ADVERTISEMENT

ಥಣಿಸಂದ್ರ: 22 ಕಟ್ಟಡ ನೆಲಸಮ

ಬಿಡಿಎ ಕಾರ್ಯಾಚರಣೆ: ₹ 80 ಕೋಟಿ ಮೌಲ್ಯದ ಸ್ವತ್ತು ವಶ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 16:53 IST
Last Updated 8 ಜನವರಿ 2026, 16:53 IST
ಥಣಿಸಂದ್ರ ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳನ್ನು ನೆಲಸಮ ಮಾಡಲಾಯಿತು. 
ಥಣಿಸಂದ್ರ ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳನ್ನು ನೆಲಸಮ ಮಾಡಲಾಯಿತು.    

ಬೆಂಗಳೂರು: ಕೆ.ಆರ್.ಪುರ ಹೋಬಳಿಯ ಥಣಿಸಂದ್ರ ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 22 ಕಟ್ಟಡಗಳನ್ನು ಗುರುವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೆಲಸಮಗೊಳಿಸಿದೆ.

ಬೆಂಗಳೂರು ಪೂರ್ವ ತಾಲ್ಲೂಕಿನ ಥಣಿಸಂದ್ರ ಗ್ರಾಮದ ಸರ್ವೆ ನಂ. 28/1 ಮತ್ತು 28/2ರಲ್ಲಿ ಎರಡು ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆ, ಗೋದಾಮು ಹಾಗೂ ಗ್ಯಾರೇಜ್‌ಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಗಿದೆ. ಸುಮಾರು ₹80 ಕೋಟಿ ಬೆಲೆ ಬಾಳುವ ಪ್ರದೇಶವನ್ನು ಪ್ರಾಧಿಕಾರ ವಶಪಡಿಸಿಕೊಂಡಿದೆ.

‘ಯಾವುದೇ ನೋಟಿಸ್‌ ನೀಡದೆ ಮನೆಗಳನ್ನು ನೆಲಸಮ ಮಾಡಿ, ವಸ್ತುಗಳನ್ನು ರಸ್ತೆಗೆ ಹಾಕಲಾಗಿದೆ. ಮಕ್ಕಳು, ಹಿರಿಯರು ಏನು ಮಾಡಬೇಕು?  ಮಲಗಲು ಜಾಗವಿಲ್ಲ. ರಸ್ತೆಯಲ್ಲಿ ಮಲಗಬೇಕೇ?. ಮನೆಗೆ ಸಂಬಂಧಿಸಿದ ದಾಖಲೆಗಳು ಇವೆ. ಇ–ಖಾತಾ ಇದೆ. ನೀರು, ವಿದ್ಯುತ್ ಸಂಪರ್ಕ ನೀಡಲಾಗಿದೆ. ಇಪ್ಪತ್ತು ವರ್ಷಗಳಿಂದ ಇದೇ ಜಾಗದಲ್ಲಿ ವಾಸಿಸುತ್ತಿದ್ದೇವೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಅರ್ಕಾವತಿ ಬಡಾವಣೆಗಾಗಿ 2004ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಭೂ ಮಾಲೀಕರೊಬ್ಬರು ಈ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ ಮಾರಾಟ ಮಾಡಿದ್ದರು. ಜತೆಗೆ ಪ್ರಾಧಿಕಾರದಿಂದ ಪರಿಹಾರವನ್ನು ಪಡೆದುಕೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವರು ನ್ಯಾಯಾಲಯದ ಮೆಟ್ಟಿಲೇರಿದರು. ವಿಚಾರಣೆ ನಡೆದು, ಪ್ರಾಧಿಕಾರದ ಪರವಾಗಿ ನ್ಯಾಯಾಲಯ ಆದೇಶ ನೀಡಿತು. ಹಾಗಾಗಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ತೆರವು ಮಾಡಲಾಗಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

‘ಅರ್ಕಾವತಿ ಬಡಾವಣೆಗೆ ಹೊಂದಿಕೊಂಡಂತೆ ಎರಡೂವರೆ ಎಕರೆ ಜಾಗ ಇದ್ದು, ಇದನ್ನು ನಿವೇಶನವಾಗಿ ಅಭಿವೃದ್ಧಿ ಪಡಿಸಲಾಗುವುದು. ಸದ್ಯಕ್ಕೆ ಎರಡು ಎಕರೆ ಜಾಗದಲ್ಲಿದ್ದ ಅಕ್ರಮ ಕಟ್ಟಡಗಳನ್ನು ತೆರವು ಮಾಡಲಾಗಿದೆ. ಉಳಿದ ಅರ್ಧ ಎಕರೆ ಜಾಗದಲ್ಲೂ ಆರು ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನು ತೆರವು ಮಾಡಲಾಗುವುದು. ಕೋರ್ಟ್‌ ಆದೇಶವನ್ನು ಸ್ಥಳೀಯರಿಗೆ ತಿಳಿಸಿದ ಬಳಿಕವೇ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಪ್ರಾಧಿಕಾರದ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕ, ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನೆರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.