ADVERTISEMENT

ವರದಿ ನೀಡಲು ವಿಳಂಬ: ಹೈಕೋರ್ಟ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 13 ಮೇ 2021, 21:02 IST
Last Updated 13 ಮೇ 2021, 21:02 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕೋವಿಡ್ ಪರಿಕ್ಷಾ ವರದಿ ತಿಳಿಸಲು ಸಮಯ ನಿಗದಿಪಡಿಸದ ಪ್ರಯೋಗಾಲಯಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಪರೀಕ್ಷೆಗೆ ಗಂಟಲು ದ್ರವ ನೀಡಿದವರೂ ಮೃತಪಟ್ಟ ಬಳಿಕವೂ ವರದಿ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

‘ಹೈಕೋರ್ಟ್‌ ಸಿಬ್ಬಂದಿಯೊಬ್ಬರಿಂದ ಮೇ 10ರಂದು ಬೆಳಿಗ್ಗೆ 11.53ಕ್ಕೆ ಬೆಂಗಳೂರಿನ ಸರ್ ಸಿ.ವಿ. ರಾಮನ್ ಜನರಲ್ ಆಸ್ಪತ್ರೆ ಸಿಬ್ಬಂದಿ ಗಂಟಲು ದ್ರವದ ಮಾದರಿ ಸಂಗ್ರಹಿಸಿದ್ದಾರೆ. ಅದಾದ 11 ಗಂಟೆಗಳ ನಂತರ ಪ್ರಯೋಗಾಲಯ ಅದನ್ನು ಪಡೆದುಕೊಂಡಿದೆ. ಮೇ 11ರ ಮಧ್ಯಾಹ್ನ 1 ಗಂಟೆಗೆ ಮಾದರಿ ಪರೀಕ್ಷೆ ಮಾಡಲಾಗಿದೆ. 1.33ರ ವೇಳೆಗೆ ಫಲಿತಾಂಶ ಸಿದ್ಧಗೊಂಡಿದೆ. ಆದರೂ, ವರದಿಯನ್ನು ಸಂಬಂಧಿಸಿದವರಿಗೆ ತಲುಪಿಸಿಲ್ಲ. ಅವರು 12ರ ರಾತ್ರಿ ಮೃತಪಟ್ಟಿದ್ದಾರೆ’ ಎಂದು ಪೀಠ ವಿವರಿಸಿತು.

ADVERTISEMENT

‘ಮೃತಪಟ್ಟ ವ್ಯಕ್ತಿ ಹೈಕೋರ್ಟ್‌ ಉದ್ಯೋಗಿ ಎಂಬ ಕಾರಣಕ್ಕೆ ಈ ವಿಷಯ ಕೈಗೆತ್ತಿಕೊಳ್ಳುತ್ತಿಲ್ಲ. ಜನರ ಜೀವದ ಬಗ್ಗೆ ನಾವು ಚಿಂತಿಸುತ್ತಿದ್ದೇವೆ. ವರದಿ ನೀಡಲು ವಿಳಂಬ ಮಾಡಿದವರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡಬೇಕು. ಈ ರೀತಿಯ ಘಟನೆಗಳು ಪುನರಾವರ್ತನೆ ಆಗದಂತೆ ಎಲ್ಲ ಪ್ರಯೋಗಾಲಯಗಳಿಗೆ ನಿರ್ದೇಶನ ನೀಡಬೇಕು’ ಎಂದು ಪೀಠ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.