ADVERTISEMENT

ಒಎಲ್‌ಎಕ್ಸ್‌ ನೋಡಿ ಬೈಕ್ ಕದಿಯುತ್ತಿದ್ದ!

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 19:08 IST
Last Updated 17 ಅಕ್ಟೋಬರ್ 2018, 19:08 IST
ಮಂಜುನಾಥ
ಮಂಜುನಾಥ   

ಬೆಂಗಳೂರು: ಟೆಸ್ಟ್ ರೈಡ್ ನೆಪದಲ್ಲಿ ದುಬಾರಿ ಬೆಲೆಯ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಮಂಜುನಾಥ ಹೆಗಡೆ (20) ಎಂಬಾತನನ್ನು ಬಂಧಿಸಿರುವ ಎಲೆಕ್ಟ್ರಾನಿಕ್‌ಸಿಟಿ ಪೊಲೀಸರು, ₹ 12 ಲಕ್ಷ ಮೌಲ್ಯದ ಬುಲೆಟ್ ಹಾಗೂ ಐದು ಕೆಟಿಎಂ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಸುಂಕದಕಟ್ಟೆ ನಿವಾಸಿಯಾದ ಈತ, ಪ್ರತಿದಿನ ಒಎಲ್‌ಎಕ್ಸ್‌ನಲ್ಲಿ ಜಾಹೀರಾತುಗಳನ್ನು ನೋಡುತ್ತಿದ್ದ. ಕೆಟಿಎಂ ಅಥವಾ ಬುಲೆಟ್ ಬೈಕ್‌ ಮಾರಾಟಕ್ಕಿದ್ದರೆ, ಕೂಡಲೇ ಅದರ ಮಾಲೀಕರಿಗೆ ಕರೆ ಮಾಡಿ ತಾನು ಖರೀದಿ ಮಾಡುವುದಾಗಿ ಹೇಳುತ್ತಿದ್ದ. ಬಳಿಕ ಬೈಕ್ ನೋಡಬೇಕೆಂದು ಅವರನ್ನು ಕರೆಸಿಕೊಳ್ಳುತ್ತಿದ್ದ.

‘ಒಮ್ಮೆ ಓಡಿಸಿ ನೋಡುತ್ತೇನೆ’ ಎಂದು ನಂಬಿಸಿ ಬೈಕ್ ತೆಗೆದುಕೊಂಡು ಹೋಗುತ್ತಿದ್ದ ಮಂಜುನಾಥ, ವಾಪಸ್ ಬರುತ್ತಲೇ ಇರಲಿಲ್ಲ. ಇದೇ ರೀತಿ ಹುಳಿಮಾವು, ಬನ್ನೇರುಘಟ್ಟ, ಆನೇಕಲ್, ಪರಪ್ಪನ ಅಗ್ರಹಾರ ಹಾಗೂ ಎಲೆಕ್ಟ್ರಾನಿಕ್‌ ಸಿಟಿ ಠಾಣೆಗಳ ವ್ಯಾಪ್ತಿಯಿಂದ ಆರು ಬೈಕ್‌ಗಳನ್ನು ಕಳವು ಮಾಡಿದ್ದ ಆರೋಪಿ, ಕಡಿಮೆ ಬೆಲೆಗೆ ಅವುಗಳನ್ನು ಮಾರಾಟ ಮಾಡಿ ಗೋವಾದ ಕ್ಯಾಸಿನೋಗೆ ಹೋಗಿ ಮೋಜು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ADVERTISEMENT

1 ಮೊಬೈಲ್‌ 40 ಸಿಮ್: ‘ಪೊಲೀಸರು ಮೊಬೈಲ್ ಸಂಖ್ಯೆಯಿಂದ ತನ್ನನ್ನು ಪತ್ತೆ ಮಾಡಬಹುದೆಂದು ಆತ 40 ಸಿಮ್‌ಗಳನ್ನು ಇಟ್ಟುಕೊಂಡಿದ್ದ. ಒಬ್ಬರಿಗೆ ಕರೆ ಮಾಡಿ ಬೈಕ್ ಕದ್ದರೆ, ಮತ್ತೆ ಆ ಸಿಮ್ ಬಳಸುತ್ತಿರಲಿಲ್ಲ’ ಎಂದು ಪೊಲೀಸರು ಹೇಳಿದರು.

ಟೆಸ್ಟ್ ರೈಡ್ ನೆಪದಲ್ಲೇ ವಾಹನ ಕದಿಯುವ ಹಳೆ ಆರೋಪಿಗಳ ಫೋಟೊಗಳನ್ನು ದೂರುದಾರರಿಗೆ ತೋರಿಸಿದಾಗ, ಒಬ್ಬರು ಮಂಜುನಾಥನನ್ನು ಗುರುತಿಸಿದರು. ಎಂಟು ತಿಂಗಳ ಹಿಂದೆ ಕೆ.ಜಿ.ಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ ಈತ ಒಂದೂವರೆ ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

‘ಆರೋಪಿ ಯಾವ್ಯಾವ ಸಂಖ್ಯೆಗಳಿಂದ ದೂರುದಾರರಿಗೆ ಕರೆ ಮಾಡಿದ್ದನೋ, ಆ ಸಂಖ್ಯೆಗಳನ್ನು ಪಡೆದು ತನಿಖೆ ಪ್ರಾರಂಭಿಸಿದೆವು. 40ರಲ್ಲಿ ಒಂದು ಸಿಮ್ ಮಾತ್ರ ಚಾಲ್ತಿಯಲ್ಲಿತ್ತು. ಅದರ ಜಾಡು ಹಿಡಿದು ಹೊರಟಾಗ ಯಲಹಂಕದಲ್ಲಿ ಆರೋಪಿ ಸಿಕ್ಕಿಬಿದ್ದ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.