ADVERTISEMENT

ಬೆಂಗಳೂರು | ದೇವರ ಮೇಲಿದ್ದ ನೆಕ್ಲೆಸ್ ಕಳವು: ಅರ್ಚಕ ಸೆರೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 14:33 IST
Last Updated 27 ಸೆಪ್ಟೆಂಬರ್ 2025, 14:33 IST
   

ಬೆಂಗಳೂರು: ಸತ್ಯನಾರಾಯಣ ಪೂಜೆ ಸಂದ‌ರ್ಭದಲ್ಲಿ ದೇವರ ಮೇಲಿದ್ದ ನೆಕ್ಲೆಸ್ ಕಳವು ಮಾಡಿದ್ದ ಅರ್ಚಕರೊಬ್ಬರನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಗ್ರಹಾರ ದಾಸರಹಳ್ಳಿ ನಿವಾಸಿ ರಮೇಶ್ ಶಾಸ್ತ್ರಿ (45) ಬಂಧಿತ ಆರೋಪಿ.

ಆರೋಪಿಯಿಂದ 44 ಗ್ರಾಂ ಚಿನ್ನದ ನೆಕ್ಲೆಸ್‌ ಜಪ್ತಿ ಮಾಡಲಾಗಿದೆ. ಅಶೋಕ್ ಚಂದರಗಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ಅಶೋಕ್ ಚಂದರಗಿ ಅವರು ಕಳೆದ ತಿಂಗಳು ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಯ ಜತೆಗೆ ಸತ್ಯನಾರಾಯಣ ಪೂಜೆ ಮಾಡಿಸಿದ್ದರು. ಪೂಜೆ ನೆರವೇರಿಸಲು ರಮೇಶ್ ಶಾಸ್ತ್ರಿ ಅವರನ್ನು ಕರೆಸಿದ್ದರು. ಮನೆಗೆ ಬಂದಿದ್ದ ರಮೇಶ್ ಶಾಸ್ತ್ರಿ ಅವರು ಪೂಜೆ ಮಾಡಿಕೊಟ್ಟಿದ್ದರು. ಪೂಜೆ ಮಾಡುವಾಗ ಮನೆ ಸದಸ್ಯರ ಗಮನವನ್ನು ಬೇರೆಡೆಗೆ ಸೆಳೆದು ದೇವರ ಮೇಲಿದ್ದ ನೆಕ್ಲೆಸ್‌ ಕಳವು ಮಾಡಿದ್ದರು. ಎರಡು ದಿನದ ಬಳಿಕ ದೇವರ ಫೋಟೊ ತೆಗೆಯುವಾಗ ಚಿನ್ನದ ನೆಕ್ಲೆಸ್ ನಾಪತ್ತೆಯಾಗಿತ್ತು. ಅದನ್ನು ಕಂಡ ಮನೆಯವರು ಗಾಬರಿಗೊಂಡಿದ್ದರು. ತಕ್ಷಣವೇ ರಮೇಶ್ ಶಾಸ್ತ್ರಿ ಅವರಿಗೆ ಕರೆ ಮಾಡಿ ವಿಚಾರಿಸಿದ್ದರು. ನನಗೆ ಗೊತ್ತಿಲ್ಲ ಎಂಬುದಾಗಿ ಅರ್ಚಕ ಹೇಳಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಅನುಮಾನಗೊಂಡು ರಮೇಶ್ ಶಾಸ್ತ್ರಿ ಅವರ ವಿರುದ್ಧ ಮನೆಯ ಮಾಲೀಕರು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಅನಾರೋಗ್ಯ ಕಾರಣದಿಂದ ಚಿಕಿತ್ಸೆ ಪಡೆಯಲು ನೆಕ್ಲೆಸ್‌ ಕಳವು ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.