ADVERTISEMENT

ಕೆಲಸದ ಜೊತೆಗೆ ಕುಟುಂಬ ನಿರ್ವಹಣೆಯ ಸವಾಲು: ಮಂಜುಳ

ಶುಶ್ರೂಷಕರ ಅಂತರಂಗ

​ಪ್ರಜಾವಾಣಿ ವಾರ್ತೆ
Published 10 ಮೇ 2021, 21:54 IST
Last Updated 10 ಮೇ 2021, 21:54 IST
ಮಂಜುಳ
ಮಂಜುಳ   

ಬೆಂಗಳೂರು: ‘ನಿವೃತ್ತಿಗೆ ಇನ್ನೊಂದೇ ವರ್ಷ ಬಾಕಿ ಇದೆ. ವೃತ್ತಿ ಬದುಕಿನ ಕೊನೆಯ ಘಟ್ಟದಲ್ಲೇ ಬಹುದೊಡ್ಡ ಸವಾಲು ಎದುರಾಗಿದೆ. ಇದನ್ನು ಸಮರ್ಥವಾಗಿ ನಿಭಾಯಿಸುವ ಅದಮ್ಯ ವಿಶ್ವಾಸವೂ ನನ್ನಲ್ಲಿದೆ’.

‘ಮನೆಯಲ್ಲಿ ಗಂಡ ಹಾಗೂ ಮಕ್ಕಳಿದ್ದಾರೆ. ಅವರಿಗೆ ನಾನೇ ಅಡುಗೆ ಮಾಡಿ ಹಾಕಬೇಕು. ನನ್ನಿಂದ ಅವರಿಗೆ ಸೋಂಕು ತಗುಲಿಬಿಡಬಹುದೇನೋ ಎಂಬ ಆತಂಕ ಸದಾ ಕಾಡುತ್ತಿರುತ್ತದೆ. ಹೀಗಾಗಿ ಆಗಾಗ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುತ್ತಲೇ ಇರುತ್ತೇನೆ. ಈಗಾಗಲೇ ಲಸಿಕೆಯನ್ನೂ ಹಾಕಿಸಿಕೊಂಡಿದ್ದೇನೆ. ಇಷ್ಟಾದರೂ ಮನದ ಮೂಲೆಯಲ್ಲಿ ಸಣ್ಣ ಅಳುಕು ಇದ್ದೇ ಇದೆ. ಮನೆಗೆ ಹೋದ ಕೂಡಲೇ ಸ್ನಾನ ಮಾಡಿ, ಬಿಸಿ ನೀರಿನ ಹಬೆ ತೆಗೆದುಕೊಳ್ಳುತ್ತೇನೆ. ಆಗ ಮನಸ್ಸಿಗೆ ಸ್ಪಲ್ಪ ಸಮಾಧಾನ ಅನಿಸುತ್ತದೆ. ಅದಾದ ಬಳಿಕವೇ ಮನೆಯವರೊಂದಿಗೆ ಬೆರೆಯುತ್ತೇನೆ’.

‘ಹಿಂದಿನ ವರ್ಷಕ್ಕೆ ಹೋಲಿಸಿದರೆ ಈಗ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ರೂಪಾಂತರಿ ವೈರಾಣು ಜೀವಕ್ಕೆ ಸಂಚಕಾರ ತಂದೊಡ್ಡಿದೆ. ಹೀಗಾಗಿ ಹಿಂದೆಂದಿಗಿಂತಲೂ ಹೆಚ್ಚು ಜಾಗರೂಕತೆಯಿಂದ ಕೆಲಸ ಮಾಡುತ್ತಿದ್ದೇನೆ. ಮುಖಗವಸು ಧರಿಸುವುದು, ಅಂತರ ಕಾಪಾಡಿಕೊಳ್ಳುವುದಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ. ಜನರೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದು ನನ್ನ ಕಳಕಳಿಯ ಮನವಿ’.

ADVERTISEMENT

‘50 ವರ್ಷ ದಾಟಿದವರಿಗೆ ಹೆಚ್ಚಿನ ಅಪಾಯವಿದೆ ಎಂದು ಹೇಳುತ್ತಿದ್ದಾರೆ. ನಿತ್ಯ ನೂರಾರು ಮಂದಿಗೆ ಲಸಿಕೆ ನೀಡಬೇಕಾಗುತ್ತದೆ. ಅವರ ಪೈಕಿ ಯಾರಿಗೆ ಸೋಂಕು ತಗುಲಿರುತ್ತದೋ ನಮಗಂತೂ ಗೊತ್ತಾಗುವುದಿಲ್ಲ. ಹೀಗಾಗಿ ನಮಗೆ ಅಪಾಯ ಇದ್ದೇ ಇದೆ. ಹಾಗಂತ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿ ಕೂರುವ ಸಮಯವಂತೂ ಇದಲ್ಲ. ಯಾವುದಕ್ಕೂ ಅಂಜದೆ ಸೇವೆ ಮಾಡಲೇಬೇಕು’.

‘ಹೋದ ವರ್ಷ ಲಾಕ್‌ಡೌನ್‌ ವೇಳೆ 20 ದಿನ ಈ ಕೇಂದ್ರದಲ್ಲಿ ಇದ್ದುಕೊಂಡು ಕೆಲಸ ಮಾಡಿದ್ದೆ. ಮಕ್ಕಳ ಮುಖ ಕೂಡ ನೋಡಲು ಆಗಿರಲಿಲ್ಲ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.