ADVERTISEMENT

ಕಾರಿನಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

* ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಚಾಲಕ ? * ವಿಮಾನ ನಿಲ್ದಾಣದಲ್ಲಿ ಚಾಲಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 18:36 IST
Last Updated 30 ಮಾರ್ಚ್ 2021, 18:36 IST
ಚಾಲಕ ಪ್ರತಾಪ್
ಚಾಲಕ ಪ್ರತಾಪ್   

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಪ್ರತಾಪ್ ಎಂಬುವರು ಕಾರಿನಲ್ಲೇ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಮಂಗಳವಾರ ಸಂಜೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

‘ರಾಮನಗರದ ಪ್ರತಾಪ್, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಗೆ (ಕೆಎಸ್‌ಟಿಡಿಸಿ) ಗುತ್ತಿಗೆ ಅಡಿಯಲ್ಲಿ ಟ್ಯಾಕ್ಸಿ ಚಲಾಯಿಸುತ್ತಿದ್ದರು. ತೀವ್ರವಾಗಿ ಗಾಯಗೊಂಡಿರುವ ಅವರನ್ನು ನಿಲ್ದಾಣ ಸಮೀಪದ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಪ್ರತಾಪ್, ಸಾಲ ಮಾಡಿ ಕಾರು ಖರೀದಿಸಿದ್ದರು. ಅದರ ದುಡಿಮೆಯಿಂದ ಬಂದ ಹಣದಲ್ಲೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಅದರಿಂದ ಬೇಸತ್ತಿದ್ದ ಪ್ರತಾಪ್, ವಿಮಾನ ನಿಲ್ದಾಣದ ಹೊರಭಾಗದಲ್ಲಿರುವ ಟ್ಯಾಕ್ಸಿ ನಿಲುಗಡೆ ಸ್ಥಳದಲ್ಲಿ ತಮ್ಮ ಕಾರಿನೊಳಗೆ ಕುಳಿತೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.’

ADVERTISEMENT

‘ಸ್ಥಳದಲ್ಲಿದ್ದ ಚಾಲಕರೇ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಪ್ರತಿಭಟನೆ: ಆತ್ಮಹತ್ಯೆ ಯತ್ನ ಸುದ್ದಿ ತಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದ ಟ್ಯಾಕ್ಸಿ ನಿಲುಗಡೆ ಸ್ಥಳದಲ್ಲಿ ಸೇರಿದ್ದ ಚಾಲಕರು, ಪ್ರತಿಭಟನೆ ನಡೆಸಿದರು.

‘ಓಲಾ, ಉಬರ್‌ ಹಾಗೂ ಇತರೆ ಕಂಪನಿಗಳಡಿ ಚಾಲಕರು ಕಾರು ಓಡಿಸುತ್ತಿದ್ದಾರೆ. ಅಂಥ ಕಾರುಗಳಲ್ಲಿ ಪ್ರಯಾಣಿಸಲು ಕಿ.ಮೀ.ಗೆ ₹ 10 ದರ ನಿಗದಿ ಮಾಡಲಾಗಿದೆ. ಆದರೆ, ಕೆಎಸ್‌ಟಿಡಿಸಿ ಟ್ಯಾಕ್ಸಿಗಳಲ್ಲಿ ಪ್ರಯಾಣಿಸಲು ಕಿ.ಮೀ.ಗೆ ₹ 24 ದರ ನಿಗದಿಯಾಗಿದೆ. ದರ ಹೆಚ್ಚಾಗಿದ್ದರಿಂದ ಪ್ರಯಾಣಿಕರು, ಕೆಎಸ್‌ಟಿಡಿಸಿ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿಲ್ಲ. ಇದರಿಂದ ಚಾಲಕರಿಗೆ ಪ್ರಯಾಣಿಕರೇ ಸಿಗುತ್ತಿಲ್ಲ. ದುಡಿಮೆಯೂ ತೀರಾ ಕಡಿಮೆಯಾಗಿದ್ದು, ಚಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲದ ಕಂತು ತುಂಬಲು ಹಾಗೂ ಕುಟುಂಬ ನಿರ್ವಹಿಸಲು ಸಾಕಷ್ಟು ಕಷ್ಟಪಡುತ್ತಿದ್ದಾರೆ’ ಎಂದೂ ಪ್ರತಿಭಟನಕಾರರು ಅಳಲು ತೋಡಿಕೊಂಡರು.

‘ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ವಿಮಾನ ನಿಲ್ದಾಣದಲ್ಲಿರುವ ಎಲ್ಲ ಟ್ಯಾಕ್ಸಿಗಳಿಗೆ ಒಂದೇ ಪ್ರಯಾಣ ದರ ನಿಗದಿ ಮಾಡಬೇಕು. ಇಲ್ಲದಿದ್ದರೆ, ಪ್ರತಾಪ್‌ ರೀತಿಯಲ್ಲೇ ಮತ್ತಷ್ಟು ಚಾಲಕರು ಆತ್ಮಹತ್ಯೆಗೆ ಯತ್ನಿಸಿದರೂ ಆಶ್ಚರ್ಯವಿಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.