ADVERTISEMENT

ಗೃಹರಕ್ಷಕ ದಳ ಸಿಬ್ಬಂದಿಯಿಂದಲೇ ಕಳ್ಳತನ

ಲಕ್ಷಾಂತರ ರೂಪಾಯಿ ಸಾಲ ತೀರಿಸಲು ಆರೋಪಿಗಳೊಂದಿಗೆ ಶಾಮೀಲು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 21:42 IST
Last Updated 14 ನವೆಂಬರ್ 2020, 21:42 IST
ಮನೆ ಕಳ್ಳತನ–ಸಾಂದರ್ಭಿಕ ಚಿತ್ರ
ಮನೆ ಕಳ್ಳತನ–ಸಾಂದರ್ಭಿಕ ಚಿತ್ರ   

ಕೆ.ಆರ್.ಪುರ: ಸಾಲ ತೀರಿಸಲು ಹಳೇ ಆರೋಪಿಗಳ ಜೊತೆಗೂಡಿ ಮನೆಗಳ್ಳತನ ಮಾಡುತ್ತಿದ್ದ ಗೃಹರಕ್ಷಕ ದಳ ಸಿಬ್ಬಂದಿ ಸೇರಿ ಮೂವರನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಸವಪುರದ ನಿವಾಸಿ ವಸಂತ್‌ಕುಮಾರ್ (33), ಬೈಯ್ಯಪ್ಪನಹಳ್ಳಿಯ ಸೇವಾನಗರದ ಅಜಯ್ ಅಲಿಯಾಸ್ ಹಂಡೇ (25) ಹಾಗೂ ಕೋಲಾರದ ಕೆಜಿಎಫ್‌ ಮೂಲದ ಸಾದಿಕ್ ಪಾಷ (24) ಬಂಧಿತರು. ಆರೋಪಿಗಳಿಂದ 12 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ₹14 ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣ, 2 ಕೆ.ಜಿ. ಬೆಳ್ಳಿ ವಸ್ತು, 1 ಕಾರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಜಯ್ ಮತ್ತು ಸಾದಿಕ್ ಪಾಷಾ ಮದ್ಯ ಸೇವನೆ, ಜೂಜಾಟ ಸೇರಿದಂತೆ ಇನ್ನಿತರ ದುಶ್ಚಟಗಳಿಗೆ ದಾಸರಾಗಿದ್ದರು. ಮೋಜು ಮಾಡಲು ಹಣಕ್ಕಾಗಿ ಮನೆಗಳ್ಳತನಕ್ಕೆ ಇಳಿದಿದ್ದರು. ಈ ಹಿಂದೆ ಬೆಂಗಳೂರು ನಗರ ಹಾಗೂ ಕೆಜಿಎಫ್‌ ಸೇರಿದಂತೆ ವಿವಿಧ ಠಾಣೆ ವ್ಯಾಪ್ತಿಯಲ್ಲಿ 15 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ಹಳೇ ಚಾಳಿಯನ್ನು ಮುಂದುವರಿಸಿದ್ದರು.

ADVERTISEMENT

ಬಾರ್‌ನಲ್ಲಿ ಪರಿಚಯ: ‘ಗೃಹರಕ್ಷಕ ದಳದಲ್ಲಿ ಕೆಲಸ ಮಾಡುತ್ತಿದ್ದ ವಸಂತ್ ಕುಮಾರ್, ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಸಾಲಗಾರರ ಉಪಟಳ ಹೆಚ್ಚಾಗಿದ್ದು, ಹಣ ವಾಪಸ್ ನೀಡುವಂತೆ ಮನೆ ಬಳಿ ಬಂದು ಗಲಾಟೆ ಮಾಡಿ ಹೋಗುತ್ತಿದ್ದರು. ಇದರಿಂದ ರೋಸಿಹೋಗಿದ್ದ ವಸಂತ್, ಹೇಗಾದರೂ ಮಾಡಿ ಸಾಲ ತೀರಿಸಬೇಕು ಎಂದು ಯೋಚಿಸಿದ್ದ. ಒಮ್ಮೆ ಬಾರ್‌ನಲ್ಲಿ ಮದ್ಯ ಸೇವಿಸುವಾಗ ಅಜಯ್ ಪರಿಚಯವಾಗಿದ್ದ. ಇಬ್ಬರ ಸ್ನೇಹ ಆತ್ಮೀಯತೆಗೆ ತಿರುಗಿತ್ತು. ಸಾಲದ ವಿಚಾರವನ್ನು ಆತನ ಮುಂದೆ ಹೇಳಿಕೊಂಡಿದ್ದ. ಕಳ್ಳತನ ಮಾಡಿದರೆ ಲಕ್ಷಾಂತರ ರೂ. ಸಿಗುತ್ತದೆ. ಆ ಹಣದಿಂದ ಏನಾದರೂ ಮಾಡಬಹುದು ಎಂದು ವಸಂತ್‌ಗೆ ಅಜಯ್ ಹೇಳಿದ್ದ. ಇಬ್ಬರ ಜೊತೆಗೂಡಿ ಕೃತ್ಯಕ್ಕೆ ಇಳಿದಿದ್ದರು’

ಮುಂಬೈ ರೈಲು ನಿಲ್ದಾಣದಲ್ಲಿ ಸೆರೆ: ‘ನಾಲ್ಕೈದು ತಿಂಗಳಲ್ಲಿ ಕೆ.ಆರ್.ಪುರದ ನಾಲ್ಕೈದು ಕಡೆ ಮನೆಗಳ್ಳತನ ನಡೆದಿದ್ದವು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಅ.17ರಂದು ಅಯ್ಯಪ್ಪಲೇಔಟ್‌ನಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಗಳ ಮುಖ ಚಹರೆ ಪತ್ತೆಯಾಗಿತ್ತು.

