ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ನಾಡಹಬ್ಬ ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಅಶ್ಲೀಲ ಮಾತುಗಳನ್ನಾಡಿದ್ದ ಅರ್ಚಕ ಗುರುರಾಜ್ ಅವರನ್ನು ಕೆಂಗೇರಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕೆಂಗೇರಿ ಉಪನಗರದ ಶ್ರೀರಾಘವೇಂದ್ರ ಸ್ವಾಮಿ ಮಠದ ಪಕ್ಕದಲ್ಲಿರುವ ಗಣಪತಿ ದೇವಸ್ಥಾನದ ಸಹಾಯಕ ಅರ್ಚಕ ಗುರುರಾಜ್ ಅವರನ್ನು ಬಂಧಿಸಲಾಗಿದೆ.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿಚಾರದ ಬಗ್ಗೆ ಯುಟ್ಯೂಬ್‌ವೊಂದರ ಜತೆ ಮಾತನಾಡಿದ್ದ ಗುರುರಾಜ್, ಮುಖ್ಯಮಂತ್ರಿ ಅವರನ್ನು ಉದ್ದೇಶಿಸಿ ಕೀಳು ಮಟ್ಟದ ಪದ ಪ್ರಯೋಗಿಸಿ ನಿಂದಿಸಿದ್ದರು. ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಸಮಾಜದ ಶಾಂತಿ ಕದಡಲು ಯತ್ನ ಹಾಗೂ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಆರೋಪದಡಿ ಗುರುರಾಜ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಅರ್ಚಕ ಸ್ಥಾನದಿಂದ ಅಮಾನತು: ಗುರುರಾಜ್ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಶ್ರೀರಾಘವೇಂದ್ರ ಸ್ವಾಮಿ ಸೇವಾ ಸಮಿತಿ ಟ್ರಸ್ಟ್, ಅವರನ್ನು ಅರ್ಚಕ ಸ್ಥಾನದಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.