ADVERTISEMENT

ದಟ್ಟಣೆಗೆ ತಂತ್ರಜ್ಞಾನವೇ ‘ರಾಮಬಾಣ’: ಎಂ.ಅಬ್ದುಲ್‌ ಸಲೀಂ ಅಭಿಮತ

ಬೆಂಗಳೂರು ನಗರ ಸಂಚಾರ ವಿಭಾಗದ ‘ವಿಶೇಷ ಆಯುಕ್ತ’ ಎಂ.ಅಬ್ದುಲ್‌ ಸಲೀಂ ಅಭಿಮತ

ಅದಿತ್ಯ ಕೆ.ಎ.
Published 16 ನವೆಂಬರ್ 2022, 21:31 IST
Last Updated 16 ನವೆಂಬರ್ 2022, 21:31 IST
ಎಂ. ಅಬ್ದುಲ್‌
ಎಂ. ಅಬ್ದುಲ್‌   

ಬೆಂಗಳೂರು: ಗುಂಡಿ ಬಿದ್ದ ರಸ್ತೆಗಳಿಂದ ಸಾವು–ನೋವು, ಫ್ಲೈಓವರ್‌ಗಳಲ್ಲಿ ಹೆಚ್ಚಿದ ಅಪಘಾತ ಪ್ರಕರಣಗಳು, ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ನಿತ್ಯ ವಾಹನ ಸವಾರರ ಪರದಾಟ, ಕೋವಿಡ್–19 ಸಾಂಕ್ರಾಮಿಕದ ಬಳಿಕ ವಾಹನ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿದ್ದು, ಎಲ್ಲ ರಸ್ತೆಗಳಲ್ಲೂ ದಟ್ಟಣೆ... ಹೀಗೆ ಪೊಲೀಸರು ಹಾಗೂ ರಾಜಧಾನಿ ಜನರು ನಿತ್ಯವೂ ಹೊಸ ಸವಾಲುಗಳು ಹಾಗೂ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರವೇ ಕಾಣಿಸುತ್ತಿಲ್ಲ ಎಂಬ ಕೊರಗು ಜನರದ್ದು.

‘ಸಿಲಿಕಾನ್‌ ಸಿಟಿ’ಯಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಸಂಚಾರ ನಿಯಮಗಳ ಜಾರಿಗೆ ಹೊಸ ಪ್ರಯೋಗಕ್ಕೆ ಸರ್ಕಾರವು ಮುಂದಾಗಿದ್ದು, ವಿಶೇಷ ಕಮಿಷನರ್‌ ಹುದ್ದೆ ಸೃಷ್ಟಿಸಿದೆ.

ಈ ಹುದ್ದೆಗೆ ಎಡಿಜಿಪಿ ದರ್ಜೆಯ ಎಂ. ಅಬ್ದುಲ್‌ ಸಲೀಂ ಅವರನ್ನು ನೇಮಿಸಿದೆ. ವಿಶೇಷ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಸಲೀಂ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಹೊಸ ಮಾರ್ಗೋಪಾಯ, ತಂತ್ರಜ್ಞಾನದ ಬಳಕೆ ಕುರಿತು ಕುರಿತು ವಿವರಿಸಿದರು. ಈ ಹಿಂದೆ ಸಲೀಂ ಅವರು ಸಂಚಾರ ವಿಭಾಗದ ಜಂಟಿ ಆಯುಕ್ತರಾಗಿ ಕೆಲಸ ಮಾಡಿದ್ದರು.

ADVERTISEMENT

*ನಗರದ ವಾಹನ ದಟ್ಟಣೆ ಹೇಗಿದೆ?
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈಗ ಟ್ರಾಫಿಕ್‌ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಈಗಿನ ಸ್ಥಿತಿಯಲ್ಲಿ ಸಂಚಾರ ನಿಯಂತ್ರಣ ಸುಲಭ ಅಲ್ಲ. ನೋಂದಣಿಯಾದ ವಾಹನಗಳ ಸಂಖ್ಯೆಯೇ ನಗರದಲ್ಲಿ 1 ಕೋಟಿಯಷ್ಟಿದೆ. ಕಚೇರಿ ಹಾಗೂ ಶಾಲಾ, ಕಾಲೇಜುಗಳಿಗೆ ತೆರಳುವ ವೇಳೆ ರಸ್ತೆಯಲ್ಲಿ ಅಂದಾಜು 25 ಲಕ್ಷ ವಾಹನಗಳು ಇರುತ್ತವೆ.

