ADVERTISEMENT

ಬೆಂಗಳೂರು: ಲಕ್ಷ್ಮೀದೇವಿನಗರಕ್ಕೆ ಬಸ್‌ ಸಂಚಾರವೇ ಇಲ್ಲ

ಜನವಸತಿ ಪ್ರದೇಶದಲ್ಲಿ ಪ್ರಯಾಣಿಕರ ಪರದಾಟ | ಬಸ್‌ ಸಂಚಾರ ಮತ್ತೆ ಆರಂಭಿಸಲು ಸ್ಥಳೀಯರ ಆಗ್ರಹ

ಬಾಲಕೃಷ್ಣ ಪಿ.ಎಚ್‌
Published 31 ಜನವರಿ 2026, 0:00 IST
Last Updated 31 ಜನವರಿ 2026, 0:00 IST
ಬಸ್‌ಗಳೇ ಇಲ್ಲವಾಗಿರುವ ಲಕ್ಷ್ಮೀದೇವಿನಗರದಲ್ಲಿ ಬಸ್‌ನ ವೇಳಾಪಟ್ಟಿಯ ಫಲಕ ಮಾತ್ರ ಇದೆ.
ಬಸ್‌ಗಳೇ ಇಲ್ಲವಾಗಿರುವ ಲಕ್ಷ್ಮೀದೇವಿನಗರದಲ್ಲಿ ಬಸ್‌ನ ವೇಳಾಪಟ್ಟಿಯ ಫಲಕ ಮಾತ್ರ ಇದೆ.   

ಬೆಂಗಳೂರು: ಲಕ್ಷ್ಮೀದೇವಿನಗರ, ವಿಧಾನಸೌಧ ಲೇಔಟ್‌ಗೆ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ಗಳು ರದ್ದಾಗಿದ್ದು, ಜನರು ನಗರಕ್ಕೆ ಬರಲು ಪರದಾಡುವಂತಾಗಿದೆ. ಕೆಲವು ವರ್ಷಗಳ ಹಿಂದೆ 8 ಬಸ್‌ಗಳ ಸಂಚಾರವಿದ್ದ ಈ ಊರಿಗೆ ಕಳೆದ ಒಂದೂವರೆ ತಿಂಗಳಿನಿಂದ ಒಂದೂ ಬಸ್‌ ಇಲ್ಲದಂತಾಗಿದೆ.

ವಿಧಾನಸೌಧನಗರ, ಲಕ್ಷ್ಮೀದೇವಿನಗರ ಮೂಲಕ ಶಿವಾಜಿನಗರ, ಮೆಜೆಸ್ಟಿಕ್‌ ಕೆಂಪೇಗೌಡ ಬಸ್‌ ನಿಲ್ದಾಣ, ಕೆ.ಆರ್‌. ಮಾರುಕಟ್ಟೆಗೆ 8 ಬಸ್‌ಗಳು ದಿನದಲ್ಲಿ 24 ಟ್ರಿಪ್‌ ಸಂಚರಿಸುತ್ತಿದ್ದವು. ಕೊನೇ ಬಸ್‌ ಲಕ್ಷ್ಮೀದೇವಿನಗರದಲ್ಲಿಯೇ ರಾತ್ರಿ ಇದ್ದು, ಬೆಳಿಗ್ಗೆ ಅಲ್ಲಿಂದ ಹೊರಡುತ್ತಿತ್ತು. ಕೋವಿಡ್‌ ಸಮಯದಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಮಾಡಲಾಗಿತ್ತು. ಎರಡು ಬಸ್‌ಗಳಷ್ಟೇ ಸಂಚರಿಸುತ್ತಿದ್ದವು. ಕೋವಿಡ್‌ ಮುಗಿದ ಬಳಿಕವೂ ಬಸ್‌ಗಳ ಸಂಖ್ಯೆ ಹೆಚ್ಚಾಗಲಿಲ್ಲ.

