ADVERTISEMENT

ಉಪನಗರ ರೈಲು: 268 ಮರಗಳಿಗೆ ಕೊಡಲಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 0:15 IST
Last Updated 29 ಡಿಸೆಂಬರ್ 2022, 0:15 IST
   

ಬೆಂಗಳೂರು: ಚಿಕ್ಕಬಾಣಾವರ–ಬೈಯಪ್ಪನಹಳ್ಳಿ ನಡುವಿನ ‘ಸಂಪಿಗೆ’ ಕಾರಿಡಾರ್ ಸಿವಿಲ್ ಕಾಮಗಾರಿ ಆರಂಭಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ( ಕೆ–ರೈಡ್) ಸಿದ್ಧತೆ ಆರಂಭಿಸಿದ್ದು, ಈ ಮಾರ್ಗಕ್ಕೆ 268 ಮರಗಳು ಬಲಿಯಾಗಲಿವೆ.

661 ಮರಗಳನ್ನು ಕಡಿಯಲು ಕೆ–ರೈಡ್ ಅನುಮತಿ ಕೋರಿತ್ತು. ಆದರೆ, 268 ಮರಗಳನ್ನು ಮಾತ್ರ ಕಡಿಯಲು ಬಿಬಿಎಂಪಿ ಅನುಮತಿ ನೀಡಿದೆ. 661 ಮರಗಳಲ್ಲಿ ಈ ರೈಲು ಮಾರ್ಗಕ್ಕೆ ಅಗತ್ಯವಾಗಿ 315 ಮರಗಳು ತೆಗೆಯಲೇಬೇಕಾಗುತ್ತದೆ. ಆದರೆ, ಇವುಗಳ ಪೈಕಿ 58 ಮರಗಳನ್ನು ಸ್ಥಳಾಂತರಿಸಲು ಸಾಧ್ಯವಿದೆ ಎಂದು ಬಿಬಿಎಂಪಿ ಅಂದಾಜಿಸಿದೆ.

ಆದ್ದರಿಂದ 268 ಮರಗಳನ್ನು ಮಾತ್ರ ಅನುಮತಿಸಿ ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಮಾರ್ಗದ ಕಾಮಗರಿಯನ್ನು ‌ಎಲ್‌ ಆ್ಯಂಡ್ ಟಿ ಕಂಪನಿ ಗುತ್ತಿಗೆ ಪಡೆದುಕೊಂಡಿದೆ. ಹೆಬ್ಬಾಳ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಕಾಮಗಾರಿ ಆರಂಭಿಸಲು ತಯಾರಿ ನಡೆಸುತ್ತಿದೆ. ಸದ್ಯದಲ್ಲೇ ಸಿವಿಲ್ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.

ADVERTISEMENT

ಕೆ–ರೈಡ್ ಮೊದಲ ಹಂತದಲ್ಲಿ ಕೈಗೆತ್ತಿಕೊಂಡಿರುವ ಚಿಕ್ಕಬಾಣಾವರ–ಬೈಯಪ್ಪನಹಳ್ಳಿ ನಡುವೆ 25 ಕಿ.ಮೀ. ಮಾರ್ಗದಲ್ಲಿ 9.72 ಕಿ. ಮೀ. ಎತ್ತರಿಸಿದ ಮಾರ್ಗ ನಿರ್ಮಾಣವಾಗಲಿದೆ. 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸಮಯ ನಿಗದಿ ಮಾಡಲಾಗಿದೆ. ಈ ಮಾರ್ಗದಲ್ಲಿ 14 ನಿಲ್ದಾಣಗಳು ನಿರ್ಮಾಣವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.