ADVERTISEMENT

ನಗರದಲ್ಲಿ ದಿಢೀರ್ ಮಳೆ: ತಂಪಾದ ಇಳೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 21:02 IST
Last Updated 14 ಏಪ್ರಿಲ್ 2021, 21:02 IST
ಗಂಗಾನಗರದ ಬಳಿಯ ಬಳ್ಳಾರಿ ರಸ್ತೆಯಲ್ಲಿ ಮಳೆ ನೀರಿನಲ್ಲಿ ವಾಹನಗಳು ಸಂಚರಿಸುತ್ತಿದ್ದ ದೃಶ್ಯ ಬುಧವಾರ ಕಂಡು ಬಂತು –ಪ್ರಜಾವಾಣಿ ಚಿತ್ರ
ಗಂಗಾನಗರದ ಬಳಿಯ ಬಳ್ಳಾರಿ ರಸ್ತೆಯಲ್ಲಿ ಮಳೆ ನೀರಿನಲ್ಲಿ ವಾಹನಗಳು ಸಂಚರಿಸುತ್ತಿದ್ದ ದೃಶ್ಯ ಬುಧವಾರ ಕಂಡು ಬಂತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೇಸಿಗೆ ಧಗೆಯಿಂದ ತತ್ತರಿಸುತ್ತಿದ್ದ ಉದ್ಯಾನನಗರದಲ್ಲಿ ಬುಧವಾರ ಸಂಜೆ ದಿಢೀರ್‌ ಮಳೆಯಾಯಿತು. ಬೆಳಿಗ್ಗೆ ಬಿಸಿಲು ಕಂಡಿದ್ದ ನಗರದಲ್ಲಿ ಸಂಜೆ ವೇಳೆಗೆ ತಂಪಾದ ವಾತಾವರಣ ಆವರಿಸಿತ್ತು.

ನಗರದಲ್ಲಿ ಎಂದಿನಂತೆ ಮಧ್ಯಾಹ್ನದವರೆಗೆ ಬಿಸಿಲಿತ್ತು. ಬಳಿಕ ದಿಢೀರ್ ಮೋಡ ಕವಿದು ಸಂಜೆ ಮಳೆಯ ಸಿಂಚನವಾಯಿತು. ನಗರದ ಕೆಲವು ಕಡೆ ಸಾಧಾರಣ ಮಳೆ ಸುರಿಯಿತು.ಸಂಜೆ 4ರಿಂದ 7 ಗಂಟೆಯವರೆಗೆ ಆಗಾಗ ಮಳೆ ಸುರಿದ ಪರಿಣಾಮ ಹಲವು ರಸ್ತೆಗಳಲ್ಲಿ ನೀರು ಹರಿಯಿತು.

ಎಂ.ಜಿ.ರಸ್ತೆ, ಬಳ್ಳಾರಿ ರಸ್ತೆ, ಹೆಬ್ಬಾಳ, ಯಲಹಂಕ, ಕೆಂಪೇಗೌಡ ಬಸ್‌ ನಿಲ್ದಾಣ, ಶೇಷಾದ್ರಿಪುರ, ಶಿವಾನಂದ ವೃತ್ತ, ಸಂಜಯನಗರ, ಕೆಂಗೇರಿ, ಹುಳಿಮಾವು, ಕೋರಮಂಗಳ, ದೊಮ್ಮಲೂರು, ಮೈಸೂರು ರಸ್ತೆ ಸೇರಿಂದತೆ ಹಲವೆಡೆ ಜೋರು ಮಳೆಯಾಯಿತು.

ADVERTISEMENT

ಜಾರಿಬಿದ್ದ ಸವಾರರು: ಗಾಳಿ ಸಹಿತ ಮಳೆಗೆ ಕೆ.ಜಿ.ರಸ್ತೆಯ ಕಂದಾಯ ಭವನದ ಬಳಿ ಕೆಲ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದರು. ಕೆಲ ಸವಾರರಿಗೆ ಸಣ್ಣಪುಟ್ಟ ಗಾಯಗಳೂ ಆದವು. ಇದರಿಂದ ಕೆ.ಜಿ.ರಸ್ತೆಯಲ್ಲಿ ಕೆಲಕಾಲ ವಾಹನ ದಟ್ಟಣೆಯಾಗಿತ್ತು.ಕೂಡಲೇ ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ‘ಈ ರಸ್ತೆಯ ಎರಡೂ ಬದಿ ಮರದಲ್ಲಿರುವ ಕಾರ್ಕ್‌ ಕಾಯಿಗಳು ಮಳೆಗೆ ರಸ್ತೆ ಮೇಲೆ ಬಿದ್ದಿದ್ದವು. ಇವು ತೇವಗೊಂಡಾಗ ನೊರೆ ಉಂಟು ಮಾಡುತ್ತವೆ. ಕ್ರಮೇಣ ಜಾರಿಕೆಯಾಗುತ್ತದೆ. ವಾಹನ ಸವಾರರು ವೇಗವಾಗಿ ಬಂದ ಪರಿಣಾಮ ಜಾರಿ ಬಿದ್ದಿದ್ದಾರೆ’ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ತಿಳಿಸಿದರು.

ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಗುರುವಾರ ಸಹ ನಗರದಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.