ADVERTISEMENT

ಕಳವು ಆರೋಪಿ ಸೆರೆ– ಕಾಲಿಗೆ ಗುಂಟೇಟು

ಬಂಧನದ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪಿ ನವೀನ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 16:05 IST
Last Updated 9 ಜನವರಿ 2021, 16:05 IST
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ನವೀನ್
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ನವೀನ್   

ಬೆಂಗಳೂರು: ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿ ನವೀನ್ ಎಂಬಾತನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ.

‘ತನ್ನನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆಯೇ ಆರೋಪಿ ನವೀನ್ ಹಲ್ಲೆ ಮಾಡಿದ್ದ. ಆತ್ಮರಕ್ಷಣೆಗಾಗಿ ವರ್ತೂರು ಠಾಣೆ ಪಿಎಸ್‌ಐ ಕೃಷ್ಣಮೂರ್ತಿ ಅವರು ನವೀನ್‌ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಕೆ.ಆರ್‌. ಪುರ, ಪರಪ್ಪನ ಅಗ್ರಹಾರ, ಬೆಳ್ಳಂದೂರು ಹಾಗೂ ವರ್ತೂರು ಠಾಣೆಗಳ ವ್ಯಾಪ್ತಿಯಲ್ಲಿ ಆರೋಪಿ ಕೃತ್ಯ ಎಸಗಿದ್ದ. ಆತನಿಗಾಗಿ ಬಹಳ ಸಮಯದಿಂದ ಹುಡುಕುತ್ತಿದ್ದೆವು. ಕಾಚಮಾರನಹಳ್ಳಿ ಬಳಿ ಶನಿವಾರ ಆತ ಕಾಣಿಸಿಕೊಂಡಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಪಿಎಸ್ಐ ಕೃಷ್ಣಮೂರ್ತಿ ನೇತೃತ್ವ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿತ್ತು.’

ADVERTISEMENT

‘ತನ್ನನ್ನು ಹಿಡಿಯಲು ಬಂದ ಹೆಡ್ ಕಾನ್‌ಸ್ಟೆಬಲ್ ಮಂಜುನಾಥ್ ಅವರ ಮೇಲೆಯೇ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿದ್ದ. ಹೆಡ್‌ ಕಾನ್‌ಸ್ಟೆಬಲ್‌ ರಕ್ಷಣೆಗೆ ಧಾವಿಸಿದ್ದ ಪಿಎಸ್ಐ ಕೃಷ್ಣಮೂರ್ತಿ, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದ್ದರು. ಶರಣಾಗಲು ಒಪ್ಪದ ಆರೋಪಿ, ಪಿಎಸ್ಐ ಮೇಲೂ ಹಲ್ಲೆ ನಡೆಸಲು ಮುಂದಾಗಿದ್ದ. ಆಗ ಪಿಎಸ್‌ಐ, ಆತನ ಬಲಗಾಲಿಗೆ ಗುಂಡು ಹಾರಿಸಿದರು.’ ಎಂದು ಅವರು ಮಾಹಿತಿ ನೀಡಿದರು.

ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಕುಟುಂಬ: ‘ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಎಸಗಿ ಪರಾರಿಯಾಗಿದ್ದ ಆರೋಪಿ, ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ. ಜ. 6ರಂದು ಆತ ಮನೆಗೆ ಮರಳಿದ್ದ. ಮಾಹಿತಿ ತಿಳಿದು ಮನೆಗೆ ಹೋಗಿದ್ದ ಪೊಲೀಸರ ಮೇಲೆ, ಆತನ ಕುಟುಂಬದ ಸದಸ್ಯರೂ ಹಲ್ಲೆ ಮಾಡಿದ್ದರು. ಅದೇ ವೇಳೆ ಆರೋಪಿ ತಪ್ಪಿಸಿಕೊಂಡಿದ್ದ’ ಎಂದೂ ಪೊಲೀಸ್ ಅಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.