ADVERTISEMENT

ರಾಜ್ಯಸಭಾ ಸದಸ್ಯೆ ಸುಧಾಮೂರ್ತಿಗೆ ಬೆದರಿಕೆ: ವೈಯಕ್ತಿಕ ಮಾಹಿತಿ ಕಳವು ಮಾಡಲು ಯತ್ನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 15:26 IST
Last Updated 22 ಸೆಪ್ಟೆಂಬರ್ 2025, 15:26 IST
ಸುಧಾ ಮೂರ್ತಿ  
ಸುಧಾ ಮೂರ್ತಿ     

ಬೆಂಗಳೂರು: ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರಿಗೆ ಸೈಬರ್ ವಂಚಕರು ಕರೆ ಮಾಡಿ ವೈಯಕ್ತಿಕ ಮಾಹಿತಿ ಕಳವು ಮಾಡಲು ಪ್ರಯತ್ನಿಸಿ ಬೆದರಿಕೆ ಹಾಕಿದ್ದು ಈ ಸಂಬಂಧ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣಪತಿ ಎಂಬವರು ನೀಡಿದ ದೂರು ಆಧರಿಸಿ ಸೈಬರ್‌ ವಂಚಕರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66(ಸಿ), 66(ಡಿ) ಹಾಗೂ 84(ಸಿ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್ ಅಪರಾಧ ವಿಭಾಗದ ಪೊಲೀಸರು ಹೇಳಿದರು.

ಸೆ.5ರಂದು ಬೆಳಿಗ್ಗೆ 9.40ರ ಸುಮಾರಿಗೆ ಸುಧಾಮೂರ್ತಿ ಅವರಿಗೆ ಕರೆಯೊಂದು ಬಂದಿತ್ತು. ಕರೆ ಮಾಡಿದ್ದ ವ್ಯಕ್ತಿ ತಾನು ಕೇಂದ್ರ ಸರ್ಕಾರದ ದೂರಸಂಪರ್ಕ ಸಚಿವಾಲಯದ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ. ಜನವರಿಯಲ್ಲಿ ಆಧಾರ್‌ ಲಿಂಕ್ ಮಾಡದೇ ನೋಂದಾಯಿಸಲಾಗಿದೆ ಎಂದು ಸುಳ್ಳು ಹೇಳಿ ವೈಯಕ್ತಿಕ ಮಾಹಿತಿ ಪಡೆಯಲು ಯತ್ನಿಸಿದ್ದ. ಅಲ್ಲದೇ, ಸುಧಾಮೂರ್ತಿ ಅವರ ಮೊಬೈಲ್‌ ಸಂಖ್ಯೆಯಿಂದ ಅಶ್ಲೀಲ ವಿಡಿಯೊ ಕಳುಹಿಸಲಾಗುತ್ತಿದೆ. ಮೊಬೈಲ್‌ ಸಂಪರ್ಕವನ್ನು ಸ್ಥಗಿತ ಮಾಡಲಾಗುವುದು ಎಂಬುದಾಗಿ ಬೆದರಿಕೆ ಹಾಕಿದ್ದ ಎಂದು ಗಣಪತಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ADVERTISEMENT

ಕರೆ ಮಾಡಿದ್ದ ವ್ಯಕ್ತಿ ಅಸಭ್ಯವಾಗಿ ಮಾತನಾಡಿದ್ದ. ಟ್ರೂ ಕಾಲರ್‌ನಲ್ಲಿ ‘ಟೆಲಿಕಾಂ ಡಿಪಾರ್ಟ್‌ಮೆಂಟ್’ ಎಂದು ತೋರಿಸುತ್ತಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.