ಬೆಂಗಳೂರು: ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಒಂದು ವರ್ಷದ ಬಳಿಕ ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಡಿಪಾಳ್ಯ ನಿವಾಸಿ ಶಾರದಮ್ಮ(67) ಬಂಧಿತ ಮಹಿಳೆ.
ಕೋಡಿಪಾಳ್ಯ ವಿನಾಯಕ ಲೇಔಟ್‌ನ ರಿಯಲ್ ಎಸ್ಟೇಟ್ ಏಜೆಂಟ್ ಶಶಿಕಾಂತ್ ಎಂಬುವವರ ಮನೆಯಲ್ಲಿ 2023ರ ಜುಲೈನಲ್ಲಿ ಶಾರದಮ್ಮ ಚಿನ್ನಾಭರಣ ಕಳವು ಮಾಡಿದ್ದರು.
ಆರೋಪಿಯಿಂದ ₹35 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಶಶಿಕಾಂತ್‌ರ ಪತ್ನಿ ಚಂದ್ರಿಕಾ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಮನೆಯಲ್ಲಿ ಶಾರದಮ್ಮ ಮನೆ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ದಂಪತಿ ಕೆಲಸಕ್ಕೆ ಹೋದಾಗ, ಅವರು ಕೀ ಇಡುತ್ತಿದ್ದ ಸ್ಥಳ ಗಮನಿಸಿ, 583 ಗ್ರಾಂ ಚಿನ್ನಾಭರಣ ದೋಚಿ ತಲೆ ಮರೆಸಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.
ಈ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು, ಶಾರದಮ್ಮ ಅವರನ್ನು ವಿಚಾರಣೆ ನಡೆಸಿದ್ದರು. ಆಗಲೂ ಆರೋಪಿ ಕಳ್ಳತನದ ಮಾಹಿತಿ ನೀಡಿರಲಿಲ್ಲ. ಘಟನಾ ಸ್ಥಳದ ಸಿಸಿ ಟಿ.ವಿ ಕ್ಯಾಮೆರಾ ಹಾಗೂ ಸ್ಥಳೀಯರ ಮಾಹಿತಿ ಪ್ರಕಾರ ಶಾರದಮ್ಮ ಅವರೇ ಕಳ್ಳತನ ಮಾಡಿದ್ದರು ಎಂಬುದಕ್ಕೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು.
ಆರೋಪಿಗೆ ಬ್ರೈನ್ ಮ್ಯಾಪಿಂಗ್ ಮಾಡಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿ, 2024 ಫೆಬ್ರುವರಿಯಲ್ಲಿ ಕೋರ್ಟ್‌ನಿಂದ ಅನುಮತಿ ಪಡೆದುಕೊಳ್ಳಲಾಗಿತ್ತು. ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಶಾರದಮ್ಮ ಅವರು ಚಿನ್ನಾಭರಣ ಕಳವು ಮಾಡಿರುವುದಾಗಿ ಹೇಳಿದ್ದರು. ಈ ಹೇಳಿಕೆ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.