ADVERTISEMENT

2ಕ್ಕಿಂತ ಹೆಚ್ಚು ದಿನ ಸೋಂಕು ಲಕ್ಷಣವಿದ್ದರೆ ಮಕ್ಕಳಿಗೆ ಕೋವಿಡ್ ಪರೀಕ್ಷೆ: ಆಯುಕ್ತ

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 20:32 IST
Last Updated 15 ಸೆಪ್ಟೆಂಬರ್ 2021, 20:32 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ಎಲ್ಲಾ ಶಾಲೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ಗೊತ್ತುಪಡಿಸಲಾಗಿದೆ. ಎರಡಕ್ಕಿಂತ ಹೆಚ್ಚು ದಿನ ಕೊರೊನಾ ಸೋಂಕು ಗುಣಲಕ್ಷಣಗಳು ಕಂಡುಬಂದರೆ, ಅಂತಹ ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಲು ಕ್ರಮವಹಿಸಬೇಕು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಕ್ಕಳ ತಜ್ಞರ ಸಮಿತಿ ಹಾಗೂ ತಾಂತ್ರಿಕ ತಜ್ಞರ ಸಮಿತಿಗಳ ಜೊತೆ ಅಧಿಕಾರಿಗಳು ಬುಧವಾರ ಸಭೆ ನಡೆಸಿದರು. ಮಕ್ಕಳಿಗೆ ಸೋಂಕು ತಗುಲದಂತೆ ತಡೆಯಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ, ಮಕ್ಕಳಿಗೆ ಕೋವಿಡ್‌ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಹಾಗೂ ಅವರಿಗಾಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚಿಸಲಾಯಿತು.

‘ಪ್ರತಿ ಶಾಲೆಯ ನೋಡಲ್ ಅಧಿಕಾರಿಯೂ ಆ ಶಾಲಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿ ಜೊತೆ ಸಂಪರ್ಕ ಹೊಂದಿರಬೇಕು. 2 ದಿನಗಳಿಗಿಂತ ಹೆಚ್ಚು ದಿನಗಳ ಸೋಂಕು ಲಕ್ಷಣ ಕಂಡುಬರುವ ಮಕ್ಕಳು ಶಾಲೆಗೆ ಬಾರದಂತೆ ತಿಳಿ ಹೇಳಬೇಕು. ಅಂತಹ ಮಕ್ಕಳ ಮಾಹಿತಿಯನ್ನು ಪಿಎಚ್‌ಸಿಯ ವೈದ್ಯರಿಗೆ ನೀಡಬೇಕು. ಅಂತಹ ಮಕ್ಕಳ ಮನೆಗೆ ವೈದ್ಯಾಧಿಕಾರಿ ತಂಡವು ತೆರಳಿ ಪರೀಕ್ಷೆ ನಡೆಸಬೇಕು’ ಎಂದು ಮುಖ್ಯ ಆಯುಕ್ತರು ಸೂಚಿಸಿದರು.

ADVERTISEMENT

‘ನಗರದಲ್ಲಿ ಮಕ್ಕಳಲ್ಲಿ ಸೊಂಕು ಅಷ್ಟಾಗಿ ಕಂಡುಬರುತ್ತಿಲ್ಲ. ಎರಡು ದಿನಕ್ಕಿಂತ ಹೆಚ್ಚು ಸೋಂಕು ಲಕ್ಷಣ ಹೊಂದಿರುವವರಿಗೆ ಆಸ್ಪತ್ರೆಗಳಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದ್ದು, ಇಂತಹ ಬಹುತೇಕ ಮಕ್ಕಳಲ್ಲಿ ಸೋಂಕು ದೃಢಪಡುತ್ತಿಲ್ಲ. 12 ವರ್ಷದವರೆಗಿನ ಶೇ 7.21ರಷ್ಟು ಮಕ್ಕಳಲ್ಲಿ ಹಾಗೂ 13 ರಿಂದ 18 ವರ್ಷದೊಳಗಿನ ಶೇ. 8.21ರಷ್ಟು ಮಕ್ಕಳಲ್ಲಿ ಸೋಂಕು ಕಂಡುಬರುತ್ತಿದೆ’ ಎಂದರು.

‘ಶಾಲೆಗೆ ಹೋಗುವ ಮಕ್ಕಳ ಸಂಪರ್ಕ ಹೊಂದಿರುವವರಿಗೆ ಲಸಿಕೆ ನೀಡಬೇಕು. ಇದರಿಂದ ಎಲ್ಲರೂ ಸುರಕ್ಷಿತವಾಗಿರಬಹುದು. ಈ ಸಮಯದಲ್ಲಿ ಸಾಮಾನ್ಯವಾಗಿ ಜ್ವರ, ನೆಗಡಿ, ಕೆಮ್ಮು ರೀತಿಯ ಲಕ್ಷಣಗಳು ಕಂಡುಬಂದರೂ ವಾರದೊಳಗೆ ಗುಣಮುಖರಾಗುತ್ತಾರೆ’ ಎಂದು ಹೇಳಿದರು.

ಸಭೆಯಲ್ಲಿ ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ. ಬಿ.ಕೆ. ವಿಜಯೇಂದ್ರ, ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ ಉಪಸ್ಥಿತರಿದ್ದರು.