* ಸಂಚಾರ ಪೊಲೀಸ್‌ ಸಿಬ್ಬಂದಿ ಕೊರತೆ ಇದೆಯೇ?
44 ಸಂಚಾರ ಪೊಲೀಸ್‌ ಠಾಣೆಗಳಿದ್ದು, ಸದ್ಯಕ್ಕೆ ಸಿಬ್ಬಂದಿಯ ಕೊರತೆ ಇಲ್ಲ.

* ವಿಶೇಷ ಆಯುಕ್ತರ ನೇಮಕದ ಉದ್ದೇಶ ಏನು? ನೀವು ಯಾರಿಗೆ ವರದಿ ಮಾಡಿಕೊಳ್ಳುತ್ತೀರಿ?
ವಿಶೇಷ ಆಯುಕ್ತ ಹಾಗೂ ಜಂಟಿ ಸಂಚಾರ ವಿಭಾಗದ ಆಯುಕ್ತರ ಹುದ್ದೆ ನೀಡಲಾಗಿದೆ. ಸಂಚಾರ ಸುಧಾರಣೆಯೇ ಈ ಹುದ್ದೆಗಳ ಮುಖ್ಯ ಉದ್ದೇಶ. ಈ ವಿಭಾಗವನ್ನು ಸರ್ಕಾರ ಬಲ ಪಡಿಸುವ ಕೆಲಸಕ್ಕೆ ಮುಂದಾಗಿದೆ. ನಾನು ನಗರ ಪೊಲೀಸ್‌ ಆಯುಕ್ತರಿಗೆ ವರದಿ ಮಾಡಿಕೊಳ್ಳುತ್ತೇನೆ. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯಿದ್ದು, ಸಂಚಾರವ್ಯವಸ್ಥೆ ಸುಧಾರಣೆಗೆ ಆಗಾಗ್ಗೆ ಸಭೆ ನಡೆಸುತ್ತಿದೆ. ಎಲ್ಲರ ಸಲಹೆ ಕ್ರೋಡೀಕರಿಸಿ ನೂತನ ಯೋಜನೆ, ಏಕಮುಖ ಸಂಚಾರ ವ್ಯವಸ್ಥೆ ಅನುಷ್ಠಾನಕ್ಕೆ ತರಲಾಗುವುದು.

* ಹೊಸ ಸವಾಲುಗಳು ಯಾವುವು?
ರಸ್ತೆಗಳಲ್ಲಿಯೇ ಜನರು ಹೆಚ್ಚಿನ ಸಮಯ ಕಳೆಯುವಂತಾಗಿದೆ. ಈ ಅವಧಿ ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ. ಸುಗಮ ಸಂಚಾರಕ್ಕೆ ಆದ್ಯತೆ ಇರಲಿದೆ. ಮೊದಲು ಸಮಸ್ಯೆಗಳ ಅಧ್ಯಯನ ನಡೆಸುತ್ತೇನೆ. ಆಗಲೇ ಹೆಬ್ಬಾಳ ಮತ್ತಿತರ ಫ್ಲೈ ಓವರ್‌ ಪರಿಶೀಲನೆ ನಡೆಸಿದ್ದೇನೆ. ಬಿಬಿಎಂಪಿಯೂ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭಿಸಿದೆ. ಉಳಿದಿರುವ ಗುಂಡಿ ಗುರುತಿಸಿ ಬಿಬಿಎಂಪಿಗೆ ವರದಿ ಸಲ್ಲಿಸಲಾಗುವುದು.

*ಹೊಸ ಯೋಜನೆಗಳ ಬಗ್ಗೆ ತಿಳಿಸಿ
ಸದ್ಯಕ್ಕೆ ಹೊಸ ಯೋಜನೆಗಳ ಕುರಿತು ಬಹಿರಂಗಪಡಿಸಲು ಸಾಧ್ಯ ಇಲ್ಲ. ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚಿಸಿ ಮಾಹಿತಿ ನೀಡುತ್ತೇನೆ.

ಟೋಯಿಂಗ್ ಪ್ರಸ್ತಾವ ಇಲ್ಲ
* ಟೋಯಿಂಗ್ ಪ್ರಸ್ತಾವ ಇಲಾಖೆ ಮುಂದೆ ಇದೆಯೇ?

ಟೋಯಿಂಗ್‌ ಬಗೆಗೆ ಯಾವ ಪ್ರಸ್ತಾವವೂ ಇಲ್ಲ. ಪೊಲೀಸರು ಇರುವುದು ದಂಡ ವಸೂಲಿಗೆ ಅಲ್ಲ. ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದೇ ನಮ್ಮ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.