ಬೆಂಗಳೂರು: ‘ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಮತ್ತೆ ಹೋರಾಟ ಮಾಡುವುದು ಹೇಗೆ ಎಂಬುದರ ಬಗ್ಗೆ ಚಿಂತನ ಮಂಥನ ನಡೆಯಬೇಕು. ಜನರು ನಮ್ಮೊಂದಿಗಿದ್ದಾರೆ. ನಾವು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಜಿ.ಬಿ. ಪಾಟೀಲರ ‘ಲಿಂಗಾಯತ ಚಳವಳಿ 2017–18’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘2017–18ರಲ್ಲಿ ಸುಮಾರು 9 ತಿಂಗಳು ಹೋರಾಟ ನಡೆಯಿತು. ಕ್ರಮೇಣ ಸತ್ವ ಬತ್ತತೊಡಗಿತು. ಸಂಘಟನೆ ವಿಘಟನೆಯಾಯಿತು. ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಬೆಂಬಲ ನೀಡಿದವರು ಹಿಂದಕ್ಕೆ ಸರಿದರು. ಹಿಂದೆ ಇದ್ದವರು ಮುಂದಕ್ಕೆ ಬಂದರು. ಅವಾಂತರಗಳಾದವು. ಹೋರಾಟಗಾರರು ಮಠಗಳಿಗೆ ಹೋದಾಗ ಯಾತನೆ ಅನುಭವಿಸಬೇಕಾಯಿತು. ಹೊತ್ತು ಬಂದ ಕಡೆ ಕೊಡೆ ಹಿಡಿಯುವ ಪ್ರವೃತ್ತಿಯನ್ನು ಮಠಾಧೀಶರು ಪ್ರದರ್ಶಿಸಿದರು. ಅವೆಲ್ಲ ಈ ಕೃತಿಯಲ್ಲಿ ದಾಖಲಾಗಿದೆ’ ಎಂದರು.
‘ಕಾವಿ, ಖಾದಿಗಳನ್ನು ಹೆಚ್ಚು ನೆಚ್ಚಿಕೊಳ್ಳಲು ಹೋಗದೇ ಜನಸಾಮಾನ್ಯರನ್ನು ನಂಬಿದರೆ ಹೋರಾಟದಲ್ಲಿ ಜಯಗಳಿಸಬಹುದು ಎಂಬುದನ್ನು 12ನೇ ಶತಮಾನತದಲ್ಲಿಯೇ ಬಸವಣ್ಣ ತೋರಿಸಿಕೊಟ್ಟಿದ್ದಾರೆ. ಅದೇ ಮಾದರಿಯಲ್ಲಿ ಚಳವಳಿ ಕಟ್ಟಬೇಕು. ಹೋರಾಟ ನಡೆಸಲು 20 ಮಂದಿ ಸೇರಿ ರೂಪುರೇಷೆಗಳನ್ನು ಸಿದ್ಧಪಡಿಸಬೇಕು’ ಎಂದು ಸಲಹೆ ನೀಡಿದರು.
ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಮಾತನಾಡಿ, ‘ಯಾವುದೇ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಅಲ್ಪಸಂಖ್ಯಾತ ಧರ್ಮ ಎಂಬ ಮಾನ್ಯತೆ ನೀಡಲು ಅವಕಾಶವಿದೆ. ಬಸವಣ್ಣರನ್ನು ಧರ್ಮಗುರು ಎಂದು, ವಚನಗಳನ್ನು ಧರ್ಮಗ್ರಂಥವೆಂದು ಒಪ್ಪಿದವರೆಲ್ಲ ಲಿಂಗಾಯತರು’ ಎಂದರು.
‘ಬಸವಣ್ಣನನ್ನು ಓಡಿಸಿರುವ, ಶರಣರನ್ನು ಕೊಂದಿರುವ, ವಚನಗಳನ್ನು ಸುಟ್ಟು ಹಾಕಿರುವ ಶಕ್ತಿಗಳು ಈಗಲೂ ನಮ್ಮ ಸಮಾಜದಲ್ಲಿವೆ. ಅವುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಯಾವ ಹೋರಾಟ ಮಾಡಿದರೂ ಗುರಿ ಸಾಧಿಸಲಾಗದು’ ಎಂದರು.
ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಜಾಗತಿಕ ಲಿಂಗಾಯತ ಮಹಾಸಭೆ ಸಂಸ್ಥಾಪಕ ಎ.ಬಿ. ಪಾಟೀಲ, ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿ. ಪ್ರಶಾಂತ ನಾಯಕ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ, ಕೃತಿಕಾರ ಜಿ.ಬಿ. ಪಾಟೀಲ ಉಪಸ್ಥಿತರಿದ್ದರು.
‘ಲಿಂಗಾಯತರನ್ನು ಹಿಂದೂಗಳು ಎಂದು ಹೇಳಿ ಹೇಳಿ ಜನರ ಮನಸ್ಸಿನಲ್ಲಿ ಅಚ್ಚೊತ್ತಿಸಲಾಗಿದೆ. ಆದರೆ ಹಿಂದೂ ಧರ್ಮದ ವರ್ಣಾಶ್ರಮದ ನಾಲ್ಕು ಡಬ್ಬಿಗಳಲ್ಲಿ ಲಿಂಗಾಯತರಿಲ್ಲ. ಹಾಗಾಗಿ ಲಿಂಗಾಯತರು ಹಿಂದೂಗಳಲ್ಲ’ ಎಂದು ಇಳಕಲ್ ಚಿತ್ತರಗಿ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು. ‘ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎಂಬ ನಾಲ್ಕು ಡಬ್ಬಿಗಳಲ್ಲಿ ಲಿಂಗಾಯತರು ಬ್ರಾಹ್ಮಣರಲ್ಲ ಕ್ಷತ್ರಿಯರಲ್ಲ ವೈಶ್ಯರಲ್ಲ. ಅವರನ್ನು ಶೂದ್ರ ಡಬ್ಬಿಯಲ್ಲಿ ಇರಿಸಲು ನೋಡಲಾಗುತ್ತಿದೆ. ವರ್ಣಾಶ್ರಮದ ನಿಯಮ ಪ್ರಕಾರ ಶೂದ್ರರಿಗೆ ವಿದ್ಯೆ ಪಡೆಯುವ ದೇವರನ್ನು ಪೂಜಿಸುವ ಅಧಿಕಾರವಿಲ್ಲ. ಮೊದಲ ಮೂರು ಡಬ್ಬಿಯವರ ಸೇವಕರಾಗಿ ಇರಬೇಕು. ಬಸವಣ್ಣನವರು ಕೈಗೆ ಇಷ್ಟಲಿಂಗ ನೀಡಿ ಡಬ್ಬಿಗಳ ನಿರ್ಬಂಧದಿಂದ ಬಿಡುಗಡೆಗೊಳಿಸಿ ಸ್ವತಂತ್ರ ಮನುಷ್ಯರನ್ನಾಗಿ ಮಾಡಿದ್ದಾರೆ’ ಎಂದು ಹೇಳಿದರು.
‘ದೇವರನ್ನು ಮುಟ್ಟಿದರೆ ಮಹಿಳೆ ಪವಿತ್ರ ಆಗಬೇಕಿತ್ತು. ಆದರೆ ಶಬರಿಮಲೆಯಲ್ಲಿ ಮಹಿಳೆ ದೇವರನ್ನು ಮುಟ್ಟಿದರೆ ಮೈಲಿಗೆಯಾಯಿತಂತೆ. ಲಿಂಗಾಯತರಲ್ಲಿ ಇದೆಲ್ಲ ಇಲ್ಲ. ಹೆಣ್ಣು ಮಕ್ಕಳು ಕೂಡ ಕೈಯಲ್ಲಿ ಇಷ್ಟಲಿಂಗ ಇಟ್ಟುಕೊಂಡು ಪೂಜೆ ಮಾಡಬಹುದು. ಹಿಂದೂಗಳು ಅವರ ಧರ್ಮ ಅವರು ಪಾಲನೆ ಮಾಡಲಿ ನಮ್ಮದೇನು ವಿರೋಧವಿಲ್ಲ. ಆದರೆ ಲಿಂಗಾಯತರು ಮಾತ್ರ ಲಿಂಗಾಯತ ಧರ್ಮವನ್ನೇ ಪಾಲನೆ ಮಾಡಬೇಕು. ಜಾತಿ ಗಣತಿ ಬಂದರೆ ಧರ್ಮದ ಕಾಲಂನಲ್ಲಿ ಹಿಂದೂ ಬದಲು ಲಿಂಗಾಯತ ಎಂದೇ ತುಂಬಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.