ಈ ಎಲ್ಲ ಪ್ರಕರಣಗಳಲ್ಲಿ ಒಂದೇ ಗುಂಪಿನ ಕೈವಾಡ ಇರುವುದು ಖಚಿತವಾಗಿತ್ತು. ಕೆಲ ದಿನಗಳ ಹಿಂದೆ ಮುಂಬೈಗೆ ಪರಾರಿಯಾಗಿದ್ದರು. ಮುಂಬೈ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಅಲ್ಲಿನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಮುಂಬೈ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದರು.

ಪ್ರಿಯಕರನ ಸೋಗಿನಲ್ಲಿ ₹1.25 ಕೋಟಿ ಸುಲಿಗೆ

ಬೆಂಗಳೂರು: ಪ್ರಿಯಕರನ ಸೋಗಿನಲ್ಲಿ ನಗರದ ಮಹಿಳೆಯೊಬ್ಬರಿಗೆ ಅಶ್ಲೀಲ ಫೋಟೊ ಹಾಗೂ ವಿಡಿಯೊ ಕಳುಹಿಸಿ ಬ್ಲ್ಯಾಕ್‌ಮೇಲ್‌ ಮಾಡಿರುವ ಅಪರಿಚಿತನೊಬ್ಬ ₹ 1.25 ಕೋಟಿ ಸುಲಿಗೆ ಮಾಡಿದ್ದು, ಈ ಸಂಬಂಧ ವೈಟ್‌ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬ್ಲ್ಯಾಕ್‌ಮೇಲ್ ಹಾಗೂ ಸುಲಿಗೆ ಸಂಬಂಧ ವೈಟ್‌ಫೀಲ್ಡ್ ನಿವಾಸಿಯಾದ ಮಹಿಳೆಯ ಪತಿ ದೂರು ನೀಡಿದ್ದಾರೆ. ಆರೋಪಿಗಳು ಎನ್ನಲಾದ ಮಹೇಶ್ ಮತ್ತು ಅನು ಅಲಿಯಾಸ್ ಅಪರ್ಣಾ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಹತ್ತು ವರ್ಷಗಳ ಹಿಂದೆಯೇ ಮಹಿಳೆಗೆ ಮದುವೆಯಾಗಿದ್ದು, ಎಂಟು ವರ್ಷದ ಮಗನಿದ್ದಾನೆ. ಮದುವೆಗೂ ಮುನ್ನ ಮಹಿಳೆ, ಯುವಕನೊಬ್ಬನನ್ನು ಪ್ರೀತಿಸುತ್ತಿದ್ದರು. ಮನೆಯವರು ಒಪ್ಪದಿದ್ದರಿಂದ ಆತನ ಜೊತೆ ಮದುವೆ ಆಗಿರಲಿಲ್ಲ. ಅದೇ ಯುವಕನ ಹೆಸರಿನಲ್ಲಿ ಮಹಿಳೆಗೆ ಸಂದೇಶ ಕಳುಹಿಸಲಾರಂಭಿಸಿದ್ದ ಆರೋಪಿ, ಆರಂಭದಲ್ಲಿ ಆತ್ಮಿಯವಾಗಿ ಮಾತನಾಡಿದ್ದ.’

‘ಇತ್ತೀಚೆಗೆ ಮಹಿಳೆಗೆ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ ಆರೋಪಿ, ‘ನಿಮ್ಮ ಅಶ್ಲೀಲ ಫೋಟೊ ಮತ್ತು ವಿಡಿಯೊ ನನ್ನ ಬಳಿ ಇದೆ. ನಾನು ಕೇಳಿದಷ್ಟು ಹಣವನ್ನು ಅಪರ್ಣಾ ಎಂಬುವರ ಖಾತೆಗೆ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಎಂದಿದ್ದ. ಅದಕ್ಕೆ ಹೆದರಿದ್ದ ಮಹಿಳೆ, ಹಂತ ಹಂತವಾಗಿ ₹ 1.25 ಕೋಟಿ ಹಣವನ್ನು ಆರೋಪಿ ಖಾತೆಗೆ ವರ್ಗಾಯಿಸಿದ್ದರು’ ಎಂದೂ ಪೊಲೀಸರು ತಿಳಿಸಿದರು.

‘ಆರೋಪಿಗಳು ಹಣಕ್ಕೆ ಪದೇ ಪದೇ ಬೇಡಿಕೆ ಇಡುತ್ತಿದ್ದರು. ಅದರಿಂದ ನೊಂದ ಮಹಿಳೆ, ಪತಿಗೆ ವಿಷಯ ತಿಳಿಸಿದ್ದರು. ನಂತರ, ಪತಿಯೇ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಹೇಳಿದರು.

‘ಮಹಿಳೆ ಯುವಕನನ್ನು ಪ್ರೀತಿಸಿದ್ದ ಸಂಗತಿ ತಿಳಿದುಕೊಂಡು, ಆತನ ಹೆಸರಿನಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು. ಇದೇ ಆರೋಪಿಗಳು ಮತ್ತಷ್ಟು ಮಂದಿಯಿಂದ ಹಣ ಸುಲಿಗೆ ಮಾಡಿರುವ ಮಾಹಿತಿ ಇದೆ’ ಎಂದೂ ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.