ADVERTISEMENT

‘ಕಾರ್ಯಕರ್ತರಿಗೆ ಗೆಲುವು ಅರ್ಪಣೆ’

​ಪ್ರಜಾವಾಣಿ ವಾರ್ತೆ
Published 23 ಮೇ 2019, 20:17 IST
Last Updated 23 ಮೇ 2019, 20:17 IST

ಬೆಂಗಳೂರು:‘ನರೇಂದ್ರ ಮೋದಿಯವರೇ ಮುಂದಿನ ಐದು ವರ್ಷಗಳು ಪ್ರಧಾನಿ ಆಗಬೇಕೆಂದು ಇಡೀ ದೇಶವೇ ಒಕ್ಕೊರಲಿನಿಂದ ಹೇಳಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರೂ ಅದನ್ನೇ ಬಯಸಿ ಭಾರಿ ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ. ದೇಶಭಕ್ತಿ ಹಾಗೂ ನರೇಂದ್ರ ಮೋದಿ ಅವರಿಗೆ ಸಿಕ್ಕ ಗೆಲುವು ಇದು’.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 3.22 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಿಜೆಪಿಯ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ತಮ್ಮ ಖುಷಿ ಹಂಚಿಕೊಂಡರು.

‘28 ವರ್ಷದ ನನ್ನನ್ನು ಗುರುತಿಸಿ ಬೆನ್ನು ತಟ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಎಲ್ಲ ಮುಖಂಡರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದರು.

ADVERTISEMENT

‘ನರೇಂದ್ರ ಮೋದಿ ಅವರ ಹೊಸ ಭಾರತದ ಕಲ್ಪನೆಯ ಭದ್ರ ಬುನಾದಿಯನ್ನು ಮತದಾರರು ಗಟ್ಟಿಗೊಳಿಸಿದ್ದಾರೆ. ಕರಾವಳಿ ಕರ್ನಾಟಕ, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪರವಾಗಿ ಬೆವರು ಹಾಗೂ ರಕ್ತ ಸುರಿಸಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ನನ್ನ ಗೆಲುವು ಅರ್ಪಿಸುತ್ತೇನೆ’ ಎಂದು ತೇಜಸ್ವಿ ಹೇಳಿದರು.

‘ದೊಡ್ಡ ಅಂತರದಿಂದ ಆರಿಸಿದ ಮತದಾರರಿಗೆ ಧನ್ಯವಾದಗಳು. ಜನರ ನಂಬಿಕೆ, ಪ್ರೀತಿ ಹಾಗೂ ಪ್ರಾಮಾಣಿಕತೆಯನ್ನು ಮುಂದುವರಿಸಿಕೊಂಡು ಹೋಗುವ ಶಕ್ತಿಯನ್ನು ಆ ಭಗವಂತ ನನಗೆ ನೀಡಲಿ ಎಂದು ಪಾರ್ಥಿಸುತ್ತೇನೆ.’

ರಾಜಕಾರಣದ ಗುರುವಿಗೆ ವಿಶೇಷ ನಮನ: ‘ದೆಹಲಿಯಲ್ಲಿ ಕರ್ನಾಟಕದ ಧ್ವನಿಯಾಗಿದ್ದ ದಿವಂಗತ ಅನಂತಕುಮಾರ್ ಅವರು ಸತತ 6 ಬಾರಿ ಸಂಸದರಾಗಿದ್ದ ಕ್ಷೇತ್ರವಿದು. ಅವರು ನನ್ನ ರಾಜಕಾರಣದ ಗುರು. ನನ್ನನ್ನು ಈ ಮಟ್ಟಿಗೆ ಬೆಳೆಸಿರುವ ಅವರಿಗೆ ವಿಶೇಷ ನಮನ ಸಲ್ಲಿಸುತ್ತೇನೆ’ ಎಂದು ತೇಜಸ್ವಿ ಸೂರ್ಯ ಹೇಳಿದರು.

‘ಕ್ಷೇತ್ರ ವ್ಯಾಪ್ತಿಯ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ ಹಾಗೂ ಸ್ವಯಂ ಸೇವಾ ಸಂಘಟನೆ ಸದಸ್ಯರೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಗೆಲುವಿಗೆ ಕಾರಣರಾಗಿದ್ದಾರೆ. ‘ನಮೋ ಭಾರತ’, ‘ಟೀಮ್ ಮೋದಿ’, ‘ದೇಶ್ ಪಹಲೇ’ ಹಾಗೂ ‘ದೇಶ್ ಕೇಲಿಯೇ’ ಸೇರಿದಂತೆ
ಹಲವು ತಂಡಗಳ ಯುವಕರು, ಸ್ವಯಂಪ್ರೇರಿತವಾಗಿ ಪ್ರಚಾರ ಮಾಡಿದ್ದಾರೆ. ಎಲ್ಲರ ಪರಿಶ್ರಮ, ತ್ಯಾಗದಿಂದ ಚುನಾವಣೆಯಲ್ಲಿ ಯಶಸ್ವಿ ಸಾಧಿಸಲು ಸಾಧ್ಯವಾಯಿತು’ ಎಂದು ಹೇಳಿದರು.

***

ಹೆಗಲು ಕೊಟ್ಟು ಕೆಲಸ

ಮುಂದಿನ ವರ್ಷಗಳಲ್ಲಿ ಇಡೀ ಜಗತ್ತಿಗೆ ಭಾರತವೇ ನಾಯಕನಾಗುವ ನಿಟ್ಟಿನಲ್ಲಿ ನರೇಂದ್ರ ಮೋದಿಯವರು ದೇಶ ಕಟ್ಟುತ್ತಿದ್ದಾರೆ. ಅವರ ಕೆಲಸಕ್ಕೆ ನಾನು ಹೆಗಲು ಕೊಡುತ್ತೇನೆ. ಕ್ಷೇತ್ರದ ಜನರ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿಸಿಕೊಂಡು ಕೆಲಸ ಮಾಡುತ್ತೇನೆ

– ತೇಜಸ್ವಿ ಸೂರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.