
ಬೆಂಗಳೂರು: ನಗರದಲ್ಲಿ 40 ಅಡಿಗಿಂತ ಕಡಿಮೆ ಅಗಲದ ರಸ್ತೆ ಇರುವ ಪ್ರದೇಶದಲ್ಲಿ ಉದ್ದಿಮೆ ಪರವಾನಗಿ ತಡೆಹಿಡಿಯುವ ಆದೇಶವನ್ನು ಕೂಡಲೇ ವಾಪಸ್ ಪಡೆದು, ಬಡ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಶಾಸಕ ಎಸ್. ಸುರೇಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಅವರು, ‘ಜನವರಿ 31ರಂದು ಜಿಬಿಎ ಸುತ್ತೋಲೆ ಹೊರಡಿಸಿ 40 ಅಡಿ ಅಗಲಕ್ಕಿಂತ ಕಡಿಮೆ ಪ್ರದೇಶದಲ್ಲಿ ಉದ್ದಿಮೆ ಪರವಾನಗಿಯನ್ನು ತಡೆಹಿಡಿಯುಂತೆ ಹೇಳಲಾಗಿದೆ. ಈ ಸುತ್ತೋಲೆಯು ಆಘಾತಕಾರಿಯಾಗಿದ್ದು, ಬೀದಿ ಬದಿಯ ವ್ಯಾಪಾರವನ್ನೇ ನಂಬಿಕೊಂಡಿರುವ ಮಧ್ಯಮ ವರ್ಗದ ಜನರನ್ನು ಅಕ್ಷರಶಃ ಬೀದಿಗೆ ತಳ್ಳುವಂತೆ ಮಾಡುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
‘ವ್ಯವಸ್ಥಿತವಲ್ಲದ ನಗರ ಯೋಜನೆಯಿಂದ ಹಾಗೂ ಅನಧಿಕೃತ ಬಡಾವಣೆಗಳು ಇರುವೆಡೆ 40 ಅಡಿ ರಸ್ತೆ ಇರುವುದಿಲ್ಲ. ಇದಕ್ಕೆ ಕಾರಣ, ಅಂದು ಬಿಡಿಎ ಮತ್ತು ಬಿಬಿಎಂಪಿಗಳು ಕಣ್ಣುಮುಚ್ಚಿ ಕುಳಿತಿದ್ದೇ ಆಗಿದೆ. ಪರಿಸ್ಥಿತಿ ಹೀಗಿರುವಾಗ ಜಿಬಿಎ ಸುತ್ತೋಲೆ ಪ್ರತಿಗಾಮಿ ಧೋರಣೆಯನ್ನು ಹೊಂದಿದ್ದು, ಮಧ್ಯಮ ವರ್ಗದ ಬೀದಿ ಬದಿ ವ್ಯಾಪಾರಿಗಳು ಮತ್ತು ಕಿರಾಣಿ ಅಂಗಡಿ ಮಾಲೀಕರ ಕುಟುಂಬಗಳನ್ನು ಬೀದಿಗೆ ತಳ್ಳುವಂತೆ ಮಾಡಿದೆ’ ಎಂದಿದ್ದಾರೆ.
‘ಜಿಬಿಎ ವ್ಯಾಪ್ತಿಯಲ್ಲಿ ಸುಮಾರು 3 ಲಕ್ಷ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಕಿರಾಣಿ ಅಂಗಡಿಗಳ ಸಂಖ್ಯೆ ಸುಮಾರು 1.8 ಲಕ್ಷವಿದೆ. ಉದ್ದಿಮೆ ಪರವಾನಗಿ ಹೊಂದಿರುವವರ ಸಂಖ್ಯೆ 1.3 ಲಕ್ಷ. ಅಂದರೆ, 20 ಲಕ್ಷದಷ್ಟು ಮಂದಿ ಅವಲಂಬಿತರ ಜೀವನಾಧಾರ ಈ ವ್ಯಾಪಾರಿಗಳ ಮೇಲಿದೆ’ ಎಂದು ಹೇಳಿದ್ದಾರೆ.
‘ನಿತ್ಯದ ಅಗತ್ಯಗಳಾದ ತರಕಾರಿ, ಹಣ್ಣು, ಹಾಲು–ಮೊಸರು, ಔಷಧ ಇತ್ಯಾದಿಗಾಗಿ 40 ಅಡಿ ರಸ್ತೆಯಲ್ಲಿರುವ ಅಂಗಡಿಗಳನ್ನೇ ಹುಡುಕಿಕೊಂಡು ಹೋಗಬೇಕು ಎಂದಾದರೆ, ಗ್ರಾಹಕರ ಪಾಲಿಗೂ ಕಷ್ಟವಾಗುತ್ತದೆ. ಅಂತಃಕರಣವಿಲ್ಲದ, ಸೂಕ್ಷ್ಮ ಸಂವೇದನೆ ಇಲ್ಲದ ನಿಮ್ಮ ಸುತ್ತೋಲೆಯು, ಮತ್ತಷ್ಟು ಶೋಷಿತರನ್ನಾಗಿಸಿ, ಬಡತನಕ್ಕೆ ದೂಡುತ್ತದೆ. ಆದ್ದರಿಂದ ಕೂಡಲೇ ಈ ಸುತ್ತೋಲೆಯನ್ನು ವಾಪಸ್ ಪಡೆಯಬೇಕು’ ಎಂದು ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.