ADVERTISEMENT

ಬೆಂಗಳೂರು: ಮಾರುಕಟ್ಟೆ ತಾಣ, ಅಭಿವೃದ್ಧಿ ಗೌಣ

ಮೂಲಸೌಕರ್ಯ ಕೊರತೆ, ಗಬ್ಬೆದ್ದು ನಾರುತ್ತಿರುವ ಮಾರುಕಟ್ಟೆಗಳು

ಖಲೀಲಅಹ್ಮದ ಶೇಖ
Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
<div class="paragraphs"><p>ಕಲಾಸಿಪಾಳ್ಯದಲ್ಲಿರುವ ಜೆ.ಸಿ. ಮಾರುಕಟ್ಟೆಯಲ್ಲಿ ಕಾರ್ಮಿಕರು ಎಲೆಕೋಸು ಕೆಳೆಗೆ ಇಳಿಸಿಕೊಳ್ಳುತ್ತಿರುವುದು. </p></div>

ಕಲಾಸಿಪಾಳ್ಯದಲ್ಲಿರುವ ಜೆ.ಸಿ. ಮಾರುಕಟ್ಟೆಯಲ್ಲಿ ಕಾರ್ಮಿಕರು ಎಲೆಕೋಸು ಕೆಳೆಗೆ ಇಳಿಸಿಕೊಳ್ಳುತ್ತಿರುವುದು.

   

-ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.

ಬೆಂಗಳೂರು: ‘ರಾಜಧಾನಿ ಬೆಂಗಳೂರಿನ ಎಲ್ಲ ಮಾರುಕಟ್ಟೆಗಳ ಪ್ರಾಂಗಣಗಳಿಗೆ ಜಾಗತಿಕ ಮಟ್ಟದ ಸ್ಪರ್ಶ ನೀಡುತ್ತೇವೆ’– ಇದು ಜನಪ್ರತಿನಿಧಿಗಳು ಆಗಾಗ್ಗೆ ಮೊಳಗಿಸುವ ಘೋಷಣೆ. ಚುನಾವಣೆ ಬಂದಾಗ ಇಂಥ ಘೋಷಣೆಗಳು ಭರವಸೆಗಳಾಗುತ್ತವೆ.

ADVERTISEMENT

ಚುನಾವಣೆ ಪ್ರಚಾರದ ವೇಳೆ ಮಾರುಕಟ್ಟೆಯಲ್ಲಿರುವ ವರ್ತಕರು, ವ್ಯಾಪಾರಿಗಳ ಕೈಗೆ ಕರಪತ್ರ ನೀಡಿ ಮತ ಕೇಳುವಾಗ, ಅದೇ ಪ್ರಾಂಗಣದಲ್ಲಿ ನಿಂತು ಭಾಷಣ ಮಾಡುವಾಗ, ರಾಜಕೀಯ ಪಕ್ಷಗಳ ನೇತಾರರು ಇಂಥ ಭರವಸೆಗಳ ಹೊಳೆಯನ್ನೇ ಹರಿಸುತ್ತಾರೆ. ಚುನಾವಣೆ ಮುಗಿಯುತ್ತಿದ್ದಂತೆ ಗೆದ್ದವರು, ಸೋತವರಿಬ್ಬರಿಗೂ ಇವೆಲ್ಲ ಮರತೇ ಹೋಗುತ್ತವೆ. ಮಾರುಕಟ್ಟೆಗಳು ಅಭಿವೃದ್ಧಿಯಾಗುತ್ತವೆ ಎಂಬ ವ್ಯಾಪಾರಸ್ಥರ ನಿರೀಕ್ಷೆ ಪ್ರತಿ ಬಾರಿಯೂ ಹುಸಿಯಾಗುತ್ತದೆ.

ಹೀಗಾಗಿಯೇ, ಇಂದಿಗೂ ನಗರದ ಬಹುತೇಕ ಎಲ್ಲ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯದ ಕೊರತೆಯಿದೆ. ಕೆಲವು ಕಡೆ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ, ಶುದ್ಧ ಕುಡಿಯುವ ನೀರಿಲ್ಲ, ಶೌಚಾಲಯಗಳ ವ್ಯವಸ್ಥೆ ಸಮರ್ಪಕವಾಗಿಲ್ಲ, ಸ್ವಚ್ಛತೆ ಎಂಬುದೇ ಮರೀಚಿಕೆ ಆಗಿದೆ. ಮಳೆ ಬಂದರಂತೂ ಇನ್ನೂ ಅಧ್ವಾನ. ಕೆಲವು ಕಡೆ ಲೋಡಿಂಗ್‌–ಅನ್‌ಲೋಡಿಂಗ್‌ ಸಮಸ್ಯೆಯಿಂದ ಸಂಚಾರದಟ್ಟಣೆ ಉಂಟಾಗುತ್ತಿದೆ. ಇಂಥ ಸಮಸ್ಯೆಗಳ ನಡುವೆ ಹಲವು ವರ್ಷಗಳಿಂದ ಮಾರುಕಟ್ಟೆಗಳು ನಡೆಯುತ್ತಿವೆ.

