ಬೆಂಗಳೂರು: ಮನೆ ಕಳ್ಳತನ ಹಾಗೂ ಸೈಬರ್ ವಂಚನೆ ಸೇರಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಕೊಡಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಕಾಮೆಪಲ್ಲಿ ಮೂಲದ ಶ್ರೀನಿವಾಸ್ (35) ಬಂಧಿತ ಆರೋಪಿ.
ಆರೋಪಿಯ ವಿರುದ್ಧ ಆಂಧ್ರಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ 80ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಯಿಂದ ₹9.20 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
‘ಶ್ರೀನಿವಾಸ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದಿದ್ದ. ಆರಂಭದಲ್ಲಿ ಆಂಧ್ರಪ್ರದೇಶದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ. ನಂತರ, ಆನ್‌ಲೈನ್ ಗೇಮ್‌ನ ಗೀಳಿಗೆ ಬಿದ್ದು, ಹಣ ಕಳೆದುಕೊಂಡಿದ್ದ. ಸಾಲ ತೀರಿಸಲು ಕಳ್ಳತನ ಮಾಡಲು ಆರಂಭಿಸಿದ್ದ. 2008ರಲ್ಲಿ ಮೊದಲ ಬಾರಿಗೆ ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದ. ಈ ಪ್ರಕರಣದಲ್ಲಿ ಶ್ರೀನಿವಾಸ್ ಜೈಲು ಸೇರಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.
‘ಆಂಧ್ರಪ್ರದೇಶದ ವಿವಿಧೆಡೆ 80ಕ್ಕೂ ಹೆಚ್ಚು ಸ್ಥಳಗಳಲ್ಲಿ ಆರೋಪಿ ಕಳ್ಳತನ ಮಾಡಿದ್ದ. ಅಲ್ಲಿಂದ ಮೈಸೂರಿಗೆ ಬಂದು ಬಾಡಿಗೆಗೆ ಮನೆ ಪಡೆದು ನೆಲಸಿದ್ದ. ಅಲ್ಲಿಂದಲೇ ಬೆಂಗಳೂರು, ಧಾರವಾಡ, ಬೀದರ್‌ಗೆ ತೆರಳಿ ಕಳ್ಳತನ ಮಾಡುತ್ತಿದ್ದ. ಕಳೆದ ಏಪ್ರಿಲ್ 20ರಂದು ಕೊಡಿಗೆಹಳ್ಳಿಯ ಬಾಲಾಜಿ ಲೇಔಟ್‌ನಲ್ಲಿ ಎರಡು ಹಾಗೂ ಪಾರ್ವತಮ್ಮ ಲೇಔಟ್‌ನ ಒಂದು ಮನೆಯಲ್ಲಿ ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಕದ್ದು ಆರೋಪಿ ಪರಾರಿಯಾಗಿದ್ದ. ತನಿಖೆ ಕೈಗೊಂಡು ನಾಗವಾರದ ಬಳಿ ಪಿ.ಜಿಯೊಂದರ ಎದುರು ಆರೋಪಿಯನ್ನು ಬಂಧಿಸಲಾಯಿತು. ಕದ್ದ ಚಿನ್ನ ಹಾಗೂ ಬೆಳ್ಳಿ ಸಾಮಗ್ರಿಯನ್ನು ಪೇಯಿಂಗ್ ಗೆಸ್ಟ್ ಹಾಗೂ ಸ್ನೇಹಿತನ ಮನೆಯಲ್ಲಿ ಬಚ್ಚಿಟ್ಟಿದ್ದ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.