ADVERTISEMENT

ದೃಷ್ಟಿಮಾಂದ್ಯ ಆಟಗಾರರ ಮೇಲೆ ಕ್ರಿಕೆಟ್‌ನ ಸಾಮಾಜಿಕ ಪರಿಣಾಮ ಅಧ್ಯಯನ

ಸಿಎಬಿಐ, ವಿಸ್ಕೂಲ್ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 8:23 IST
Last Updated 16 ಫೆಬ್ರುವರಿ 2021, 8:23 IST
ನಗರದಲ್ಲಿ ಶನಿವಾರ 'ಸಮರ್ಥನಂ ಅಂಗವಿಕಲರ ಸಂಸ್ಥೆ' ಆಯೋಜಿಸಿದ್ದ "ಅಂಧರ ಕ್ರಿಕೆಟ್ ಕುರಿತ ವಿಚಾರ ಸಂಕಿರಣ" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಧ ಕ್ರಿಕೆಟ್ ಆಟಗಾಗಾರರು -ಪ್ರಜಾವಾಣಿ ಚಿತ್ರ
ನಗರದಲ್ಲಿ ಶನಿವಾರ 'ಸಮರ್ಥನಂ ಅಂಗವಿಕಲರ ಸಂಸ್ಥೆ' ಆಯೋಜಿಸಿದ್ದ "ಅಂಧರ ಕ್ರಿಕೆಟ್ ಕುರಿತ ವಿಚಾರ ಸಂಕಿರಣ" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಧ ಕ್ರಿಕೆಟ್ ಆಟಗಾಗಾರರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ದೃಷ್ಟಿಮಾಂದ್ಯ ಆಟಗಾರರ ಮೇಲೆ ಕ್ರಿಕೆಟ್‌ನ ಸಾಮಾಜಿಕ ಪರಿಣಾಮ ಅಧ್ಯಯನ ಮಾಡುವ ಸಂಬಂಧ ಕ್ರಿಕೆಟ್ ಅಸೋಸಿಯೇಶನ್ ಫಾರ್ ಬ್ಲೈಂಡ್‌ ಇನ್ ಇಂಡಿಯಾ (ಸಿಎಬಿಐ), ವಿಸ್ಕೂಲ್ (ಎಸ್.ಪಿ.ಮಂಡಲ್ ಅವರ ಪ್ರಿನ್ಸಿಪಲ್ ಎಲ್.ಎನ್.ವೆಲಿಂಗ್‌ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಅಂಡ್ ರಿಸರ್ಚ್) ಜತೆ ಒಪ್ಪಂದ ಮಾಡಿಕೊಂಡಿದೆ.

ಇದರ ಅನ್ವಯ ವಿಸ್ಕೂಲ್‌ನ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಕನ್ಸಲ್ಟೆನ್ಸಿ ಪ್ರಾಜೆಕ್ಟ್ (ಸಿಇಸಿಪಿ) ಈ ಅಧ್ಯಯನ ಕೈಗೊಳ್ಳಲಿದೆ. ಕ್ರಿಕೆಟ್‌ನಂಥ ಕ್ರೀಡೆ ಕಾಲಾನುಕ್ರಮದಲ್ಲಿ ಇಂಥ ಆಟಗಾರರ ಜೀವನ ಗುಣಮಟ್ಟವನ್ನು ವಿಸ್ತರಿಸುವಲ್ಲಿ ಹೇಗೆ ನೆರವಾಗುತ್ತದೆ ಎನ್ನುವುದನ್ನು ಅಧ್ಯಯನ ಮಾಡಲಾಗುವುದು. ಇಂಥ ಆಟಗಾರರ ದೈಹಿಕ ಚಟುವಟಿಕೆ, ಬೌದ್ಧಿಕ ಬೆಳವಣಿಗೆ, ಸಾಮಾಜಿಕ ಜೀವನ ಮತ್ತು ಆರ್ಥಿಕ ಸ್ವಾತಂತ್ರ ಸುಧಾರಣೆ ಸಾಧ್ಯತೆಯನ್ನು ಕೂಡಾ ಈ ಅಧ್ಯಯನ ಪರಿಶೀಲಿಸಲಿದೆ.