ಕೆ.ಆರ್.ಮಾರುಕಟ್ಟೆ: ನಗರದ ಪ್ರಮುಖ ಮಾರುಕಟ್ಟೆ ಇದು. ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಈ ಮಾರುಕಟ್ಟೆಯನ್ನು ಅಭಿವೃದ್ಧಿ ಮಾಡಲು ನಿರ್ಧರಿಸಿತ್ತು. ಅದಕ್ಕಾಗಿ ₹34.67 ಕೋಟಿ ಅನುದಾನ ಮೀಸಲಿಡಲಾಗಿತ್ತು. ಜತೆಗೆ ಮೊಬಿಲಿಟಿ ಹಬ್‌ಗಾಗಿ ₹18.68 ಕೋಟಿ ನಿಗದಿಯಾಗಿತ್ತು. 2016–17ನೇ ಸಾಲಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಇದುವರೆಗೂ ಪೂರ್ಣಗೊಂಡಿಲ್ಲ. ಇದರಿಂದ, ವರ್ತಕರು ಹಾಗೂ ಗ್ರಾಹಕರಿಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ಕುಡಿಯಲು ನೀರಿಲ್ಲ. ಶೌಚಾಲಯ ಇದೆಯಾದರೂ ಸ್ವಚ್ಛತೆ ಇಲ್ಲದ ಕಾರಣ ಮೂಗು ಮುಚ್ಚಿಕೊಂಡು ಹೋಗಬೇಕು ಎಂಬುದು ಇಲ್ಲಿನ ವರ್ತಕರು ದೂರು.

ಜೆ.ಸಿ. ಮಾರುಕಟ್ಟೆ: ಕೊಳೆತ ತರಕಾರಿಗಳ ರಾಶಿ, ಕೊಳೆಗೇರಿಯಂತಾದ ಸ್ಥಳದಲ್ಲೇ ಪ್ರತಿನಿತ್ಯ ನಡೆಯುವ ವ್ಯಾಪಾರ–ವಹಿವಾಟು. ಇದು ಕಲಾಸಿಪಾಳ್ಯದಲ್ಲಿರುವ ಜಯಚಾಮರಾಜೇಂದ್ರ ಹಣ್ಣು– ತರಕಾರಿ ಮಾರುಕಟ್ಟೆ ದುಃಸ್ಥಿತಿ.

ಮಾರುಕಟ್ಟೆ ವ್ಯಾಪ್ತಿಯು ಮೂರು ಎಕರೆಯಷ್ಟಿದೆ. 493ಕ್ಕೂ ಹೆಚ್ಚು ಅಂಗಡಿಗಳಿ‌ದ್ದು, ಅಂಗಡಿಗಳನ್ನು ತೆರೆಯಲು 970 ಜನ ಪರವಾನಗಿ ಪಡೆದುಕೊಂಡಿದ್ದು, ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ನಗರಕ್ಕೆ ತರಕಾರಿ ಮತ್ತು ಹಣ್ಣು ಪೂರೈಕೆ ಮಾಡುವ ಸಗಟು ಮಾರುಕಟ್ಟೆ ಇದಾಗಿದ್ದು, ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಮಾರುಕಟ್ಟೆಯನ್ನು ಸ್ಥಳಾಂತರಿಸಬೇಕು ಎಂಬ ವ್ಯಾಪಾರಿಗಳ ಬಹುವರ್ಷಗಳ ಬೇಡಿಕೆ ಇದುವರೆಗೂ ಈಡೇರಿಲ್ಲ.

