ADVERTISEMENT

ಟಿಡಿಆರ್‌ ವಂಚನೆ ಪ್ರಕರಣ: ಎಂಜಿನಿಯರ್‌ ಮನೆ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 20:09 IST
Last Updated 1 ಆಗಸ್ಟ್ 2019, 20:09 IST

ಬೆಂಗಳೂರು: ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ನಿವೇಶನ ಹಾಗೂ ಕಟ್ಟಡಗಳಿಗೆ ಪರ್ಯಾಯವಾಗಿ ನೀಡುವ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ವಂಚನೆ ಪ್ರಕರಣ ಅಗೆದಷ್ಟೂ ವಿಸ್ತಾರವಾಗುತ್ತಿದೆ.

ಟಿ.ಸಿ ಪಾಳ್ಯ ಮತ್ತು ವಾರಾಣಸಿ ರಸ್ತೆಗಾಗಿ ವಿಸ್ತರಿಸಿರುವ ಟಿಡಿಆರ್‌ಸಿಗೆ ಸಂಬಂಧಿಸಿದಂತೆ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್‌ ನಾಗರಾಜು ಅವರ ಜೋಳದ ಪಾಳ್ಯ ಮನೆ ಸೇರಿದಂತೆ 9 ಸ್ಥಳಗಳ ಮೇಲೆ ಎಸಿಬಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿ, ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ.

ಈ ರಸ್ತೆ ವಿಸ್ತರಣೆಗಾಗಿ ಸರ್ವೆ ನಂಬರ್‌ 7ರಲ್ಲಿ 6886 ಚದರಡಿ ಜಮೀನು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ 1.57ಲಕ್ಷ ಚದರಡಿ ಬೋಗಸ್‌ ಟಿಡಿಆರ್‌ ದಾಖಲೆ ಸೃಷ್ಟಿಸಿ ಹೊರಗಿನವರಿಗೆ ದುಬಾರಿ ದರಕ್ಕೆ ಮಾರಲಾಗಿದೆ. ಆ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ ಎಂಬ ಅಂಶ ಎಸಿಬಿ ತನಿಖೆಯಿಂದ ಬಯಲಿಗೆ ಬಂದಿದೆ.

ADVERTISEMENT

ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಎಸ್‌. ನಂದನ ಅವರ ಬಿಟಿಎಂ ಬಡಾವಣೆ ಮನೆ, ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಹೊರಮಾವು ಉಪ ವಲಯ ಸಹಾಯಕ ಅಧಿಕಾರಿಗಳ ಕಚೇರಿ, ಎಂ.ಕೆ. ರೋಚನ್‌ ಅವರ ಕಲ್ಯಾಣ ನಗರ ಮನೆ, ಹೊರಮಾವು ಕಲ್ಕೆರೆ ರಸ್ತೆಯಲ್ಲಿರುವ ಗುಡ್‌ ಹೋಂ ವೆಂಚರ್ಸ್‌, ವಿ. ಗಜೇಂದ್ರ ಎಂಬುವರ ಹೊರಮಾವು ಮನೆ, ಜಿ.ವಿ ಕನ್‌ಸ್ಟ್ರಕ್ಷನ್‌ ಕಲ್ಕೆರೆ ರಸ್ತೆ ಕಚೇರಿ, ಗೋಪಿ ಎಂಬುವರ ಸರ್ಜಾಪುರ ಮುಖ್ಯ ರಸ್ತೆ ಮನೆ ಹಾಗೂ ಆನೆಮ್ಮ ಎಂಬುವರ ಕವಡೇನಹಳ್ಳಿ ಮನೆಗಳ ಮೇಲೆ ದಾಳಿ ನಡೆದಿದೆ.

ಟಿಡಿಆರ್‌ ವಂಚನೆ ಪ್ರಕರಣದಲ್ಲಿ ಬಿಬಿಎಂಪಿ ಕಮಿಷನರ್‌ ಮಂಜುನಾಥ್‌ ಪ್ರಸಾದ್‌ ಅವರಿಂದ ಪೂರ್ವಾನುಮತಿ ಪಡೆದ ಬಳಿಕ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.