ADVERTISEMENT

ಕಾಮಗಾರಿ ಮುಗಿವವರೆಗೂ ಗುಂಡಿ ಮುಚ್ಚಲ್ಲ

ವೈಟ್‌ ಟಾಪಿಂಗ್‌, ಬ್ಲ್ಯಾಕ್‌ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ಸಂಕಷ್ಟ

ಆರ್. ಮಂಜುನಾಥ್
Published 14 ಜೂನ್ 2025, 19:04 IST
Last Updated 14 ಜೂನ್ 2025, 19:04 IST
ಹೊಸಕೆರೆಹಳ್ಳಿಯ ಕೆರೆಕೋಡಿ ರಸ್ತೆಯಲ್ಲಿ ಅಗೆದ ರಸ್ತೆಯ ದುಃಸ್ಥಿತಿ
ಪ್ರಜಾವಾಣಿ ಚಿತ್ರ:ರಂಜು ಪಿ.
ಹೊಸಕೆರೆಹಳ್ಳಿಯ ಕೆರೆಕೋಡಿ ರಸ್ತೆಯಲ್ಲಿ ಅಗೆದ ರಸ್ತೆಯ ದುಃಸ್ಥಿತಿ ಪ್ರಜಾವಾಣಿ ಚಿತ್ರ:ರಂಜು ಪಿ.   

ಬೆಂಗಳೂರು: ನಗರದಲ್ಲಿ ಅಭಿವೃದ್ಧಿಯಾಗಿರುವ ರಸ್ತೆಗಳಲ್ಲಿ ಗುಂಡಿ ಸಮಸ್ಯೆಯ ಜೊತೆಗೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ರಸ್ತೆಗಳ ಹಳ್ಳಗಳಲ್ಲಿ ಜನರು ಬೀಳುತ್ತಿದ್ದು, ಮಣ್ಣು, ಕೆಸರಿನಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿವೆ.

ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ವೈಟ್‌ ಟಾಪಿಂಗ್‌, ಬ್ಲ್ಯಾಕ್‌ ಟಾಪಿಂಗ್ ಮಾಡಲು ಕಾಮಗಾರಿ ನಡೆಸಲಾಗುತ್ತಿದೆ. ಹಲವು ತಿಂಗಳು ಈ ಕಾಮಗಾರಿಗಳು ನಡೆಯಲಿದ್ದು, ಇಂತಹ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವ ಕೆಲಸವೂ ಆಗುತ್ತಿಲ್ಲ. ‘ಹೇಗಿದ್ದರೂ ಪೂರ್ಣವಾಗಿ ಕಾಂಕ್ರೀಟ್‌ ಹಾಕುತ್ತೇವೆ. ಒಟ್ಟಿಗೆ ಎಲ್ಲವನ್ನೂ ಮುಚ್ಚುತ್ತೇವೆ’ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ಹೇಳುತ್ತಾರೆ.

‘ನಾಲ್ಕಾರು ತಿಂಗಳು ಗುಂಡಿ ತುಂಬಿರುವ ರಸ್ತೆಗಳಲ್ಲಿ ವಾಹನ ಸಂಚಾರ ಕಷ್ಟಸಾಧ್ಯವಾಗಿದ್ದು, ಕಾಮಗಾರಿಯೂ ವೇಗವಾಗಿ ನಡೆಯುವ ಲಕ್ಷಣಗಳಿಲ್ಲ’ ಎಂದು ಜೆ.ಸಿ. ರಸ್ತೆಯ ವ್ಯಾಪಾರಿ ಮಹಮದ್‌ ತಿಳಿಸಿದರು.

ADVERTISEMENT

ಮಿನರ್ವ ವೃತ್ತದಿಂದ ಪುರಭವನದವರೆಗೆ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಆರಂಭವಾಗಿ ಆರು ತಿಂಗಳಾಗಿದ್ದರೂ, ಶೇ 10ರಷ್ಟು ಕೆಲಸವೂ ಮುಗಿದಿಲ್ಲ. ಜೆ.ಸಿ. ರಸ್ತೆಯಲ್ಲಿ ಹಾಗೂ ಪುರಭವನದ ಮುಂದೆ ನೂರಾರು ಗುಂಡಿಗಳಿವೆ. ಆದರೆ, ಇವುಗಳಿಗೆ ಕನಿಷ್ಠ ವೆಟ್‌ಮಿಕ್ಸ್‌ ಹಾಕಿ ಮುಚ್ಚುವ ಕೆಲಸವನ್ನೂ ಮಾಡುತ್ತಿಲ್ಲ. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು, ‘ರಸ್ತೆಗೆ ಕಾಂಕ್ರೀಟ್‌ ಹಾಕುವುದರಿಂದ ಈಗ ಡಾಂಬರು ಹಾಕಿದರೆ ನಷ್ಟವಾಗುತ್ತದೆ’ ಎನ್ನುತ್ತಾರೆ. ಗುಂಡಿಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ಬಿಬಿಎಂಪಿ ಎಂಜಿನಿಯರ್‌ಗಳು ಇತ್ತ ಸುಳಿಯುತ್ತಲೇ ಇಲ್ಲ.

