
ಮೋಹನ್ ಕೃಷ್ಣರಾವ್ (ಒಳಚಿತ್ರ)
ಬೆಂಗಳೂರು: ಬಾಗಲಗುಂಟೆ ಠಾಣಾ ವ್ಯಾಪ್ತಿಯ ವಿಜಯಲಕ್ಷ್ಮಿ ಬಡಾವಣೆಯ ಮೋಹನ್ ಕೃಷ್ಣರಾವ್(45) ಅವರ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಿಯಕರನೊಂದಿಗೆ ಸೇರಿ ತನ್ನ ಮಾಜಿ ಪ್ರಿಯಕರನನ್ನು ಕಿರುತೆರೆ ನಟಿಯೊಬ್ಬರು ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ, ಶಿವಮೊಗ್ಗದ ಬಿಂದು, ಮಂಜುನಾಥ್ ನಗರದ ನಿವಾಸಿ ವಿನಯ್ ಹಾಗೂ ಅಂದ್ರಹಳ್ಳಿಯ ಧನುಷ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಂದು ಅವರ ಹೊಸ ಪ್ರಿಯಕರ ವಿನಯ್.
ಅನುಮಾನಾಸ್ಪದ ಸಾವು ಎಂಬ ಶಂಕೆಯ ಮೇಲೆ ತನಿಖೆ ಆರಂಭವಾಗಿತ್ತು. ಈ ವೇಳೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿತ್ತು. ಅದನ್ನು ಆಧರಿಸಿ ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಯಿತು ಎಂದು ಮೂಲಗಳು ಹೇಳಿವೆ.
ಮೋಹನ್ ಕೃಷ್ಣ ರಾವ್ ಸಣ್ಣಪುಟ್ಟ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ಅವರಿಗೆ ಮದುವೆಯೂ ಆಗಿತ್ತು. ಪತ್ನಿಯಿಂದ ದೂರವಾಗಿ ಒಬ್ಬರೇ ವಾಸವಾಗಿದ್ದರು. ಈ ನಡುವೆ ಬಿಂದು ಪರಿಚಯವಾಗಿತ್ತು. ಬಿಂದು ಅವರಿಗೂ ಮದುವೆಯಾಗಿತ್ತು. ಪತಿಯನ್ನು ಬಿಟ್ಟು ಪ್ರತ್ಯೇಕವಾಗಿ ನೆಲಸಿದ್ದರು. ನಂತರದಲ್ಲಿ ಮೋಹನ್ ಕೃಷ್ಣ ರಾವ್ ಹಾಗೂ ಬಿಂದು ನಡುವೆ ಪರಿಚಯವು ಸ್ನೇಹಕ್ಕೆ ತಿರುಗಿತ್ತು. ಆ ಸ್ನೇಹ ಮುಂದುವರಿಸಿದ್ದ ಇಬ್ಬರೂ, ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥನಗರದ ವಿಜಯಲಕ್ಷ್ಮಿ ಬಡಾವಣೆಯ ನಿವಾಸಿ ನಟರಾಜ್ ಎಂಬುವವರ ಮನೆಯನ್ನು ಬಾಡಿಗೆಗೆ ಪಡೆದು ಸಹಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.
‘ಒಂದೇ ತಿಂಗಳಿಗೆ ಮನೆ ಖಾಲಿ ಮಾಡುವುದಾಗಿ ಮೋಹನ್ ಕೃಷ್ಣ ರಾವ್ ಹಾಗೂ ಬಿಂದು ಹೇಳಿದ್ದರು. ಹೀಗಾಗಿ ಮನೆಯ ಮಾಲೀಕರು ಕರಾರುಪತ್ರ ಮಾಡಿಕೊಟ್ಟಿರಲಿಲ್ಲ’ ಎಂದು ಮೂಲಗಳು ಹೇಳಿವೆ.
‘ಮನೆ ಬಳಿ ಬಂದಾಗೆಲ್ಲ ಬಾಗಿಲು ಹಾಕಿರುತ್ತಿತ್ತು. ಮಾರ್ಚ್ 1ರಂದು ಮನೆಯೊಳಗಿಂದ ದುರ್ವಾಸನೆ ಬರುತ್ತಿದ್ದರಿಂದ ಪರಿಶೀಲನೆ ನಡೆಸಿದಾಗ, ಮೋಹನ್ ಕೃಷ್ಣ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಕ್ಷಣ ಸ್ಥಳೀಯರು ಬಾಗಲಗುಂಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದು ಮೂಲಗಳು ಹೇಳಿವೆ.