ಸಮರ್ಥನಂ ಟ್ರಸ್ಟ್‌ನ ಕ್ರಿಕೆಟ್‌ಗೆ ಸಂಬಂಧಿಸಿದ ಅಂಗಸಂಸ್ಥೆಯಾದ ಸಿಎಬಿಐ ದೇಶಾದ್ಯಂತ ಅಂಧರು ಮತ್ತು ದೃಷ್ಟಿಮಾಂದ್ಯರ ಕ್ರಿಕೆಟ್ ಕ್ರೀಡೆಯನ್ನು ಉತ್ತೇಜಿಸುತ್ತ ಬಂದಿದೆ. ದುರ್ಬಲ ವರ್ಗದ ಹಿನ್ನೆಲೆಯ, ಅಂಗವಿಕಲರಿಗೆ ಶಿಕ್ಷಣ ಮತ್ತು ಜೀವನಾಧಾರ ಸೌಲಭ್ಯವನ್ನು ಒದಗಿಸುತ್ತಿದೆ. ಈ ಅಧ್ಯಯನದ ಭಾಗವಾಗಿ 201 ಮಂದಿ ದೃಷ್ಟಿಮಾಂದ್ಯರನ್ನು ಸಂದರ್ಶಿಸಲಾಗಿದ್ದು, ಅವರ ಸರ್ವತೋಮುಖ ಬೆಳವಣಿಗೆಗೆ ಕ್ರಿಕೆಟ್ ಸಹಾಯಕವಾಗಿದೆ ಎನ್ನುವುದು ದೃಢಪಟ್ಟಿದೆ.

ADVERTISEMENT

ಹಲವು ಮಂದಿ ದೃಷ್ಟಿಮಾಂದ್ಯ ಆಟಗಾರರು ಗ್ರಾಮೀಣ ಭಾರತದ ಬಡತನ ಮತ್ತು ಸಾಮಾಜಿಕ ಪ್ರತ್ಯೇಕತೆಗೆ ಒಳಗಾದವರು. ಅವರ ಕ್ರಿಕೆಟ್ ಪ್ರತಿಭೆ ಹಾಗೂ ಸಿಎಬಿಐ ಒದಗಿಸಿದ ಅವಕಾಶದಿಂದಾಗಿ, ಇಂದು ಪ್ರಖ್ಯಾತ ಅಂತರರಾಷ್ಟ್ರೀಯ ಕ್ರಿಕೆಟಿಗರಾಗಿದ್ದು, ಉನ್ನತ ವ್ಯಾಸಂಗವನ್ನೂ ಮಾಡುತ್ತಿದ್ದಾರೆ.

ಈ ವರದಿ ಬಿಡುಗಡೆ ಮಾಡಿ ಮಾತನಾಡಿದ ಸಮರ್ಥನಂ ಟ್ರಸ್ಟ್‌ನ ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ ಮತ್ತು ಸಿಎಬಿಐ ಅಧ್ಯಕ್ಷ ಮಹಾಂತೇಶ ಜಿ.ಕೆ, 'ದೃಷ್ಟಿಮಾಂದ್ಯರು ಕ್ರಿಕೆಟ್ ಆಡುವ ಮೂಲಕ ಜೀವನ ಕೌಶಲಗಳನ್ನು ಕಲಿತುಕೊಳ್ಳಲು ಸಾಧ್ಯವಾಗಿದೆ. ಇದು ಅವರನ್ನು ಸಶಕ್ತರನ್ನಾಗಿಸಿದ್ದು, ಸಮಾಜದ ಮುಖ್ಯವಾಹಿನಿಗೆ ಸೇರಲು ಅನುಕೂಲವಾಗಿದೆ ಎನ್ನುವುದು ಚೇತೋಹಾರಿ ಅಂಶ...' ಎಂದು ಹೇಳಿದರು.

ಸಿಎಬಿಐ ಜತೆಗಿನ ಸಹಭಾಗಿತ್ವದ ಬಗ್ಗೆ ಮಾತನಾಡಿದ ವಿಸ್ಕೂಲ್ ಸಮೂಹ ನಿರ್ದೇಶಕ ಡಾ.ಉದಯ ಸಾಳುಂಕೆ, 'ಮಹಾಂತೇಶ್ ಅವರ ಸಾಮಾಜಿಕ ಉಪಕ್ರಮದ ಭಾಗವಾಗುವುದು ನಮ್ಮ ಪಾಲಿಗೆ ದೊರಕಿದ ಗೌರವ. ಈ ಸಂಶೋಧನೆ ಮೂಲಕ ದೃಷ್ಟಿಮಾಂದ್ಯ ಕ್ರಿಕೆಟಿಗರ ಜೀವನದ ಮೇಲೆ ಕ್ರೀಡೆ ಹೇಗೆ ಪರಿಣಾಮ ಬೀರಿದೆ ಎನ್ನುವುದನ್ನು ನಾವು ಕಂಡುಕೊಂಡಿದ್ದೇವೆ. ದೃಷ್ಟಿಮಾಂದ್ಯರ ಜೀವನ ಗುಣಮಟ್ಟ ಎತ್ತರಿಸಲು ಕ್ರೀಡೆ ಉತ್ತಮ ಮಾಧ್ಯಮ ಎನ್ನುವುದನ್ನು ಆಳವಾಗಿ ಅಧ್ಯಯನ ಮಾಡಲು ಅವಕಾಶ ಸಿಕ್ಕಿದಂತಾಗಿದೆ' ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.