ADVERTISEMENT

‘ಟಿಡಿಆರ್‌‘ ವರ್ಗಾವಣೆ ಭಾರಿ ಅಕ್ರಮ?

ಇನ್ನಷ್ಟು ಪ್ರಕರಣ ದಾಖಲಿಗೆ ಸರ್ಕಾರದ ಅನುಮತಿ ಕೇಳಲಿರುವ ಎಸಿಬಿ

​ಪ್ರಜಾವಾಣಿ ವಾರ್ತೆ
Published 14 ಮೇ 2019, 19:34 IST
Last Updated 14 ಮೇ 2019, 19:34 IST

ಬೆಂಗಳೂರು: ನಗರದ ರಸ್ತೆಗಳ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಕಟ್ಟಡ ಮತ್ತು ನಿವೇಶನಗಳಿಗೆ ಪರ್ಯಾಯವಾಗಿ ಕೊಡಮಾಡುವ ‘ಅಭಿವೃಧ್ಧಿ ಹಕ್ಕು ವರ್ಗಾವಣೆ‘ (ಟಿಡಿಆರ್) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ವಂಚನೆ ಸಂಬಂಧ ಬಂದಿರುವ ಸುಮಾರು 20 ದೂರುಗಳ ಪರಿಶೀಲನೆ ಮುಗಿಸಿರುವ ‘ಭ್ರಷ್ಟಾಚಾರ ನಿಗ್ರಹ ದಳ‘ (ಎಸಿಬಿ) ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ಸರ್ಕಾರದ ಅನುಮತಿ ಕೇಳಲಿದೆ.

ಇಲ್ಲಿನ ಭಟ್ಟರಹಳ್ಳಿ– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗೆ ಕವಡೇನಹಳ್ಳಿಯಲ್ಲಿ ಸ್ವಾಧೀನಪಡಿಸಿಕೊಂಡ ಜಮೀನೊಂದರ ಟಿಡಿಆರ್‌ ವರ್ಗಾವಣೆಯಲ್ಲಿ ಅಕ್ರಮ ನಡೆದಿರುವುದನ್ನು ಬಯಲಿಗೆಳೆದ ಬಳಿಕ ರಿಯಲ್‌ ಎಸ್ಟೇಟ್‌ ಏಜೆಂಟರು, ಮಧ್ಯವರ್ತಿಗಳಿಂದ ವಂಚನೆಗೊಳಗಾದ ಕಟ್ಟಡ, ಜಮೀನುಗಳ ಮಾಲೀಕರು ದೂರು ದಾಖಲಿಸಲು ಸ್ವಯಂಪ್ರೇರಣೆಯಿಂದ ಮುಂದೆ ಬರುತ್ತಿದ್ದಾರೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಈ ದೂರುಗಳ ಪ್ರಾಥಮಿಕ ವಿಚಾರಣೆ ಮುಗಿದಿದ್ದು ₹ 800 ಕೋಟಿ ವಂಚನೆ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಅವ್ಯವಹಾರದಲ್ಲಿ ಕೆಲ ಸರ್ಕಾರದ ಅಧಿಕಾರಿಗಳು ಭಾಗಿಯಾಗಿರುವುದರಿಂದ ಪ್ರಕರಣ ದಾಖಲಿಸಲು ಸರ್ಕಾರದ ಅನುಮತಿ ಪಡೆಯಬೇಕಿದೆ ಎಂದೂ ಮೂಲಗಳು ಸ್ಪಷ್ಟ‍ಪಡಿಸಿವೆ.

ADVERTISEMENT

2005ರಿಂದ ಟಿಡಿಆರ್‌ ವ್ಯವಸ್ಥೆ ಜಾರಿಗೆ ಬಂದಿದ್ದು, 2015ರವರೆಗೆ ಟಿಡಿಆರ್‌ ವಿತರಿಸುವ ಅಧಿಕಾರ ಮಹಾನಗರಪಾಲಿಕೆ (ಬಿಬಿಎಂ‍ಪಿ) ನಿಯಂತ್ರಣದಲ್ಲಿತ್ತು. ಈಗ ಅದನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ನೀಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ಟಿಡಿಆರ್‌ಗೆ ಸಂಬಂಧಿಸಿದ ಒಟ್ಟು 375 ಫೈಲ್‌ಗಳನ್ನು ಬಿಡಿಎಗೆ ಹಸ್ತಾಂತರಿಸಲಾಗಿತ್ತು. ಇದರಲ್ಲಿ 109 ಬಳಕೆಯಾಗದ ಟಿಡಿಆರ್‌ ಫೈಲ್‌ಗಳೂ ಸೇರಿವೆ. ಟಿಡಿಆರ್‌ ಬಳಕೆಗೆ ಕಾಲಮಿತಿ ಇಲ್ಲದಿರುವುದು ಹಾಗೂ ಅಭಿವೃದ್ಧಿ ಹಕ್ಕುಪತ್ರ ವಿತರಣೆ ವಿಳಂಬ ಅಕ್ರಮಗಳಿಗೆ ದಾರಿ ಮಾಡಿವೆ ಎನ್ನಲಾಗಿದೆ.

ಜಮೀನು ಹಾಗೂ ನಿವೇಶನ ಕಳೆದುಕೊಂಡ ಮಾಲೀಕರಿಂದ ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರ ಖರೀದಿಸಿರುವ ಮಧ್ಯವರ್ತಿಗಳು ಅದನ್ನು ಮೂರ್ನಾಲ್ಕು ರಿಯಲ್‌ ಎಸ್ಟೇಟ್‌ ಏಜೆಂಟರಿಗೆ ಮಾರಾಟ ಮಾಡಿರುವ ಪ್ರಕರಣಗಳೂ ಇವೆ. ಟಿಡಿಆರ್‌ ವಂಚನೆ ಪ್ರಕರಣದ ಬೇರಿಗೆ ಎಸಿಬಿ ಕೈಹಾಕಿದ್ದು ಬುಡಸಹಿತ ಬಯಲಿಗೆ ಎಳೆಯುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಟಿಡಿಆರ್‌ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಬಿಡಿಎ ಎಇಇ ಕೃಷ್ಣಲಾಲ್‌ ಹಾಗೂ ಅವರ ಆಪ್ತರ ಮನೆಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.