-0-

ಜೀನೋಮ್‌ ಸೀಕ್ವೆನ್ಸಿಂಗ್‌: ಹೆಚ್ಚು ಡೆಲ್ಟಾ ತಳಿ ಪತ್ತೆ

ನಗರದಲ್ಲಿ ನಡೆಸಲಾದ ಸೆರೊ ಸಮೀಕ್ಷೆ ಹಾಗೂ ಜಿನೋಮ್ ಸೀಕ್ವೆನ್ಸಿಂಗ್‌ ಕುರಿತು ತಾಂತ್ರಿಕ ತಜ್ಞರ ಸಮಿತಿ ಜೊತೆಗಿನ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

‘ಜೀನೋಮ್ ಸೀಕ್ವೆನ್ಸಿಂಗ್‌ನಲ್ಲಿ ಡೆಲ್ಟಾ ತಳಿಗಳು ಹೆಚ್ಚು ಕಂಡುಬಂದಿವೆ. ನಗರದಲ್ಲಿ ಬೇರೆ ಯಾವುದೇ ರೂಪಾಂತರ ತಳಿಗಳು ಕಂಡುಬಂದಲ್ಲಿ ಪರೀಕ್ಷಿಸಲು ತಜ್ಞರ ಸಮಿತಿ ಸಲಹೆ ನೀಡಿದೆ. ಜೀನೋಮ್ ಸೀಕ್ವೆನ್ಸಿಂಗ್ ಮುಂದುವರಿಸುವಂತೆಯೂ ಸಮಿತಿ ಸೂಚಿಸಿದೆ. ಅದರ ಪ್ರಕಾರ, ಬಿಬಿಎಂಪಿ ಮಾದರಿಗಳನ್ನು ಸಂಗ್ರಹಿಸುತ್ತದೆ ಮತ್ತು ನಗರದಲ್ಲಿ ಬೇರೆ ಯಾವುದೇ ರೂಪಾಂತರಗಳು ಕಂಡುಬಂದಿವೆಯೇ ಎಂದು ಪರೀಕ್ಷಿಸಲಾಗುತ್ತದೆ’ ಎಂದು ಗೌರವ್‌ ಗುಪ್ತ ತಿಳಿಸಿದರು.

‘ಎರಡು ಬಾರಿ ಲಸಿಕೆ ಪಡೆದ ಬಳಿಕವೂ ಕೋವಿಡ್ ಸೋಂಕು ಕಂಡುಬಂದವರ ಮಾದರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದು ಜಿನೋಮ್ ಸೀಕ್ವೆನ್ಸಿಂಗ್‌ ಮಾಡಲಾಗುತ್ತದೆ. ಇದರ ವರದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು’ ಎಂದರು.

‘ಸೆರೊ ಸಮೀಕ್ಷೆಗೆ ಸಂಬಂಧಿಸಿದಂತೆ ಇನ್ನೂ ವಿವರವಾದ ಮಾಹಿತಿ ನೀಡುವಂತೆ ಸಮಿತಿಯ ತಜ್ಞರು ತಿಳಿಸಿದ್ದಾರೆ. ವಿವರವಾದ ಮಾಹಿತಿಯನ್ನು ಸಂಗ್ರಹಿಸಿದ ನಂತರವೇ ಅದರ ವರದಿಯನ್ನು ಬಿಡುಗಡೆಗೊಳಿಸಲಿದ್ದೇವೆ’ ಎಂದು ಅವರು ತಿಳಿಸಿದರು.

ಜೀನೋಮ್‌ಸೀಕ್ವೆನ್ಸಿಂಗ್‌ನಲ್ಲಿ ಒಟ್ಟು418 ಮಾದರಿಗಳ ಫಲಿತಾಂಶ ಲಭ್ಯವಾಗಿವೆ. ಅವುಗಳಲ್ಲಿ ಎವೈ.1 (ಡೆಲ್ಟಾ ಪ್ಲಸ್‌ ವಂಶಾವಳಿ), ಬಿ.1.1.7 (ಆಲ್ಫಾ), ಬಿ.1.351 (ಬೀಟಾ); ಪಿ.1 (ಗಾಮಾ) ಹಾಗೂ ಎಪ್ಸಿಲಾನ್‌ನ ಯಾವುದೇ ತಳಿಗಳು ಪತ್ತೆಯಾಗಿಲ್ಲ.

ಜೀನೋಮ್‌ ಸೀಕ್ವೆನ್ಸಿಂಗ್‌ನಲ್ಲಿ ಪತ್ತೆಯಾದ ತಳಿಗಳು

ತಳಿ; ಸಂಖ್ಯೆ

ಬಿ.1.617.2 (ಡೆಲ್ಟಾ); 268

ಬಿ.1.617.1 (ಕಪ್ಪಾ); 2

ಎವೈ.3 (ಡೆಲ್ಟಾ ವಂಶಾವಳಿಯ ರೂಪಾಂತರಿ); 3

ಎವೈ.6 (ಡೆಲ್ಟಾ ವಂಶಾವಳಿಯ ರೂಪಾಂತರಿ); 38

ಎವೈ.4 (ಡೆಲ್ಟಾ ವಂಶಾವಳಿಯ ರೂಪಾಂತರಿ); 4

ಇತರ ರೂಪಾಂತರಿಗಳು; 16

ಮಾದರಿಯಲ್ಲಿ ದೋಷವಿದ್ದುದು; 87

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.