
ಬೆಂಗಳೂರು: ಕ್ಯಾನ್ಸರ್ ಪೀಡಿತ ಬಡ ರೋಗಿಗಳ ಚಿಕಿತ್ಸೆಗೆ ನೆರವಾಗಲು ಎಚ್‌ಸಿಜಿ ಫೌಂಡೇಷನ್ ಸಹಯೋಗದಲ್ಲಿ ಸಂಧ್ಯಾ ಎಸ್. ಕುಮಾರ್ ಅವರು ಇದೇ 14ರಂದು ಸಂಜೆ 6 ಗಂಟೆಯಿಂದ ಕೋಣನಕುಂಟೆಯ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ‘ಸುರ್ ಸಂಧ್ಯಾ’ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಹಳೆಯ ಹಿಂದಿ ಚಿತ್ರಗೀತೆಗಳಿಗೆ ಈ ಕಾರ್ಯಕ್ರಮ ಹೆಸರುವಾಸಿಯಾಗಿದೆ. ಸಾಮಾಜಿಕ ಕಳಕಳಿಯಿಂದ ಈ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ಆಯೋಜಿಸಲಾಗುತ್ತಿದ್ದು, ಈ ಬಾರಿ ಬಾಲಿವುಡ್ ಗಾಯಕಿ ಕವಿತಾ ಕೃಷ್ಣಮೂರ್ತಿ ಪಾಲ್ಗೊಳ್ಳಲಿದ್ದಾರೆ. ಜನಪ್ರಿಯ ಹಳೆಯ ಚಿತ್ರಗೀತೆಗಳನ್ನು ಅವರು ಹಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ತಮ್ಮ ಸಂಗೀತ ಪಯಣವನ್ನೂ ಸ್ಮರಿಸಿಕೊಳ್ಳಲಿದ್ದು, ಅವರೊಂದಿಗೆ ಧ್ವನಿ ಕಲಾವಿದ ಹರೀಶ್ ಭೀಮಾನಿ ಸಂವಾದ ನಡೆಸಲಿದ್ದಾರೆ.
ಮೂರು ಗಂಟೆಗೂ ಹೆಚ್ಚು ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಗಾಯಕರಾದ ನಾಗಚಂದ್ರಿಕಾ ಭಟ್, ಸಮನ್ವಿತಾ ಶರ್ಮಾ, ಶ್ರುತಿ ಭೀಡೆ, ಆರೋಹ್ ಶಂಕರ್ ಹಾಗೂ ಸುರೋಜಿತ್ ಗುಹಾ ಅವರು ಭಾಗವಹಿಸಲಿದ್ದು, ವಿವಿಧ ಚಿತ್ರಗೀತೆಗಳನ್ನು ಹಾಡುವ ಮೂಲಕ ರಂಜಿಸಲಿದ್ದಾರೆ.
ಈ ಕಾರ್ಯಕ್ರಮದಿಂದ ಸಂಗ್ರವಾದ ಹಣವನ್ನು ಎಚ್‌ಸಿಜಿ ಫೌಂಡೇಷನ್‌ಗೆ ಒದಗಿಸಿ, ಕ್ಯಾನ್ಸರ್ ಪೀಡಿತ ಬಡ ರೋಗಿಗಳಿಗೆ ರಿಯಾಯಿತಿ ದರ ಅಥವಾ ಉಚಿತವಾಗಿ ಚಿಕಿತ್ಸೆ ಒದಗಿಸಲು ಬಳಸಲಾಗುತ್ತದೆ.
‘ಈ ಕಾರ್ಯಕ್ರಮದ ಹಿಂದೆ ಯಾವುದೇ ಹಣಕಾಸಿನ ವ್ಯವಹಾರವಿಲ್ಲ. ಸಂಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದಿಂದ ನಿಯಮಿತವಾಗಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ. ಕಾರ್ಯಕ್ರಮದ ಖರ್ಚುವೆಚ್ಚ ಹೊರತುಪಡಿಸಿ, ಉಳಿದ ಹಣವನ್ನು ಎಚ್‌ಸಿಜಿ ಫೌಂಡೇಷನ್‌ಗೆ ನೀಡಲಾಗುತ್ತದೆ. ಪ್ರತಿ ಆಸನದ ಮೇಲೆ ಹಣ ನೀಡಲಾಗುತ್ತಿರುವ ಸಂಸ್ಥೆಯ ಹಾಗೂ ಬ್ಯಾಂಕ್ ವಿವರ ಇರಿಸಲಾಗುತ್ತದೆ. ದಾನಿಗಳು ಇಚ್ಛಿಸಿದಲ್ಲಿ ಹೆಚ್ಚಿನ ಹಣ ಪಾವತಿಸಬಹುದಾಗಿದೆ’ ಎಂದು ಸಂಧ್ಯಾ ಎಸ್. ಕುಮಾರ್ ತಿಳಿಸಿದರು.
ಕಾರ್ಯಕ್ರಮದ ಟಿಕೆಟ್‌ಗಳು ‘ಬುಕ್ ಮೈ ಶೋ’ದಲ್ಲಿ ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.