ಚಾಮರಾಜಪೇಟೆ, ಗಾಂಧಿನಗರ, ಮಲ್ಲೇಶ್ವರ, ಮಹಾಲಕ್ಷ್ಮಿ ಲೇಔಟ್‌, ರಾಜಾಜಿನಗರದ ಹಲವು ಪ್ರದೇಶಗಳಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ರಸ್ತೆ ಗುಂಡಿಗಳನ್ನೂ ಮುಚ್ಚದೆ ಹೆಚ್ಚಿನ ಗುಂಡಿಗಳನ್ನು ಮಾಡಲಾಗಿದೆ. ‘ರಸ್ತೆ ಉತ್ತಮವಾಗಿ ಅಭಿವೃದ್ಧಿಯಾಗಬೇಕಾದರೆ ಒಂದಷ್ಟು ದಿನ ತೊಂದರೆಯಾಗುತ್ತದೆ, ಸಹಕರಿಸಬೇಕು’ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ಹೇಳುತ್ತಿದ್ದಾರೆ.

‘ಒಂದಷ್ಟು ದಿನ ಅಥವಾ ತಿಂಗಳು ಕಾಯಲು ನಮಗೆ ಅಭ್ಯಂತರವಿಲ್ಲ. ಆದರೆ, ವರ್ಷವಾದರೂ ರಸ್ತೆ ಅಭಿವೃದ್ಧಿ ಪೂರ್ಣಗೊಳ್ಳುತ್ತಿಲ್ಲ. ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದಿಲ್ಲ. ಮಣ್ಣು, ಕೆಸರಿನಿಂದ ಹಲವು ವಾಹನ ಸವಾರರು ಬೀಳುತ್ತಿದ್ದಾರೆ. ಮಳೆ ಬಂದಾಗ ಸಮಸ್ಯೆ ಹೆಚ್ಚಾಗುತ್ತದೆ. ಕಾಮಗಾರಿಗಾಗಿ ಅಗೆಯುವ ಹಳ್ಳಗಳನ್ನು ಸರಿಯಾಗಿ ಮುಚ್ಚದೆ ನಾಗರಿಕರು ಬೀಳುವಂತಾಗಿದೆ’ ಎಂದು ರಾಜಾಜಿನಗರದ ಭೀಮೇಶ್‌ ದೂರಿದರು.

ವೆಸ್ಟ್ ಆಫ್ ಕಾರ್ಡ್ ರಸ್ತೆ ಹಾಗೂ ಹೊಸಕೆರೆಹಳ್ಳಿ ಮುಖ್ಯರಸ್ತೆ, ವೈಯಾಲಿ ಕಾವಲ್ ರಸ್ತೆಯಲ್ಲಿ ಕಾಮಗಾರಿ ವಿಳಂಬವಾಗಿದ್ದು, ಗುತ್ತಿಗೆದಾರರಿಗೆ ಬಿಬಿಎಂಪಿ ವತಿಯಿಂದ ದಂಡ ವಿಧಿಸಲಾಗಿದೆ. ಆದರೂ ಕಾಮಗಾರಿ ವೇಗ ಪಡೆದುಕೊಂಡಿಲ್ಲ ಎಂಬುದು ನಾಗರಿಕರ ದೂರು.

‘ರಸ್ತೆ ಕಾಮಗಾರಿಗಳನ್ನು ನಡೆಸುವಾಗ ಒಂದು ಬದಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಗುಂಡಿಗಳನ್ನು ಹಾಗೆಯೇ ಬಿಟ್ಟು ವಾಹನಕ್ಕೆ ಅವಕಾಶ ಮಾಡಿಕೊಟ್ಟರೆ ಸಂಕಷ್ಟವೇ ಹೆಚ್ಚು. ಹೀಗಾಗಿ, ಒಂದು ಬದಿ ಕಾಮಗಾರಿ ಮುಗಿದು, ಸುಗಮವಾಗಿ ವಾಹನ ಸಂಚಾರಕ್ಕೆ ಅನುವಾದ ಮೇಲೆಯೇ ಮತ್ತೊಂದು ಬದಿ ಕಾಮಗಾರಿ ಕೈಗೊಂಡರೆ ಸಾಕಷ್ಟು ಸಮಸ್ಯೆಗೆ ಪರಿಹಾರವಾಗುತ್ತದೆ’ ಎಂದು ಹಲವು ನಾಗರಿಕರು ಆಗ್ರಹಿಸಿದ್ದಾರೆ.

ಮಡಿವಾಳದಲ್ಲಿ ವೈಟ್‌ ಟಾಪಿಂಗ್‌ ರಸ್ತೆಯಲ್ಲಾಗಿರುವ ಗುಂಡಿ ಪ್ರಜಾವಾಣಿ ಚಿತ್ರ: ಆ್ಯನಾ ಫಾತಿಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.