ADVERTISEMENT

ಕಾರು ಖರೀದಿ ಕನಸಿಗೆ ಬಲಿ

‘ರೇಂಜ್ ರೋವರ್‌’ ಟೆಸ್ಟ್‌ ಡ್ರೈವ್‌ ವೇಳೆ ಅವಘಡ l ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 19:27 IST
Last Updated 26 ಮಾರ್ಚ್ 2019, 19:27 IST
ಅಪಘಾತದಿಂದಾಗಿ ಜಖಂಗೊಂಡಿರುವ ಕಾರು
ಅಪಘಾತದಿಂದಾಗಿ ಜಖಂಗೊಂಡಿರುವ ಕಾರು   

ಬೆಂಗಳೂರು: ಮನೆ– ಕಟ್ಟಡಗಳ ಒಳಾಂಗಣ ವಿನ್ಯಾಸಗಾರ ಸಾಗರ್‌ ಜಯರಾಮ್ ಅವರಿಗೆ ಹೊಸ ಕಾರು ಖರೀದಿಸುವ ಕನಸಿತ್ತು. ಆ ಕನಸೇ ಅವರ ಪ್ರಾಣಕ್ಕೆ ಕುತ್ತು ತಂದಿದೆ.

‘ರೇಂಜ್ ರೋವರ್‌’ ಕಾರು ಖರೀದಿಸುವುದಕ್ಕಾಗಿ ಕುಟುಂಬ ಸಮೇತ ಶೋರೂಮ್‌ಗೆ ತೆರಳಿದ್ದ ಸಾಗರ್‌ ಜಯರಾಮ್ (31) ಎಂಬುವರು, ನೈಸ್‌ ರಸ್ತೆಯಲ್ಲಿ ಪರೀಕ್ಷಾರ್ಥ ಚಾಲನೆ ಮಾಡುವ ವೇಳೆ ಕಾರು ಪಲ್ಟಿಯಾಗಿ ದುರ್ಮರಣಕ್ಕೀಡಾಗಿದ್ದಾರೆ.

‘ಗಿರಿನಗರ ನಿವಾಸಿ ಆಗಿದ್ದ ಸಾಗರ್, ಪತ್ನಿ ಸಂಧ್ಯಾ (27), ಪುತ್ರ ಸಮರ (6) ಹಾಗೂ ಸ್ನೇಹಿತಗೌತಮ್ (27) ಜೊತೆ ‘ಟೆಸ್ಟ್‌ ಡ್ರೈವ್‌’ ಮಾಡುತ್ತಿದ್ದರು. ಅವಘಡದಲ್ಲಿ ಸಂಧ್ಯಾ, ಸಮರ ಹಾಗೂ ಗೌತಮ್‌ ತೀವ್ರವಾಗಿ ಗಾಯಗೊಂಡಿದ್ದಾರೆ. ಮೂವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಬ್ಯಾಟರಾಯನಪುರ ಸಂಚಾರ ಪೊಲೀಸರು ಹೇಳಿದರು.

ADVERTISEMENT

‘ಒಳಾಂಗಣ ವಿನ್ಯಾಸಗಾರರಾದ ಸಾಗರ್‌ ಹಾಗೂ ಗೌತಮ್, ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಕಾರು ಖರೀದಿಸಲು ಇಚ್ಛಿಸಿದ್ದ ಸಾಗರ್,ಪತ್ನಿ, ಪುತ್ರ ಹಾಗೂ ಗೌತಮ್‌ ಜೊತೆ ಹೊಸೂರು ರಸ್ತೆಯಲ್ಲಿರುವ ಶೋರೂಮ್‌ಗೆ ಹೋಗಿದ್ದರು’ ಎಂದು‍ಪೊಲೀಸರು ಹೇಳಿದರು.

‘ರೇಂಜ್‌ ರೋವರ್‌ ಕಾರು ನೋಡಿದ್ದ ಸಾಗರ್, ಶೋರೂಮ್‌ ಚಾಲಕ ಶಿವಕುಮಾರ್ ಎಂಬುವರನ್ನು ಕರೆದುಕೊಂಡು ನೈಸ್‌ ರಸ್ತೆಯಲ್ಲಿಟೆಸ್ಟ್‌ ಡ್ರೈವ್‌ಗೆ ಹೊರಟಿದ್ದರು‌.’

‘ಟೋಲ್‌ಗೇಟ್‌ ಸಮೀಪ ಮಧ್ಯಾಹ್ನ 2.30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ್ದರಿಂದಾಗಿ ರಸ್ತೆ ಪಕ್ಕದ ಕಬ್ಬಿಣದ ಸರಳುಗಳಿಗೆ ಕಾರು ಡಿಕ್ಕಿ ಹೊಡೆದಿತ್ತು. ನಂತರ, ರಸ್ತೆ ಪಕ್ಕದಲ್ಲಿದ್ದ 12 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿತ್ತು. ಕಾರು ಜಖಂಗೊಂಡು ಸಾಗರ್ ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಪ್ರತ್ಯಕ್ಷದರ್ಶಿಯಿಂದ ಹೇಳಿಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸಹಾಯಕ್ಕೆ ಬಂದ ಟೋಲ್‌ಗೇಟ್‌ ಸಿಬ್ಬಂದಿ ಹಾಗೂ ಸ್ಥಳೀಯರು, ಕಾರಿನಲ್ಲಿದ್ದವರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದರು’ ಎಂದರು.

ಚಾಲಕನ ಬಗ್ಗೆ ಗೊಂದಲ: ‘ಅವಘಡಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೆ, ಕಾರನ್ನು ಯಾರು ಚಲಾಯಿಸುತ್ತಿದ್ದರು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ’ ಎಂದು ಪೊಲೀಸರು ಹೇಳಿದರು.

‘ಅವಘಡದ ವೇಳೆ ಶೋರೂಮ್ ಚಾಲಕ ಶಿವಕುಮಾರ್‌, ಕಾರಿನಿಂದ ಹೊರಗೆ ಜಿಗಿದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಅವರೇ ಕಾರು ಓಡಿಸುತ್ತಿದ್ದರೇ? ಅಥವಾ ಸಾಗರ ಓಡಿಸುತ್ತಿದ್ದರೇ? ಎಂಬುದನ್ನು ತಿಳಿದುಕೊಳ್ಳಬೇಕಿದೆ. ಶಿವಕುಮಾರ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಗಾಯಾಳುಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕ ಹೇಳಿಕೆ ಪಡೆಯಲಾಗುವುದು’ ಎಂದರು.

ಕಾರಿನ ದೋಷದ ಬಗ್ಗೆ ತನಿಖೆ

‘ಕಾರಿನ ತಾಂತ್ರಿಕ ದೋಷದಿಂದ ಅವಘಡ ಸಂಭವಿಸಿತೇ ಎಂಬುದನ್ನು ತಿಳಿದುಕೊಳ್ಳಲು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಸ್ಥಳದಿಂದ ಕಾರನ್ನು ತೆರವುಗೊಳಿಸಲಾಗಿದೆ. ಅದರ ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.