‘ಡಿಸೆಂಬರ್‌ ಮೊದಲ ವಾರದಿಂದ ಯಾವುದೇ ಬಸ್‌ಗಳು ಬರುತ್ತಿಲ್ಲ. ಈ ಬಗ್ಗೆ ಬಿಎಂಟಿಸಿ ಸಾರಿಗೆ ನಿಯಂತ್ರಣಾಧಿಕಾರಿಯ ಗಮನಕ್ಕೆ ತಂದೆವು. ಸರಿಪಡಿಸುವುದಾಗಿ ಭರವಸೆ ನೀಡಿ ಹೋಗಿದ್ದ ಅಧಿಕಾರಿಗೆ ವರ್ಗಾವಣೆಯಾಯಿತು. ಆ ನಂತರ ಬಂದ ಸಾರಿಗೆ ನಿಯಂತ್ರಣಾಧಿಕಾರಿ ಭೇಟಿ ನೀಡಿ ಹೋಗಿದ್ದರು. ರಸ್ತೆ ಸರಿಯಿಲ್ಲ. ಬಸ್‌ ಸಂಚರಿಸಲು ಕಷ್ಟವಾಗುವಷ್ಟು ಕಿರಿದಾಗಿದೆ ಎಂದು ವರದಿ ನೀಡಿದ್ದಾರೆ. ಎರಡೂವರೆ ದಶಕಗಳಿಂದ ಅದೇ ರಸ್ತೆಯಲ್ಲಿ ಬಸ್‌ಗಳು ಸಂಚರಿಸಿವೆ. ಆಗ ಸಮಸ್ಯೆಯಾಗಿರಲಿಲ್ಲ. ಈಗ ಯಾಕೆ ನೆಪ ಹೇಳುತ್ತಿದ್ದಾರೆ ಎಂದು ಸ್ಥಳೀಯರಾದ ಸಂತೋಷ್‌ ಕುಮಾರ್ ಎಸ್‌. ಪ್ರಶ್ನಿಸಿದರು.

ADVERTISEMENT

16 ವರ್ಷಗಳಿಂದ 79ಜಿ ಮಾರ್ಗದಲ್ಲಿ ಬಸ್‌ಗಳು ಸಂಚರಿಸುತ್ತಿದ್ದವು. 79ಜಿ1 ಮತ್ತು 79ಜಿ2 ಬಸ್‌ಗಳು ಶಿವಾಜಿನಗರದಿಂದ ಮಲ್ಲೇಶ್ವರ, ಮಹಾಲಕ್ಷ್ಮೀ ಬಡಾವಣೆ, ಕಂಠೀರವ ಸ್ಟುಡಿಯೊ, ಸೋನಾಲ್‌ ಗಾರ್ಮೆಂಟ್ಸ್‌ ಮೂಲಕ ಲಕ್ಷ್ಮೀದೇವಿನಗರ ವಿಧಾನಸೌಧ ಬಡಾವಣೆಗೆ ಬರುತ್ತಿದ್ದವು. ಕಳೆದ ಆಗಸ್ಟ್‌ನಿಂದ ಬಸ್‌ನ ಚಾಲಕ/ನಿರ್ವಾಹಕರು ಸರಿಯಾದ ಸಮಯಕ್ಕೆ ಬಾರದೇ ಇದ್ದಿದ್ದರಿಂದ ಬಸ್‌ಗಾಗಿ ಕಾಯುವವರ ಸಂಖ್ಯೆ ಕಡಿಮೆಯಾಗಿತ್ತು. ಇದೇ ಬಸ್‌ ಅನ್ನು ಡಿಸೆಂಬರ್‌ 3ರಿಂದ 252ಜಿ ಎಂದು ಮಾರ್ಗ ಬದಲಾಯಿಸಿ ಲಗ್ಗೆರೆಯಿಂದ ಸಂಚರಿಸುವಂತೆ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದರು.

ಕೆ.ಆರ್‌, ಮಾರುಕಟ್ಟೆಗೆ ಲಕ್ಷ್ಮೀದೇವಿನಗರದಿಂದ ಸಂಚರಿಸುತ್ತಿದ್ದ 77ಎ, 77ಎ2, ಕೆಬಿಎಸ್‌ಗೆ ಸಂಚರಿಸುತ್ತಿದ್ದ 98 ಎಫ್‌, 80ವಿ ಬಸ್‌ಗಳನ್ನು ಮೊದಲೇ ಸ್ಥಗಿತಗೊಳಿಸಿದ್ದರು. ಈಗ 79ಜಿ ಬಸ್‌ಗಳೂ ಬಾರದೇ ಇರುವುದರಿಂದ ಮಹಿಳೆಯರಿಗೆ, ಕೆಲಸಕ್ಕೆ ಹೋಗುವವರಿಗೆ, ಅಂಗವಿಕಲರಿಗೆ, ವೃದ್ಧರಿಗೆ ಸಮಸ್ಯೆಯಾಗಿದೆ. ಕರ್ನಾಟಕ ಕೊಳೆಗೇರಿ ಮಂಡಳಿ ನಿರ್ಮಿಸಿರುವ 2 ಸಾವಿರಕ್ಕೂ ಅಧಿಕ ವಸತಿ ಸಮುಚ್ಛಯಗಳಿವೆ. ಇಲ್ಲಿನ ಬಡವರು ಬಸ್‌ ಇಲ್ಲದೇ ತೊಂದೆರೆಗೆ ಈಡಾಗಿದ್ದಾರೆ ಎಂದು ಅಂಗವಿಕಲರೂ ಆಗಿರುವ ಸ್ಥಳೀಯ ನಿವಾಸಿ ರಾಜಣ್ಣ ಅಸಹಾಯಕತೆ ತೋಡಿಕೊಂಡರು.

