51ರ ಪಾಲುದಾರಿಕೆ ಹೊಂದಿರುತ್ತವೆ.

ಈ ಯೋಜನೆಯಡಿ ನಗರ ವ್ಯಾಪ್ತಿಯಲ್ಲಿರುವ 444 ಕಿ.ಮೀ. ರೈಲ್ವೆ ಮಾರ್ಗದ ಸದ್ಬಳಕೆಯೊಂದಿಗೆ, ಕೆಲವೆಡೆ ವಿಸ್ತರಣೆ, ಆಟೋಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆ ಹಾಗೂ ರೈಲ್ವೆ ಮಾರ್ಗಗಳ ವಿದ್ಯುದೀಕರಣದ ಮೂಲಕ ಉಪನಗರ ರೈಲು ಸೌಲಭ್ಯ ಕಲ್ಪಿಸಲಾಗುತ್ತದೆ. ಇದರಿಂದ ನಗರದಲ್ಲಿ ತ್ವರಿತ ಸಂಚಾರಕ್ಕೆ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ.

ಈ ಯೋಜನೆಗೆ ₹17,000 ಕೋಟಿ ಕಾದಿರಿಸಿದ್ದೇವೆ ಎಂದು ಬಜೆಟ್‌ ಭಾಷಣದಲ್ಲಿ ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದರು. ಆದರೆ, ರೈಲ್ವೆ ಪಿಂಕ್‌ ಬುಕ್‌ನಲ್ಲಿರುವ ಮಾಹಿತಿ ಪ್ರಕಾರ ಈ ಯೋಜನೆಗೆ ₹ 12,061 ಕೋಟಿ ಅನುದಾನ ಮೀಸಲಿಡಲಾಗಿದೆ. ಇದಕ್ಕೆ ಸಾಂಕೇತಿಕವಾಗಿ ₹ 1 ಕೋಟಿ ಅನುದಾನ ಕಾದಿರಿಸಲಾಗಿದೆ.

ರೈಟ್ಸ್‌ ಸಂಸ್ಥೆಯ ಅಧ್ಯಯನ ವರದಿಯಲ್ಲಿ ಶಿಫಾರಸು ಮಾಡಿರುವ ಪ್ರಕಾರ ನಗರದಲ್ಲಿ ಉಪನಗರ ರೈಲು ಯೋಜನೆಯ ಉದ್ದ 141 ಕಿ.ಮೀ. ಇದರ ಜೊತೆಗೆ ಕಂಟೋನ್ಮೆಂಟ್‌ ಮತ್ತು ವೈಟ್‌ಫೀಲ್ಡ್‌ ನಡುವಿನ 19 ಕಿ.ಮೀ ಉದ್ದದ ಮಾರ್ಗವನ್ನು ನಾಲ್ಕು ಹಳಿಗಳ ಮಾರ್ಗವನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ.

‘ಕೇಂದ್ರ ಬಜೆಟ್‌ಗೆ ಮುನ್ನ ಪರಿಹಾರ’

ಉಪನಗರ ರೈಲು ಯೋಜನೆ ಬಗ್ಗೆ ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆಗೆ ಇರುವ ಗೊಂದಲಗಳನ್ನು ಕೇಂದ್ರ ಬಜೆಟ್‌ಗೆ ಮುನ್ನ ಪರಿಹರಿಸಲಾಗುತ್ತದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ್‌ ತಿಳಿಸಿದರು.

‘ಈ ಯೋಜನೆಗೆ 2019–20ರಿಂದಲೇ ಅನುದಾನ ಪಡೆಯಲು ರಾಜ್ಯ ಸರ್ಕಾರ ಉತ್ಸುಕವಾಗಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

160.5 ಕಿ.ಮೀ.

ಉಪನಗರ ರೈಲಿನ ಉದ್ದ

₹19,499 ಕೋಟಿ

ಯೋಜನೆಯ ಅಂದಾಜು ವೆಚ್ಚ

ಮಾರ್ಗಗಳು

ಕೆಂಗೇರಿ–ವೈಟ್‌ಫೀಲ್ಡ್‌: 35.47 ಕಿ.ಮೀ.

ಕೆಎಸ್‌ಆರ್‌ ರೈಲು ನಿಲ್ದಾಣ–ರಾಜಾನುಕುಂಟೆ: 24.88 ಕಿ.ಮೀ

ನೆಲಮಂಗಲ–ಬೈಯಪ್ಪನಹಳ್ಳಿ: 38.94 ಕಿ.ಮೀ

ಹೀಲಳಿಗೆ–ದೇವನಹಳ್ಳಿ: 61.21 ಕಿ.ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.