ADVERTISEMENT

ಸುಬ್ರಹ್ಮಣ್ಯ ನಗರ: ಸರ್ಕಾರಿ ಶಾಲೆ ಉದ್ಘಾಟನೆ

ಸಚಿವ ಸಿ.ಎನ್. ಅಶ್ವತ್ಥನಾರಾಯಣ ಕೆಲಸಕ್ಕೆ ನಟ ರಿಷಭ್‌ ಶೆಟ್ಟಿ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 20:55 IST
Last Updated 19 ಮಾರ್ಚ್ 2023, 20:55 IST
ಸುಬ್ರಹ್ಮಣ್ಯ ನಗರದಲ್ಲಿ ನಿರ್ಮಿಸಿರುವ ನೂತನ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.
ಸುಬ್ರಹ್ಮಣ್ಯ ನಗರದಲ್ಲಿ ನಿರ್ಮಿಸಿರುವ ನೂತನ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.   

ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಬ್ರಹ್ಮಣ್ಯ ನಗರದಲ್ಲಿ ನಿರ್ಮಿಸಿರುವ ನೂತನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಭಾನುವಾರ ಉದ್ಘಾಟಿಸಲಾಯಿತು.

ನಂತರ ಮಾತನಾಡಿದ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ, ‘ ಸಚಿವ ಅಶ್ವತ್ಥನಾರಾಯಣ ಅವರು ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಸರ್ಕಾರಿ ಶಾಲೆಗಳು ಇರುವಂತೆ ನೋಡಿಕೊಂಡಿದ್ದಾರೆ. ಇದು ನಿಜಕ್ಕೂ ದೇವರ ಕೆಲಸವಾಗಿದೆ. ಇಲ್ಲಿರುವ ಮೂಲಸೌಕರ್ಯಗಳನ್ನು ನೋಡಿ ನಾನು ಚಕಿತನಾಗಿದ್ದೇನೆ’ ಎಂದು ಅವರು ಹೇಳಿದರು.

‘ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ತಾತ್ಸಾರವಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳೇ ಹೆಚ್ಚು ಪ್ರತಿಭಾವಂತರು ಎನ್ನುವುದು ಎಲ್ಲ ಸಮೀಕ್ಷೆಗಳಲ್ಲೂ ಸಾಬೀತಾಗಿದೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಮಾತನಾಡಿ, ‘ಧರ್ಮವು ಉಳಿದರೆ ಮಾತ್ರ ರಾಷ್ಟ್ರವು ಉಳಿಯುತ್ತದೆ. ಕಳೆದ ಎಂಟು ವರ್ಷಗಳಲ್ಲಿ ಭಾರತದ ಶಕ್ತಿ ಏನೆಂಬುದು ಜಗತ್ತಿಗೆ ಗೊತ್ತಾಗಿದೆ. ನಮ್ಮ ಮಲ್ಲೇಶ್ವರ ಮಾದರಿಯಲ್ಲಿ ನಮ್ಮ ಸುಬ್ರಹ್ಮಣ್ಯ ನಗರ ಕೂಡ ಸೇರಿಕೊಂಡಿದೆ’ ಎಂದು ಅವರು ತಿಳಿಸಿದರು.

ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ‘ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿ ಇದು 24ನೇ ಸರ್ಕಾರಿ ಶಾಲೆಯಾಗಿದೆ. ಸದ್ಯದಲ್ಲೇ ಇಲ್ಲಿಂದ ಕೂಗಳತೆ ದೂರದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಲಾಗುವುದು’ ಎಂದು ಅವರು ಹೇಳಿದರು.

‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋಧನೆ ಮತ್ತು ಕಲಿಕೆಯ ಜೊತೆಗೆ ಡಿಜಿಟಲೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಇಲ್ಲಿನ ಕಲಿಕೆಯು ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ’ ಎಂದು ಅವರು
ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಮಲ್ಲೇಶ್ವರ ಬಿಜೆಪಿ ಮಂಡಲ ಅಧ್ಯಕ್ಷೆ ಕಾವೇರಿ ಕೇದಾರನಾಥ್, ಶಿಕ್ಷಣ ಫೌಂಡೇಶನ್ ಸಂಸ್ಥಾಪಕ ಪ್ರಸನ್ನ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.