ಬಂಧನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಕೆಲಸಗಾರ ಸೇರಿದಂತೆ ಮೂವರು ಆರೋಪಿಗಳನ್ನು ಸಂಪಂಗಿರಾಮನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಗರ್ತಪೇಟೆಯ ನಿವಾಸಿ ರಾಹುಲ್ ಕುಮಾರ್(32), ಹೊಸೂರಿನ ವಿಷ್ಣುದೇವಸಿ(34) ಮತ್ತು ತೆಲಂಗಾಣದ ದೇವಸಿ ಭದ್ರಿ(30) ಬಂಧಿತರು.
ಆರೋಪಿಗಳಿಂದ ₹51.80 ಲಕ್ಷ ಮೌಲ್ಯದ 740 ಗ್ರಾಂ. ಚಿನ್ನದ ಗಟ್ಟಿ ಮತ್ತು ಒಂದು ನಕ್ಲೇಸ್ ಜಪ್ತಿ ಮಾಡಲಾಗಿದೆ. ಆರೋಪಿಗಳು, ಸಂಪಂಗಿರಾಮನಗರದ 5ನೇ ಕ್ರಾಸ್‌ನಲ್ಲಿ ಇರುವ ಅಂಗಡಿಯಲ್ಲಿ ಹಂತ ಹಂತವಾಗಿ 1 ಕೆ.ಜಿ 764 ಗ್ರಾಂ. ಚಿನ್ನಾಭರಣ ದೋಚಿದ್ದರು ಎಂದು ಪೊಲೀಸರು ತಿಳಿಸಿದರು.
‘ಬಂಧಿತರ ಪೈಕಿ ರಾಹುಲ್ ಕುಮಾರ್ ಎಂಬಾತ ದೂರು ನೀಡಿದ ವ್ಯಕ್ತಿಯ ಚಿನ್ನಾಭರಣ ಮಳಿಗೆಯಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದ. ಮಾಲೀಕರ ಮನೆಯಲ್ಲೇ ವಾಸವಿದ್ದ. ಈ ವೇಳೆ ಆರೋಪಿ, ಮಳಿಗೆ ಹಾಗೂ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ.
‘ಕದ್ದಿದ್ದ ಚಿನ್ನವನ್ನು ವಿಷ್ಣುದೇವಸಿ, ದೇವಸಿ ಭದ್ರಿಗೆ ನೀಡಿದ್ದ. ವಿಷ್ಣುದೇವಸಿ ಎಲ್ಲ ಚಿನ್ನವನ್ನು ಕರಗಿಸಿ ಚಿನ್ನದ ಗಟ್ಟಿಗಳನ್ನಾಗಿ ಪರಿವರ್ತಿಸಿ ಹೊಸೂರು ಸಮೀಪದ ಚಿನ್ನದ ಅಂಗಡಿಗಳಿಗೆ ಮಾರಾಟ ಮಾಡಿದ್ದ. ಬಂದ ಹಣದಲ್ಲಿ ರಾಹುಲ್ ಕುಮಾರ್‌ಗೆ ಹೆಚ್ಚಿನ ಪಾಲು ನೀಡಿದ್ದ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.