ADVERTISEMENT

ಬೆಂಗಳೂರು | ಬೌರಿಂಗ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2023, 16:36 IST
Last Updated 27 ಡಿಸೆಂಬರ್ 2023, 16:36 IST
ಬೌರಿಂಗ್ ಆಸ್ಪತ್ರೆ ಪರಿಶೀಲನೆ ವೇಳೆ ನ್ಯಾ.ಪಿ.ಎಸ್. ದಿನೇಶ್‌ ಕುಮಾರ್ ಅವರು ರೋಗಿಗಳು ಹಾಗೂ ಅವರ ಸಂಬಂಧಿಗಳನ್ನು ವ್ಯವಸ್ಥೆ ಬಗ್ಗೆ ವಿಚಾರಿಸಿದರು – ಪ‍್ರಜಾವಾಣಿ ಚಿತ್ರ
ಬೌರಿಂಗ್ ಆಸ್ಪತ್ರೆ ಪರಿಶೀಲನೆ ವೇಳೆ ನ್ಯಾ.ಪಿ.ಎಸ್. ದಿನೇಶ್‌ ಕುಮಾರ್ ಅವರು ರೋಗಿಗಳು ಹಾಗೂ ಅವರ ಸಂಬಂಧಿಗಳನ್ನು ವ್ಯವಸ್ಥೆ ಬಗ್ಗೆ ವಿಚಾರಿಸಿದರು – ಪ‍್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಬೌರಿಂಗ್ ಆಸ್ಪತ್ರೆಗೆ ಬುಧವಾರ ದಿಢೀರ್ ಭೇಟಿ ನೀಡಿದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಪಿ.ಎಸ್. ದಿನೇಶ್ ಕುಮಾರ್, ಹೊರರೋಗಿ ವಿಭಾಗದಲ್ಲಿ (ಒಪಿಡಿ) ನೋಂದಣಿ ಪ್ರಕ್ರಿಯೆ ಸೇರಿ ವಿವಿಧ ವ್ಯವಸ್ಥೆಯನ್ನು ಸುಧಾರಿಸುವಂತೆ ಸೂಚಿಸಿದರು. 

ಒಳರೋಗಿ ವಿಭಾಗ ಹಾಗೂ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ರೋಗಿಗಳು ಹಾಗೂ ಅವರ ಸಂಬಂಧಿಗಳಿಂದ ಕುಂದು ಕೊರತೆಗಳನ್ನು ಆಲಿಸಿದರು. ಈ ವೇಳೆ ಕೆಲವರು ಆಸ್ಪತ್ರೆಯ ವ್ಯವಸ್ಥೆ ಹಾಗೂ ವೈದ್ಯಕೀಯ ಸಿಬ್ಬಂದಿಯ ವರ್ತನೆ ಬಗ್ಗೆ ದೂರಿದರು. ಈ ಬಗ್ಗೆ ಕ್ರಮವಹಿಸಿ, ವ್ಯವಸ್ಥೆ ಸುಧಾರಿಸುವಂತೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ. ಕೆಂಪರಾಜು ಅವರಿಗೆ ನ್ಯಾ.ಪಿ.ಎಸ್. ದಿನೇಶ್ ಕುಮಾರ್ ಸೂಚಿಸಿದರು. 

ಹೊರರೋಗಿ ವಿಭಾಗ ಹಾಗೂ ಔಷಧ ವಿಭಾಗದಲ್ಲಿ ರೋಗಿಗಳು ಸರದಿಯಲ್ಲಿ ಕಾಯುತ್ತಿರುವುದನ್ನು ಗಮನಿಸಿದ ಅವರು, ‘ರೋಗಿಗಳನ್ನು ಏಕೆ ಈ ರೀತಿ ಕಾಯಿಸುತ್ತೀರಿ ? ಕೌಂಟರ್‌ಗಳ ಸಂಖ್ಯೆಯನ್ನು ಏಕೆ ಹೆಚ್ಚಿಸಿಲ್ಲ’ ಎಂದು ವೈದ್ಯರನ್ನು ಪ್ರಶ್ನಿಸಿದರು. 

ADVERTISEMENT

ಮಧ್ಯಾಹ್ನ 12 ಗಂಟೆ ವೇಳೆಗೆ ಆಸ್ಪತ್ರೆಗೆ ಬಂದ ಅವರು, ತುರ್ತು ಚಿಕಿತ್ಸಾ ಘಟಕ ಹಾಗೂ ಕೋವಿಡ್ ಚಿಕಿತ್ಸೆಗೆ ಮಾಡಲಾದ ವ್ಯವಸ್ಥೆಯ ಬಗ್ಗೆಯೂ ಪರಿಶೀಲಿಸಿದರು. ಈ ವೇಳೆ ಆಸ್ಪತ್ರೆ ನಿರ್ದೇಶಕ ಡಾ. ಮನೋಜ್ ಕುಮಾರ್ ಅವರಿಂದ ಚಿಕಿತ್ಸಾ ವ್ಯವಸ್ಥೆಗಳ ಬಗ್ಗೆ ವಿವಿಧ ಮಾಹಿತಿ ಪಡೆದುಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.