ADVERTISEMENT

ಪ್ರತಿಭೆ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2023, 15:44 IST
Last Updated 29 ಅಕ್ಟೋಬರ್ 2023, 15:44 IST
<div class="paragraphs"><p>ನಗರದ ಡಿ. ದೇವರಾಜ ಅರಸು ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೇರಣಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃಧ್ಧಿ ಸಚಿವ ಬೈರತಿ ಸುರೇಶ್‌ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು. </p></div>

ನಗರದ ಡಿ. ದೇವರಾಜ ಅರಸು ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೇರಣಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃಧ್ಧಿ ಸಚಿವ ಬೈರತಿ ಸುರೇಶ್‌ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪ್ರತಿಭೆ ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಲ್ಲ. ಅವಕಾಶ ಮತ್ತು ಶಿಕ್ಷಣದ ಅನುಕೂಲ ಸಿಕ್ಕರೆ ಎಲ್ಲ ವ್ಯಕ್ತಿಗಳಲ್ಲಿರುವ ಪ್ರತಿಭೆಗಳೂ ಹೊರ ಬರುತ್ತವೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ಕಾಳಿದಾಸ ಹೆಲ್ತ್‌ ಆ್ಯಂಡ್‌ ಎಜುಕೇಷನ್‌ ಟ್ರಸ್ಟ್‌ ಮತ್ತು ಅಹಿಲ್ಯಾ ಫೌಂಡೇಷನ್‌ ವತಿಯಿಂದ ನಗರದ ಡಿ. ದೇವರಾಜ ಅರಸು ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೇರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಹುಟ್ಟಿನಿಂದಲೇ ಯಾರೂ ಮೇಧಾವಿಗಳಾಗಿರುವುದಿಲ್ಲ. ಅವಕಾಶಗಳು ಸಿಕ್ಕರೆ ಎಲ್ಲರೂ ಮೇಧಾವಿಗಳಾಗುತ್ತಾರೆʼ ಎಂದರು.

‘ಸಮಾಜದಲ್ಲಿ ಸ್ವಾಭಿಮಾನಿಗಳಾಗಿ, ಉತ್ತಮ ಪ್ರಜೆಗಳಾಗಿ ಬದುಕಲು ಶಿಕ್ಷಣ ಅತ್ಯಂತ ಅಗತ್ಯ. ಎಲ್ಲರೂ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ವಂಚಿತರಾದವರು ಶಿಕ್ಷಣ ಪಡೆಯಲು ಸಹಕರಿಸಬೇಕು. ಆ ಮೂಲಕ ಅವರಿಗೂ ಸಮಾಜದ ಮುಖ್ಯವಾಹಿನಿಯಲ್ಲಿ ಸಾಗಲು ಅವಕಾಶ ಕಲ್ಪಿಸಿಕೊಡಬೇಕು’ ಎಂದು ಹೇಳಿದರು.

‘ಬ್ರಿಟಿಷರು ಭಾರತಕ್ಕೆ ಬರುವ ಮೊದಲು ದೇಶದಲ್ಲಿ ಶೂದ್ರರು ಶಿಕ್ಷಣ ಪಡೆಯುವುದನ್ನು ನಿಷೇಧಿಸಲಾಗಿತ್ತು. ಮುಂದುವರಿದ ಜಾತಿಗಳ ಹೆಣ್ಣು ಮಕ್ಕಳೂ ಶಿಕ್ಷಣ ಪಡೆಯುವಂತಿರಲಿಲ್ಲ. ಬಿ.ಆರ್‌.ಅಂಬೇಡ್ಕರ್‌ ಅವರು ಶೂದ್ರ ಸಮುದಾಯದ ಜನರು ಮತ್ತು ಎಲ್ಲ ಸಮುದಾಯಗಳ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದಕ್ಕೆ ಅವಕಾಶ ಕಲ್ಪಿಸಿದರು. ಈ ಚರಿತ್ರೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು’ ಎಂದರು.

’ಪ್ರತಿ ಸಮುದಾಯವೂ ಸ್ವಂತ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎನ್ನುವ ಯೋಚನೆ ಅವೈಜ್ಞಾನಿಕ. ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವುದು ಮತ್ತು ನಿರ್ವಹಣೆ ಮಾಡುವುದು ಅತ್ಯಂತ ದುಬಾರಿ. ವೈದ್ಯಕೀಯ ಕಾಲೇಜುಗಳಲ್ಲಿ ಬಡವರು ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಚಿತವಾಗಿ ಸೀಟು ನೀಡಿ ನೆರವಾಗಲು ಸಾಧ್ಯವಾಗುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

’ಪ್ರತಿ ಸಮುದಾಯವೂ ಸ್ವಂತ ಅರೆ ವೈದ್ಯಕೀಯ ಕಾಲೇಜುಗಳು, ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ) ಮತ್ತು ಹಾಸ್ಟೆಲ್‌ಗಳನ್ನು ಆರಂಭಿಸಲು ಹೆಚ್ಚು ಆಸಕ್ತಿ ತೋರಬೇಕು. ಆಗ ಬಡವರು ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ನೆರವಾಗಲು ಸಾಧ್ಯವಾಗುತ್ತದೆ’ ಎಂದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮತ್ತು ಸನ್ಮಾನ ಮಾಡಲಾಯಿತು. ತಿಂಥಣಿ ಬ್ರಿಡ್ಜ್‌ನಲ್ಲಿರುವ ಕಲಬುರಗಿ ವಿಭಾಗದ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ನಗರಾಭಿವೃಧ್ಧಿ ಸಚಿವ ಬೈರತಿ ಸುರೇಶ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಮುಖಂಡರಾದ ಬಿ.ಎನ್‌. ನಿತೀಶ್‌, ಪುರುಷೋತ್ತಮ್‌ ಉಪಸ್ಥಿತರಿದ್ದರು.

‘ಹುದ್ದೆಗಳಿಗಿಂತ ವೈದ್ಯರು ಹೆಚ್ಚುʼ

‘ಹಿಂದೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹುದ್ದೆಗಳ ಭರ್ತಿಗೆ ವೈದ್ಯರೇ ಸಿಗುತ್ತಿರಲಿಲ್ಲ. ವೈದ್ಯರ ಕೊರತೆ ನೀಗಲು ಕಡ್ಡಾಯ ಗ್ರಾಮೀಣ ಸೇವೆ ಕಾಯ್ದೆ ಜಾರಿಗೊಳಿಸಲಾಗಿತ್ತು. ಈಗ ವೈದ್ಯರ ಸಂಖ್ಯೆ ದುಪ್ಪಟ್ಟಾಗಿದ್ದರೆ ಹುದ್ದೆಗಳ ಸಂಖ್ಯೆ ಕಡಿಮೆ ಇದೆ. ಈ ಕಾರಣದಿಂದ ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಗಳ ವೈದ್ಯ ಹುದ್ದೆಗಳ ಭರ್ತಿಗೆ ಸೀಮಿತವಾಗಿ ವೈದ್ಯರ ಕಡ್ಡಾಯ ಗ್ರಾಮೀಣ ಸೇವೆ ಕಾಯ್ದೆಗೆ ತಿದ್ದುಪಡಿ ತರಬೇಕಾಯಿತುʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.