ಎಫ್‌ಐಆರ್
ಬೆಂಗಳೂರು: ಸ್ವಿಗ್ಗಿ ಮಿನೀಸ್‌ನ ಹೆಸರಿನಲ್ಲಿ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲು ಯತ್ನಿಸಿದ ವ್ಯಕ್ತಿಯ ವಿರುದ್ಧ ವೈಟ್‌ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಿಗ್ಗಿ ಕಂಪನಿಯ ವ್ಯವಸ್ಥಾಪಕ ಎನ್.ಹರ್ಷಿತ್ ಅವರ ದೂರು ಆಧರಿಸಿ, ವಿಕ್ರಮ್ ಕುಮಾರ್ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
‘ಸ್ವಿಗ್ಗಿ ಕಂಪನಿಯ ಅಧೀನದಲ್ಲಿರುವ ಸ್ವಿಗ್ಗಿ ಮಿನೀಸ್‌ನ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿದ್ದ ವಿಕ್ರಮ್ ಕುಮಾರ್ ಸಿಂಗ್, ಕಂಪನಿಯಲ್ಲಿ ಕೆಲಸ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳ ಮಾಹಿತಿ ನೀಡುವಂತೆ ಹಾಗೂ ವಾಟ್ಸ್ಆ್ಯಪ್ ಗ್ರೂಪ್ ಮಾಡುವಂತೆ ನಗರದ 17 ವಿಶ್ವವಿದ್ಯಾಲಯಗಳಿಗೆ ಇ ಮೇಲ್ ಕಳುಹಿಸಿದ್ದಾನೆ. ವಿಶ್ವವಿದ್ಯಾಲಯದ ಪ್ರತಿನಿಧಿಗಳು ಮೇಲ್‌ನ ನೈಜತೆಯ ಕುರಿತು ಪರಿಶೀಲಿಸಲು ಸ್ವಿಗ್ಗಿ ಕಂಪನಿ ಸಂಪರ್ಕಿಸಿದಾಗ ಸುಳ್ಳು ಎಂಬುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.
ಆರೋಪಿ ಬಂಧನದ ಬಳಿಕ ಯಾವ ಕಾರಣಕ್ಕೆ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸುತ್ತಿದ್ದ ಎಂಬುದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.