‘ನಿತ್ಯ ಕಸದ ರಾಶಿಯಲ್ಲಿ ಹೆಜ್ಜೆ ಹಾಕುವ ರೈತರ ಅಸಹಾಯಕತೆಯನ್ನು ನೋಡಿ ಸಗಟು ವ್ಯಾಪಾರವನ್ನಾದರೂ ಶೀಘ್ರವಾಗಿ ಎಲೆಕ್ಟ್ರಾನಿಕ್‌ ಸಿಟಿಯ ಕಾಳೇನಅಗ್ರಹಾರಕ್ಕೆ ಸ್ಥಳಾಂತರ ಮಾಡಿ ಎಂಬ ವ್ಯಾಪಾರಿಗಳ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಈ ಬೇಡಿಕೆ ಇದೆ. ಜನಪ್ರತಿನಿಧಿಗಳು ಪ್ರತಿ ಬಾರಿ ಚುನಾವಣೆ ವೇಳೆಯಲ್ಲೂ ಮಾರುಕಟ್ಟೆ ಸ್ಥಳಾಂತರಿಸುವ ಭರವಸೆ ನೀಡುತ್ತಾರೆ. ಕೊನೆಗೆ ಅದು ಭರವಸೆ ಆಗಿಯೇ ಉಳಿಯುತ್ತದೆ’ ಎಂದು ವರ್ತಕರು ದೂರಿದರು.

ಮಲ್ಲೇಶ್ವರ ಮಾರುಕಟ್ಟೆ: ಮಲ್ಲೇಶ್ವರದ ಸಂಪಿಗೆ ರಸ್ತೆಯ ಬದಿಯಲ್ಲಿ 100ಕ್ಕೂ ಹೆಚ್ಚು ವ್ಯಾಪಾರಸ್ಥರು ರಸ್ತೆಬದಿಯ ಹಳೇ ಕಟ್ಟಡದಲ್ಲಿ 60 ವರ್ಷಗಳಿಂದ ಹೂವಿನ ವ್ಯಾಪಾರ ನಡೆಸುತ್ತಿದ್ದರು. ಅವರಿಗೆ ಬಹುಮಹಡಿ ಕಟ್ಟಡ ನಿರ್ಮಿಸಿಕೊಡುವ ಭರವಸೆ ನೀಡಿ, ಅಲ್ಲಿಂದ ತೆರವುಗೊಳಿಸಲಾಗಿತ್ತು. ಅದರ ಪಕ್ಕವೇ 87 ತಾತ್ಕಾಲಿಕ ಶೆಡ್‌ಗಳನ್ನು ₹ 1.35 ಕೋಟಿ ವೆಚ್ಚದಲ್ಲಿ ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸಲಾಗಿತ್ತು. ಎರಡು ವರ್ಷದ ಒಳಗೆ ಬಹುಮಹಡಿಯ ಸುಸಜ್ಜಿತ ಕಟ್ಟಡ ನಿರ್ಮಿಸುವುದಾಗಿ, 2015ರಲ್ಲಿ ಕಾಮಗಾರಿ ಆರಂಭಿಸಿದ್ದ ಬಿಡಿಎ, ಇದುವರೆಗೂ ಪೂರ್ಣಗೊಳಿಸಿಲ್ಲ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಳ್ಳುತ್ತಾರೆ.

ರಸೆಲ್‌ ಮಾರುಕಟ್ಟೆ: ಒಂದೇ ಸೂರಿನಡಿ ತರಕಾರಿ–ಹಣ್ಣು, ಮೀನು–ಮಾಂಸ, ಸಿಗುವ ರಸೆಲ್‌ ಮಾರುಕಟ್ಟೆ ನಗರದ ಪ್ರಮುಖ ಮತ್ತು ಪುರಾತನ ವಾಣಿಜ್ಯ ಕೇಂದ್ರ. ಆದರೆ, ಇಲ್ಲಿ ವಾಹನ ನಿಲುಗಡೆಗೆ ಸರಿಯಾದ ಜಾಗವಿಲ್ಲ. ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಯೇ ಇಲ್ಲ.

ಕಲಾಸಿಪಾಳ್ಯದಲ್ಲಿರುವ ಜೆ.ಸಿ. ಮಾರುಕಟ್ಟೆ. ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.
ರಸೆಲ್ ಮಾರುಕಟ್ಟೆಯ ಹಿಂಭಾಗದಲ್ಲಿರುವ ಮೀನಿನ ಮಾರುಕಟ್ಟೆ. -ಪ್ರಜಾವಾಣಿ ಚಿತ್ರ/ ರಂಜು ಪಿ.

