ADVERTISEMENT

’ಸುಧಾಮೂರ್ತಿ ಸಮಾಜಮುಖಿ ಕಾರ್ಯ ಶ್ಲಾಘನೀಯ‘

‘ಜೆಸ್ಟಿಸ್‌ ಕೆ.ಎಸ್‌.ಹೆಗ್ಡೆ ಚಾರಿಟಬಲ್ ಪ್ರತಿಷ್ಠಾನ ಪ್ರಶಸ್ತಿʼ ಪ್ರದಾನ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 20:07 IST
Last Updated 12 ಜೂನ್ 2025, 20:07 IST
ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರಿಗೆ ‘ಜೆಸ್ಟಿಸ್‌ ಕೆ.ಎಸ್‌.ಹೆಗ್ಡೆ ಚಾರಿಟಬಲ್‌ ಪ್ರತಿಷ್ಠಾನದ ಪ್ರಶಸ್ತಿ-2025‘ ನೀಡಿ ಗೌರವಿಸಲಾಯಿತು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್‌.ವಿನಯ್‌ ಹೆಗ್ಡೆ, ಲೋಕಾಯುಕ್ತ ನಿವೃತ್ತ ನ್ಯಾಯಾಧೀಶ ಎನ್‌.ಸಂತೋಷ್‌ ಹೆಗ್ಡೆ, ನಿಟ್ಟೆ ಶಿಕ್ಷಣಸಂಸ್ಥೆಯ ಹಿರಿಯ ಸಲಹೆಗಾರ ಡಾ.ಎನ್‌.ಆರ್‌.ಶೆಟ್ಟಿ ಇತರರು ಇದ್ದರು.
ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರಿಗೆ ‘ಜೆಸ್ಟಿಸ್‌ ಕೆ.ಎಸ್‌.ಹೆಗ್ಡೆ ಚಾರಿಟಬಲ್‌ ಪ್ರತಿಷ್ಠಾನದ ಪ್ರಶಸ್ತಿ-2025‘ ನೀಡಿ ಗೌರವಿಸಲಾಯಿತು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್‌.ವಿನಯ್‌ ಹೆಗ್ಡೆ, ಲೋಕಾಯುಕ್ತ ನಿವೃತ್ತ ನ್ಯಾಯಾಧೀಶ ಎನ್‌.ಸಂತೋಷ್‌ ಹೆಗ್ಡೆ, ನಿಟ್ಟೆ ಶಿಕ್ಷಣಸಂಸ್ಥೆಯ ಹಿರಿಯ ಸಲಹೆಗಾರ ಡಾ.ಎನ್‌.ಆರ್‌.ಶೆಟ್ಟಿ ಇತರರು ಇದ್ದರು.   

ಯಲಹಂಕ: ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರಿಗೆ 2025ನೇ ಸಾಲಿನ ‘ಜೆಸ್ಟಿಸ್‌ ಕೆ.ಎಸ್‌.ಹೆಗ್ಡೆ ಚಾರಿಟಬಲ್‌ ಪ್ರತಿಷ್ಠಾನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್‌.ವಿನಯ್‌ ಹೆಗ್ಡೆ, ‘ಸುಧಾಮೂರ್ತಿ ಅವರು, ಯುವಸಮುದಾಯಕ್ಕೆ ಮಾರ್ಗದರ್ಶಕರಾಗಿದ್ದಾರೆ. ಲೇಖಕಿಯಾಗಿ ಶಿಕ್ಷಕರ ಹೊಣೆಯನ್ನೂ ನಿರ್ವಹಿಸುತ್ತಿದ್ದಾರೆ. ನೈತಿಕತೆಯನ್ನು ರೂಢಿಸಿಕೊಳ್ಳಲು ಪ್ರೇರಣೆಯಾಗಿರುವ ಇವರಿಗೆ ‘ಜೆಸ್ಟಿಸ್‌ ಕೆ.ಎಸ್‌.ಹೆಗ್ಡೆ ಅವರ ಸ್ಮರಣಾರ್ಥ ನೀಡಲಾಗುತ್ತಿರುವ ಪ್ರಶಸ್ತಿ ಸಂದಿರುವುದು ಸಂತಸ ತಂದಿದೆ’ ಎಂದರು.

ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಮಾತನಾಡಿ, ದುರಾಸೆಯು ನಮ್ಮ ಸಮಾಜಕ್ಕೆ ಅಂಟಿಕೊಂಡಿರುವ ಬಹುದೊಡ್ಡ ರೋಗ. ಹಿಂದೆ ಸಮಾಜದಲ್ಲಿ ಸಾಧನೆಗಳನ್ನು ಮಾಡಿದವರನ್ನು ಸನ್ಮಾನಿಸುತ್ತಿದ್ದರು. ಆದರೆ ಈಗ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಸ್ವಾಗತಿಸಿ, ಸನ್ಮಾನಿಸುತ್ತಿರುವುದು ದುರಂತದ ಸಂಗತಿ. ಇಂಥವರ ನಡುವೆ ಸುಧಾಮೂರ್ತಿಯಂಥವರು ಮಾಡುತ್ತಿರುವ ಸಮಾಜ ಮುಖಿ ಕಾರ್ಯಗಳು, ಹತಾಶೆಯ ನಡುವೆ ಆಶಾಭಾವನೆ ಮೂಡಿಸುತ್ತಿವೆ’ ಎಂದು ತಿಳಿಸಿದರು.

ADVERTISEMENT

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಧಾಮೂರ್ತಿ, ಬದುಕಿನಲ್ಲಿ ನಾವು ಧನಕನಕಗಳನ್ನು ಗಳಿಸಿದರೆ ಸಾಲದು. ದುಡಿದು ಸಂಪಾದನೆ ಮಾಡಿದ್ದನ್ನು ಸ್ವಲ್ಪವಾದರೂ ಸಮಾಜದ ಸಾರ್ಥಕ ಕಾರ್ಯಗಳಿಗೆ ವಿನಿಯೋಗ ಮಾಡಿದರೆ ಸಾಧನೆ ಎನಿಸಿಕೊಳ್ಳುತ್ತದೆ. ಕೆ.ಎಸ್‌.ಹೆಗ್ಡೆ ಅವರ ಕುಟುಂಬ ನೀಡುತ್ತಿರುವ ಈ ಪ್ರಶಸ್ತಿಯು ನನ್ನಲ್ಲಿ ಜೀವನೋತ್ಸಾಹವನ್ನು ಹೆಚ್ಚಿಸುವ ಮೂಲಕ ಮತ್ತಷ್ಟು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ಪ್ರೇರೇಪಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ.ಎಂ.ಶಾಂತರಾಜು ಶೆಟ್ಟಿ, ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಸಂದೀಪ್‌ ಶಾಸ್ತ್ರಿ, ಕುಲಪತಿ ಡಾ.ಎಂ.ಎಸ್‌.ಮೂಡಿತ್ತಾಯ, ಸಹ ಕುಲಾಧಿಪತಿ(ಆಡಳಿತ) ವಿಶಾಲ್‌ ಹೆಗ್ಡೆ, ನಿಟ್ಟೆ ಶಿಕ್ಷಣಸಂಸ್ಥೆಯ ಹಿರಿಯ ಸಲಹೆಗಾರ ಡಾ.ಎನ್‌.ಆರ್‌.ಶೆಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.