ADVERTISEMENT

ಪತ್ನಿ ಅನುಮಾನಾಸ್ಪದ ಸಾವು: ಬೇಗೂರು ಪಿಎಸ್‌ಐ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 22:05 IST
Last Updated 3 ಜೂನ್ 2023, 22:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಶಿಲ್ಪಾ (29) ಎಂಬುವವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಕೊಲೆ ಆರೋಪದಡಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಆಗಿರುವ ಪತಿ ರಮೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶಿಲ್ಪಾ, ಬೇಗೂರು ಠಾಣೆಯ ಪ್ರೊಬೇಷನರಿ ಪಿಎಸ್‌ಐ ರಮೇಶ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ಶನಿವಾರ ಬೆಳಿಗ್ಗೆ ಶಿಲ್ಪಾ ಮೃತದೇಹ ಪತ್ತೆಯಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಶಿಲ್ಪಾ ಅವರನ್ನು ಪತಿ ರಮೇಶ್ ಕೊಲೆ ಮಾಡಿದ್ದಾರೆ. ನೇಣು ಬಿಗಿದು, ಆತ್ಮಹತ್ಯೆ ನಾಟಕವಾಡುತ್ತಿದ್ದಾರೆ’ ಎಂದು ಆರೋಪಿಸಿ ಪೋಷಕರು ದೂರು ನೀಡಿದ್ದಾರೆ. ಪಿಎಸ್‌ಐ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿವೆ.

ADVERTISEMENT

ಬಿ.ಇಡಿ ಕಾಲೇಜು ಸ್ನೇಹಿತರು: ‘ಶಿಲ್ಪಾ ಹಾಗೂ ರಮೇಶ್ ಬಿ.ಇಡಿ ಕಾಲೇಜು ಸ್ನೇಹಿತರು.  ಪರಸ್ಪರ ಪ್ರೀತಿಸುತ್ತಿದ್ದರು. ವಿದ್ಯಾಭ್ಯಾಸದ ನಂತರ ಒಂದೇ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದರು’ ಎಂದು ಮೂಲಗಳು ಹೇಳಿವೆ.

‘ರಮೇಶ್ ಅವರು ಪಿಎಸ್‌ಐ ಹುದ್ದೆಗೆ ನೇಮಕವಾಗಿದ್ದರು. ಶಿಲ್ಪಾ ಅವರನ್ನು ದೂರ ಮಾಡಲು ಯತ್ನಿಸಿದ್ದ ರಮೇಶ್, ಕಿರುಕುಳ ನೀಡುತ್ತಿದ್ದರು. ಅದನ್ನು ಪ್ರಶ್ನಿಸಿದ್ದ ಶಿಲ್ಪಾ, ಠಾಣೆಗೆ ಹೋಗಿ ಗಲಾಟೆ ಮಾಡಿದ್ದರು. ಇದಾದ ನಂತರ, ಶಿಲ್ಪಾ–ರಮೇಶ್ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹವಾಗಿದ್ದರು.’

‘ಮದುವೆ ಬಳಿಕ ಶಿಲ್ಪಾ ಜೊತೆ ನಿತ್ಯವೂ ಜಗಳ ಮಾಡುತ್ತಿದ್ದ ರಮೇಶ್, ಇತ್ತೀಚೆಗೆ ಪ್ರತ್ಯೇಕವಾಗಿ ವಾಸವಿದ್ದರು. ಅವರ ಬಳಿ ಹೋಗುತ್ತಿರಲಿಲ್ಲ. ಇದರ ನಡುವೆಯೇ ಬೇರೊಬ್ಬ ಯುವತಿ ಜೊತೆ ಮದುವೆಯಾಗಲು ರಮೇಶ್ ತಯಾರಿ ನಡೆಸುತ್ತಿದ್ದರು. ತಮ್ಮಿಂದ ದೂರವಿರುವಂತೆ ಶಿಲ್ಪಾಗೆ ಎಚ್ಚರಿಕೆ ನೀಡಿದ್ದರು. ಕೊಲೆ ಬೆದರಿಕೆ ಸಹ ಹಾಕಿದ್ದರೆಂದು ಪೋಷಕರು ದೂರುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಶಿಲ್ಪಾ ಅವರು ಶುಕ್ರವಾರ ರಾತ್ರಿ ಸಂಬಂಧಿಕರಿಗೆ ಕರೆ ಮಾಡಿ, ಆರ್ಥಿಕ ತೊಂದರೆ ಇರುವುದಾಗಿ ಹೇಳಿ ಖಾತೆಗೆ ಹಣ ಹಾಕಿಸಿಕೊಂಡಿದ್ದರು. ಶನಿವಾರ ಬೆಳಿಗ್ಗೆ ಮನೆ ಬಾಗಿಲು ತೆರೆದಿರಲಿಲ್ಲ. ಮನೆ ಮಾಲೀಕರು, ಪಿಎಸ್‌ಐ ರಮೇಶ್‌ಗೆ ಮಾಹಿತಿ ನೀಡಿದ್ದರು. ರಮೇಶ್ ಮನೆಗೆ ಹೋಗಿ ನೋಡಿದಾಗ, ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡಿತ್ತು. ಘಟನೆ ಬಗ್ಗೆ ಮಾಲೀಕರಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.