‘ಬಳಕೆಗೆ ಬಾರದ ದಾಸನಪುರ ಮಾರುಕಟ್ಟೆ’

‘ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರದಲ್ಲಿ ಸುಸಜ್ಜಿತ ಎಪಿಎಂಸಿ(ಕೃಷಿ ಉತ್ಪನ್ನ ಮಾರಾಟ ಸಮಿತಿ) ಇದೆ. ಯಶವಂತಪುರ ಎಪಿಎಂಸಿಯಲ್ಲಿರುವ ಈರುಳ್ಳಿ ಶುಂಠಿ ಬೆಳ್ಳುಳ್ಳಿ ಹಾಗೂ ಆಲೂಗಡ್ಡೆ ವರ್ತಕರು ಇಲ್ಲಿಗೆ(ದಾಸನಪುರಕ್ಕೆ) ಸ್ಥಳಾಂತರಗೊಳ್ಳುವಂತೆ 2017ರಲ್ಲಿ ಎಪಿಎಂಸಿ ಆದೇಶ ಹೊರಡಿಸಿತ್ತು. ಯಶವಂತಪುರದಲ್ಲಿ ಮಳಿಗೆಯಿಲ್ಲದ ಹಾಗೂ ಬಾಡಿಗೆದಾರ ವರ್ತಕರು ಅದೇ ವರ್ಷ ಅಲ್ಲಿಗೆ ತೆರಳಿದ್ದರು. ಆದರೆ ಇನ್ನೂ ಹಲವಾರು ಮಳಿಗೆಗಳು ಖಾಲಿ ಇವೆ. ಅಂದಾಜು ₹400 ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ಈ ಮಾರುಕಟ್ಟೆ ಅಧಿಕಾರಿಗಳ ದ್ವಂದ್ವ ನಿಲುವಿನಿಂದ ಬಳಕೆಗೆ ಬಾರದಂತಾಗಿದೆ‘ ಎಂದು ವರ್ತಕರು ದೂರುತ್ತಾರೆ.

ಎಪಿಎಂಸಿ ಮಾರುಕಟ್ಟೆಗಳಲ್ಲಿ ಸ್ವಚ್ಛತೆ ಮರೀಚಿಕೆ ಆಗಿದೆ. ನಿರ್ವಹಣೆಯ ಕೊರತೆಯಿಂದ ಮಾರುಕಟ್ಟೆ ಪ್ರಾಂಗಣ ಗಬ್ಬೆದ್ದು ನಾರುತ್ತದೆ. ಪ್ರತಿ ಚುನಾವಣೆಯಲ್ಲಿ ಮಾರುಕಟ್ಟೆ ಅಭಿವೃದ್ಧಿ ಬಗ್ಗೆ ರಾಜಕಾರಣಿಗಳು ಭರವಸೆ ನೀಡುತ್ತಾರೆ ಅಷ್ಟೆ. ಅದು ಈಡೇರುವುದಿಲ್ಲ.
-ಸುರೇಶ, ಜೆ.ಸಿ ಮಾರುಕಟ್ಟೆಯ ವರ್ತಕ
ಕೆ.ಆರ್. ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಬೇಕು. ಕೆ.ಆರ್. ಮಾರುಕಟ್ಟೆ ಮೆಟ್ರೊ ನಿಲ್ದಾಣದಿಂದ ಮಾರುಕಟ್ಟೆ ಪ್ರಾಂಗಣಕ್ಕೆ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕು. ಹಬ್ಬದ ಸಂದರ್ಭದಲ್ಲಿ ಸಂಚಾರದಟ್ಟಣೆ ಉಂಟಾಗುತ್ತಿದ್ದು ಅದರ ನಿವಾರಣೆಗೆ ಕ್ರಮ ಕೈಗೊಳ್ಳಬೇಕು.
-ದಿವಾಕರ್, ಕೆ.ಆರ್. ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ
ಶಿವಾಜಿನಗರದಲ್ಲಿರುವ ರಸೆಲ್‌ ಮಾರುಕಟ್ಟೆಯಲ್ಲಿ ಸ್ವಚ್ಛತೆ ಇಲ್ಲ. ಮಾರುಕಟ್ಟೆ ಸಂಪೂರ್ಣ ಅಭಿವೃದ್ಧಿ ಆಗಬೇಕಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಮಾರುಕಟ್ಟೆಯ ಅಭಿವೃದ್ಧಿ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಗೆದ್ದ ನಂತರ ಇತ್ತ ಸುಳಿಯುವುದೇ ಇಲ್ಲ.
-ಮನೋಹರ್‌ ಸಲ್ಮಾನ್‌, ಮೀನು ಮಾರಾಟಗಾರರು ರಸೆಲ್‌ ಮಾರುಕಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.