ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ವಿಲಾಸಿ ಜೀವನ ನಡೆಸಲು ದೇವಾಲಯಗಳ ಬೀಗ ಮುರಿದು ವಿಗ್ರಹಗಳು ಚಿನ್ನ ಮತ್ತು ಬೆಳ್ಳಿ ವಸ್ತು ಕಳವು ಮಾಡುತ್ತಿದ್ದ ಇಬ್ಬರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ಭಟ್ ಹಾಗೂ ಸಂತೋಷ್ ಬಂಧಿತರು.
ಆರೋಪಿಗಳಿಂದ ₹ 14 ಲಕ್ಷ ಮೌಲ್ಯದ 5 ಕೆ.ಜಿ ಬೆಳ್ಳಿ ಸಾಮಗ್ರಿ 67 ಗ್ರಾಂ ಚಿನ್ನಾಭರಣ 1426 ಗ್ರಾಂ ಹಿತ್ತಾಳೆ ವಸ್ತುಗಳು 353 ಗ್ರಾಂ ತಾಮ್ರದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
‘ಉಡುಪಿ ಶಿವಮೊಗ್ಗ ಜಿಲ್ಲೆಗಳಲ್ಲಿ ಅರ್ಚಕನಾಗಿ ಕೆಲಸ ಮಾಡಿದ್ದ ಪ್ರವೀಣ್ ಭಟ್ ಕಳ್ಳತನ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ. ಅದೇ ಜೈಲಿನಲ್ಲಿದ್ದ ಸಂತೋಷ್ ಎಂಬಾತನ ಪರಿಚಯವಾಗಿತ್ತು. ಜೈಲಿನಿಂದ ಹೊರಬಂದ ಬಳಿಕ ಇಬ್ಬರೂ ಜತೆಯಾಗಿ ಬನಶಂಕರಿ ಕುಮಾರಸ್ವಾಮಿ ಲೇಔಟ್ ಜಯನಗರ ಕೆಂಗೇರಿ ರಾಜರಾಜೇಶ್ವರಿ ನಗರ ಸೇರಿ 11 ದೇವಸ್ಥಾನಗಳಿಗೆ ಕನ್ನ ಹಾಕಿದ್ದರು’ ಎಂದು ಪೊಲೀಸರು ಹೇಳಿದರು.
ಕದ್ದ ವಸ್ತುಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದರು. ಇಬ್ಬರ ಬಂಧನದಿಂದ ಬನಶಂಕರಿ ಗಿರಿನಗರ ಠಾಣೆಗಳಲ್ಲಿ ದಾಖಲಾಗಿದ್ದ ತಲಾ 2 ಪ್ರಕರಣಗಳು ಜಯನಗರ ಕೆ. ಜಿ. ಹಳ್ಳಿ ಕೆಂಗೇರಿ ರಾಜರಾಜೇಶ್ವರಿ ನಗರ ಸಂಪಿಗೆಹಳ್ಳಿ ಸುಬ್ರಹ್ಮಣ್ಯಪುರ ಕುಮಾರಸ್ವಾಮಿ ಲೇಔಟ್ ತಲಘಟ್ಟಪುರ ಜಿಗಣಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ತಲಾ 1 ಪ್ರಕರಣಗಳು ಸೇರಿ ಒಟ್ಟು 13 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.