ಬಸ್‌ಗೆ ಜನರ ಕೊರತೆ ಇರಲಿಲ್ಲ. ಸಮಯಪಾಲನೆ ಮಾಡದೇ ಜನರನ್ನು ಬಸ್‌ ಚಾಲಕರು ಸತಾಯಿಸಿದ್ದರು. ಸೋನಾಲ್ ಗಾರ್ಮೆಂಟ್‌ನಿಂದ ಲಕ್ಷ್ಮಿದೇವಿ ನಗರವರೆಗೆ ಸುಮಾರು 200 ಮೀಟರ್‌ ದೂರದಲ್ಲಿ ರಸ್ತೆಯ ಬದಿಯಲ್ಲಿ ಲಾಜಿಸ್ಟಿಕ್‌ ಕಂಪನಿಗಳ ಲಾರಿಗಳು ನಿಲ್ಲುತ್ತಿರುವುದರಿಂದ ಸರಾಗ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಅಷ್ಟಕ್ಕೇ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿದ್ದು ಸರಿಯಲ್ಲ ಎಂದು ಲಕ್ಷ್ಮೀದೇವಿ ನಗರದ ರಾಜ್‌ ಕುಮಾರ್‌ ತಿಳಿಸಿದರು.

ವಸತಿ ಪ್ರದೇಶಕ್ಕೇ ಬಸ್‌ಗಳಿಲ್ಲದಂತಾಗಿದೆ. ಇಲ್ಲಿನ ಜನರು ಬಸ್‌ ಹಿಡಿಯಲು ಕಂಠೀರವ ಸ್ಟುಡಿಯೊ, ಲಗ್ಗೆರೆ ಇಲ್ಲವೇ ನಂದಿನಿ ಲೇಔಟ್‌ಗೆ ಹೋಗಬೇಕು. ಯಾವ ಕಡೆಗೆ ಹೋದರೂ ಎರಡರಿಂದ ಎರಡೂವರೆ ಕಿ.ಮೀ. ದೂರ ಇದೆ. ಬಿಎಂಟಿಸಿ ಬಸ್‌ಗಳು ಮೊದಲಿನಂತೆ ಲಕ್ಷ್ಮೀದೇವಿನಗರಕ್ಕೆ ಬರುವಂತೆ ಮಾಡಬೇಕು ಎಂದು ಸ್ಥಳೀಯರಾದ ಮಲ್ಲಿಕಾರ್ಜುನ ಒತ್ತಾಯಿಸಿದರು.

‘ರಸ್ತೆ ಸರಿ ಇಲ್ಲ’

ಲಕ್ಷ್ಮೀದೇವಿನಗರಕ್ಕೆ ಹೋಗುವ ರಸ್ತೆ ಕಿರಿದಾಗಿತ್ತು. ಹಿಂದೆ ವಾಹನದಟ್ಟಣೆ ಅಷ್ಟಾಗಿ ಇಲ್ಲದ ಸಮಯದಲ್ಲಿ ಬಸ್‌ಗಳು ಹೋಗುತ್ತಿದ್ದವು. ಕೆಲವು ವರ್ಷಗಳ ಈಚೆಗೆ ಬಸ್‌ಗಳು ಹಲವು ಬಾರಿ ಅರ್ಧಗಂಟೆಗೂ ಹೆಚ್ಚು ಸಮಯ ಈ ದಟ್ಟಣೆಯಲ್ಲಿ ಸಿಲುಕುತ್ತಿದ್ದವು. ಲಕ್ಷ್ಮೀದೇವಿನಗರ ವಿಧಾನಸೌಧ ಬಡಾವಣೆಯಿಂದ ಸಂಚರಿಸುವ ಪ್ರಯಾಣಿಕರ ಸಂಖ್ಯೆಯೂ ಬಹಳ ಕಡಿಮೆ ಇತ್ತು. ಎಲ್ಲ ಸಾಧಕ ಬಾಧಕಗಳನ್ನು ಪರಿಶೀಲಿಸಿದ ಬಳಿಕ ಬಸ್‌ ಮಾರ್ಗದ ಬದಲಾವಣೆ ಮಾಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.