ADVERTISEMENT

ಜೈಲು ಶಿಕ್ಷೆ ಬಳಿಕವೂ ಕಳ್ಳನಾದ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 20:00 IST
Last Updated 5 ಅಕ್ಟೋಬರ್ 2019, 20:00 IST
ಪ್ರತಾಪ್
ಪ್ರತಾಪ್   

ಬೆಂಗಳೂರು: ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದಪ್ರತಾಪ್ ಅಲಿಯಾಸ್ ಗೊಣ್ಣೆ ಎಂಬಾತ, ಈಗ ಪುನಃ ಕಳ್ಳತನ ಎಸಗಿ ಜೈಲು ಸೇರಿದ್ದಾನೆ.

ಚನ್ನಮ್ಮನಕೆರೆ ಅಚ್ಚುಕಟ್ಟು ಹಾಗೂ ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಪ್ರತಾಪ್‌ನನ್ನು ಬಂಧಿಸಿರುವ ಪೊಲೀಸರು, ₹ 14.15 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

‘ಐಷಾರಾಮಿ ಜೀವನ ನಡೆಸುವುದಕ್ಕಾಗಿ ಆರೋಪಿ ಪ್ರತಾಪ್, ಹಲವು ವರ್ಷಗಳಿಂದ ಕಳ್ಳತನ ಎಸಗುತ್ತಿದ್ದ. 2011ರಲ್ಲಿ ದೇವನಹಳ್ಳಿ ಠಾಣೆ ವ್ಯಾಪ್ತಿಯ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಪ್ರತಾಪ್‌ ಮೇಲಿನ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆ ಅನುಭವಿಸಿದ್ದ ಪ್ರತಾಪ್ 2018ರಲ್ಲಿ ಬಿಡುಗಡೆ ಆಗಿ ಜೈಲಿನಿಂದ ಹೊರಬಂದಿದ್ದ’ ಎಂದರು.

ಸಂಸಾರ ನಡೆಸಲು ಕೃತ್ಯ: ‘ಜೈಲಿನಿಂದ ಹೊರಬರುತ್ತಿದ್ದಂತೆ ಪ್ರತಾಪ್ ಮದುವೆ ಆಗಿದ್ದ. ಸಂಸಾರ ನಡೆಸಲು ಕಷ್ಟಪಡುತ್ತಿದ್ದ. ಹಣ ಹೊಂದಿಸುವುದಕ್ಕಾಗಿ ಪುನಃ ಕಳ್ಳತನ ನಡೆಸಲು ಮುಂದಾಗಿದ್ದ’ ಎಂದು ಅಧಿಕಾರಿ ಹೇಳಿದರು.

‘ಮನೆಯಲ್ಲಿ ಹಾಗೂ ಔಷಧಿ ಅಂಗಡಿಯಲ್ಲೂ ಆರೋಪಿ ಕಳ್ಳತನ ಎಸಗಿದ್ದ. ಆ ಬಗ್ಗೆ ದೂರುಗಳು ದಾಖಲಾಗಿದ್ದವು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.