‘ಮೋಹನ್ ಕೃಷ್ಣ ಅವರ ಜೊತೆಯಲ್ಲಿದ್ದಾಗಲೇ ಚಾಲಕ ವಿನಯ್ ಹಾಗೂ ಬಿಂದು ಪ್ರೀತಿಸುತ್ತಿದ್ದರು. ವಿನಯ್ ಸಹ ಮದುವೆ ಆಗುವುದಾಗಿ ಭರವಸೆ ನೀಡಿದ್ದರು. ಮದುವೆಗೆ ಮೋಹನ್ ಅವರು ಅಡ್ಡಿ ಆಗುತ್ತಾರೆಂದು ಭಾವಿಸಿದ್ದ ಇಬ್ಬರೂ ಕೊಲೆಗೆ ಸಂಚು ರೂಪಿಸಿದ್ದರು’ ಎಂದು ಮೂಲಗಳು ಹೇಳಿವೆ.
‘ಫೆ.18ರಂದು ರಾತ್ರಿ ಮೋಹನ್ ಕೃಷ್ಣ, ಬಿಂದು, ಹೊಸ ಪ್ರಿಯಕರ ವಿನಯ್ ಹಾಗೂ ಧನುಷ್ ಎಲ್ಲರೂ ಸೇರಿ ಪಾರ್ಟಿ ಮಾಡಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಗಲಾಟೆ ಆರಂಭವಾಗಿತ್ತು. ಆಗ ಅಲ್ಲೇ ಇದ್ದ ವಿನಯ್ ಕೋಪಗೊಂಡು ತನ್ನ ಬಳಿಯಿದ್ದ ಚಾಕುವಿನಿಂದ ಮೋಹನ್ ಕೃಷ್ಣಗೆ ಇರಿದಿದ್ದರು. ಆತ ಜೋರಾಗಿ ಕಿರುಚಾಡಲು ಆರಂಭಿಸಿದಾಗ ಮೂವರೂ ಆರೋಪಿಗಳು ಸೇರಿ ಮುಖಕ್ಕೆ ಮತ್ತು ಮೂಗಿಗೆ ಟೇಪ್ ಸುತ್ತಿ ಉಸಿರುಗಟ್ಟಿಸಿದ್ದರು. ಬಳಿಕ ಮನೆಯ ಬಾಗಿಲು ಹಾಕಿಕೊಂಡು ಪರಾರಿ ಆಗಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಭಜರಂಗಿ’, ‘ಕಾಲಭೈರವ’ ಸಿನಿಮಾಗಳಲ್ಲೂ ಸಣ್ಣಪುಟ್ಟ ಪಾತ್ರಗಳಲ್ಲಿ ಬಿಂದು ಅವರು ನಟಿಸಿದ್ದರು.
ಧನುಷ್, ಬಿಂದು, ವಿನಯ್
ವಿವಿಧ ಸ್ಥಳದಲ್ಲಿ ಆರೋಪಿಗಳ ಸುತ್ತಾಟ
ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಸಿಗಬಾರದೆಂದು ಮೂವರೂ ಆರೋಪಿಗಳು ವಿವಿಧೆಡೆ ಸುತ್ತಾಟ ನಡೆಸಿದ್ದರು. ಬಿಂದು ಹಾಗೂ ವಿನಯ್ ಒಟ್ಟೆಗೆ ಪ್ರವಾಸದ ಹೆಸರಿನಲ್ಲಿ ಕೆ.ಆರ್.ನಗರ ಧರ್ಮಸ್ಥಳ ಸೇರಿ ವಿವಿಧ ಸ್ಥಳಗಳಿಗೆ ಹೋಗಿದ್ದರು ಎಂದು ಪೊಲೀಸರು ಹೇಳಿದರು. ‘ಮನೆಯಲ್ಲಿ ಬಿಂದು ಇರುವುದನ್ನು ಅಕ್ಕಪಕ್ಕದ ಮನೆಯವರು ಗಮನಿಸಿದ್ದರು. ಬಿಂದು ಅವರ ಮೊಬೈಲ್ ಸಂಖ್ಯೆ ಪಡೆದು ಲೊಕೇಶನ್ ಪರಿಶೀಲನೆಗೆ ಒಳಪಡಿಸಲಾಯಿತು. ಬಿಂದು ಹಾಗೂ ವಿನಯ್ ಸಂಪರ್ಕದಲ್ಲಿ ಇರುವುದು ಪತ್ತೆ ಆಯಿತು. ಬಳಿಕ ಅವರಿದ್ದ ಸ್ಥಳಕ್ಕೆ ವಿಶೇಷ ಪೊಲೀಸ್ ತಂಡ ತೆರಳಿ ಬಂಧಿಸಿತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.