ADVERTISEMENT

ವಿಶೇಷ ಉದ್ದೇಶದ ಘಟಕಕ್ಕೆ ಅನುಮೋದನೆ

ಉಪನಗರ ರೈಲು ಯೋಜನೆ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 19:51 IST
Last Updated 3 ಜುಲೈ 2019, 19:51 IST
   

ಬೆಂಗಳೂರು:ಉಪನಗರ ರೈಲು ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಸ್ಥಾಪಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಆದರೆ, ‍ಪ್ರಸ್ತಾವದಲ್ಲಿ ಕೋರಲಾಗಿದ್ದಂತೆ ಉನ್ನತ ಅಧಿಕಾರ ನೀಡಲು ಸರ್ಕಾರ ನಿರಾಕರಿಸಿದೆ.

‘ಸಹಭಾಗಿತ್ವ ಒಪ್ಪಂದಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅನುಮೋದನೆ ನೀಡಿದ್ದಾರೆ. ಈ ಕುರಿತು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆ–ರೈಡ್‌) ಅಧಿಕಾರಿ ಸಿರ್ರಾ ಗಗರಿನ್‌ ಅವರಿಗೆ ಪತ್ರ ಬರೆಯಲಾಗಿದ್ದು, ಎಸ್‌ಪಿವಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸುವಂತೆ ಹೇಳಲಾಗಿದೆ’ ಎಂದುಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ತಿಳಿಸಿದ್ದಾರೆ.

ಕಾನೂನು, ಹಣಕಾಸು ಇಲಾಖೆಗಳ ಅಭಿಪ್ರಾಯ ಪಡೆದು ಮುಂದುವರಿಯುವಂತೆಯೂ ಕೆ–ರೈಡ್‌ಗೆ ಪತ್ರದಲ್ಲಿ ತಿಳಿಸಲಾಗಿದೆ.

ADVERTISEMENT

‘ಹಣಕಾಸು ಕುರಿತು ನಿರ್ಧರಿಸುವ ಅಧಿಕಾರ ಇಲ್ಲದ ಕಾರಣ ಮತ್ತು ಪ್ರತಿ ಹಂತದಲ್ಲಿಯೂ ಅನುಮತಿ ಪಡೆಯಬೇಕಾದ್ದರಿಂದ, ₹17,000 ಕೋಟಿ ಮೊತ್ತದ ಎಸ್‌ಪಿವಿ ನಿರ್ಮಾಣ ಕಾರ್ಯ ವಿಳಂಬವಾಗಬಹುದು ಎಂದು ಮೂಲಗಳು ಹೇಳಿವೆ.

‘ಯೋಜನೆ ತ್ವರಿತವಾಗಿ ಅನುಷ್ಠಾನಗೊಳ್ಳಬೇಕೆಂದರೆ ಪ್ರಧಾನಮಂತ್ರಿ ಸಚಿವಾಲಯ ಮಧ್ಯ ಪ್ರವೇಶಿಸಿ, ಎಲ್ಲ ಷರತ್ತುಗಳನ್ನು ಹಿಂತೆಗೆದುಕೊಳ್ಳಬೇಕು’ ಎಂದು ರೈಲ್ವೆ ಹೋರಾಟಗಾರ ಸಂಜೀವ್‌ ದ್ಯಾಮಣ್ಣವರ ಹೇಳಿದರು.

ಮತ್ತೊಮ್ಮೆ ಡಿಪಿಆರ್‌ಗೆ ಸೂಚನೆ

ಉಪನಗರ ರೈಲು ಯೋಜನೆಗೆ ಮತ್ತೊಮ್ಮೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಹೊಸ ಡಿಪಿಆರ್‌ ಸಿದ್ಧಪಡಿಸುವಂತೆ ರೈಲ್ ಇಂಡಿಯಾ ಟೆಕ್ನಿಕಲ್ ಎಕನಾಮಿಕಲ್ ಸರ್ವೀಸ್‌ಗೆ (ರೈಟ್ಸ್‌) ಸೂಚನೆ ನೀಡಿದೆ.

161 ಕಿ.ಮೀ ರೈಲು ಮಾರ್ಗದ ಯೋಜನೆಗೆ ರೈಟ್ಸ್‌ ಸಂಸ್ಥೆ ಡಿಪಿಆರ್‌ ಸಿದ್ಧಪಡಿಸಿದೆ. ನಮ್ಮ ಮೆಟ್ರೊ ಮಾರ್ಗ ಮತ್ತು ನಿಲ್ದಾಣಗಳಿಗೆ ತೊಂದರೆ ಆಗದಂತೆ ಯೋಜನೆ ಜಾರಿಗೊಳಿಸಬೇಕಿರುವ ಹಿನ್ನೆಲೆಯಲ್ಲಿ ಡಿಪಿಆರ್ ಬದಲಾವಣೆಗೆ ಸೂಚಿಸಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.