ADVERTISEMENT

ಕಸ ಗುಡಿಸುವ ಯಂತ್ರ: ಕಾರ್ಯವೈಖರಿಯ ವರದಿ ನೀಡಿ

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 20:08 IST
Last Updated 14 ಸೆಪ್ಟೆಂಬರ್ 2021, 20:08 IST
ಆರ್‌.ಟಿ.ನಗರದ ಎಚ್‌ಎಂಟಿ ಮೈದಾನದಲ್ಲಿ ಬಿಬಿಎಂಪಿಯ ಕಸ ಗುಡಿಸುವ ಯಂತ್ರಗಳನ್ನು ಗೌರವ್‌ ಗುಪ್ತ ಪರಿಶೀಲಿಸಿದರು. ಸರ್ಫರಾಜ್‌ ಖಾನ್‌ ಹಾಗೂ ಇತರ ಅಧಿಕಾರಿಗಳು ಇದ್ದಾರೆ
ಆರ್‌.ಟಿ.ನಗರದ ಎಚ್‌ಎಂಟಿ ಮೈದಾನದಲ್ಲಿ ಬಿಬಿಎಂಪಿಯ ಕಸ ಗುಡಿಸುವ ಯಂತ್ರಗಳನ್ನು ಗೌರವ್‌ ಗುಪ್ತ ಪರಿಶೀಲಿಸಿದರು. ಸರ್ಫರಾಜ್‌ ಖಾನ್‌ ಹಾಗೂ ಇತರ ಅಧಿಕಾರಿಗಳು ಇದ್ದಾರೆ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸ ಗುಡಿಸುವ 26 ಯಂತ್ರಗಳ ಕಾರ್ಯವೈಖರಿ ಕುರಿತು ತಾಂತ್ರಿಕ ಪರಿಣಿತರಿಂದ ಪರಿಶೀಲನೆ ನಡೆಸಿ ನಿಖರವಾದ ವರದಿ ನೀಡುವಂತೆ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಕಸ ನಿರ್ವಹಣೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸಲು ಖರೀದಿಸಿರುವ ಕಸ ಗುಡಿಸುವ ಯಂತ್ರಗಳನ್ನು ಆರ್.ಟಿ.ನಗರದ ಎಚ್.ಎಂ.ಟಿ ಮೈದಾನದಲ್ಲಿ ಮಂಗಳವಾರ ಪರಿಶೀಲನೆ ನಡೆಸಿದರು.

17 ಸ್ವಯಂಚಾಲಿತ ಯಂತ್ರಗಳು, 8 ಟ್ರಕ್‌ನಲ್ಲಿ ಅಳವಡಿಸಿರುವಂತಹವು ಹಾಗೂ ಒಂದು ಸಣ್ಣ ಕಸ ಗುಡಿಸುವ ಯಂತ್ರ ಸೇರಿ ಒಟ್ಟುಕಸ ಗುಡಿಸುವ 26 ಯಂತ್ರಗಳನ್ನು ಬಿಬಿಎಂಪಿ ಖರೀದಿಸಿದೆ.

ADVERTISEMENT

ಈ ಯಂತ್ರಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ. ಯಾವ ವಲಯದಲ್ಲಿ ಎಷ್ಟು ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಇದುವರೆಗೆ ಎಲ್ಲೆಲ್ಲಿ ರಸ್ತೆಗಳ ಕಸ ಗುಡಿಸಿವೆ. ಪ್ರತಿ ಯಂತ್ರವು ಗಂಟೆಗೆ ಹಾಗೂ ದಿನಕ್ಕೆ ಎಷ್ಟು ಕಿ.ಮೀ ಉದ್ದದ ರಸ್ತೆಯನ್ನು ಸ್ವಚ್ಛ ಮಾಡುತ್ತದೆ ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಂದ ವಿವರ ಪಡೆದರು.

‘ಕಸ ಗುಡಿಸುವ ಯಂತ್ರಗಳು ಸುಸ್ಥಿತಿಯಲ್ಲಿವೆಯೇ, ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ, ಅವುಗಳ ಸಾಮರ್ಥ್ಯ ಎಷ್ಟಿದೆ, ಟೆಂಡರ್ ಪ್ರಕ್ರಿಯೆಯಲ್ಲಿ ನೀಡಿರುವ ಮಾಹಿತಿ ನಿಖರವಾಗಿದೆಯೇ, ಅವುಗಳ ಎಂಜಿನ್‌ನ ಸಾಮರ್ಥ್ಯ ಹೇಗಿದೆ, ದಿನಕ್ಕೆ ಎಷ್ಟು ಕಿ.ಮೀ ರಸ್ತೆಯನ್ನು ಸ್ವಚ್ಛ ಮಾಡುತ್ತವೆ, ಪ್ರತಿ ಯಂತ್ರವು ಎಷ್ಟು ಕ್ಯೂಬಿಕ್ ಮೀಟರ್ ಕಸ ಸಂಗ್ರಹಿಸಬಹುದು. ಕಸ ಗುಡಿಸುವ ಬ್ರಷ್ ಹಾಗೂ ಮಣ್ಣಿನ ದೂಳಿನ ಕಣಗಳನ್ನು ಹೊರಹಾಕಲು ಅಳವಡಿಸಿರುವ ಫಿಲ್ಟರ್‌ಗಳ ಕಾರ್ಯವೈಖರಿ ಹೇಗಿದೆ ಎಂಬ ಪೂರ್ಣ ಮಾಹಿತಿ ವರದಿಯಲ್ಲಿರಬೇಕು. ಬಿಎಂಟಿಸಿ ಅಥವಾ ಕೆಎಸ್ಆರ್‌ಟಿಸಿ ಪ್ರಾದೇಶಿಕ ಕಾರ್ಯಾಗಾರಗಳ ತಾಂತ್ರಿಕ ಪರಿಣಿತರಿಂದ ಪರಿಶೀಲನೆ ನಡೆಸಬಹುದು’ ಎಂದರು.

ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಾ.ಕೆ.ಹರೀಶ್ ಕುಮಾರ್, ಜಂಟಿ ಆಯುಕ್ತ (ಕಸ ನಿರ್ವಹಣೆ) ಸರ್ಫರಾಜ್ ಖಾನ್, ಸೂಪರಿಂಟೆಂಡಿಂಗ್‌ ಎಂಜಿನಿಯರ್ ಬಸವರಾಜ್ ಕಬಾಡೆ, ಎಲ್ಲ ವಲಯ ಕಾರ್ಯಪಾಲಕ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.