‘ಸೆಮಿಕಂಡಕ್ಟರ್ ಕ್ರಾಂತಿಯಲ್ಲಿ ಭಾರತದ ನಾಯಕತ್ವದ ಸರದಿ’ ಗೋಷ್ಠಿಯಲ್ಲಿ ಭಾಗವಹಿಸಿದ ತಜ್ಞರು
ಪ್ರಜಾವಾಣಿ ಚಿತ್ರ
ಬೆಂಗಳೂರು: ಆಧುನಿಕ ತಂತ್ರಜ್ಞಾನಗಳು ಒಂದು ಕಡೆಯಿಂದ ವೇಗವಾಗಿ ಬೆಳೆಯುತ್ತಿವೆ. ಅದರ ಮಾಹಿತಿಯೂ ಬೆರಳ ತುದಿಯಲ್ಲಿ ಸಿಗುತ್ತಿದೆ. ಇಂಥ ಅವಕಾಶಗಳನ್ನು ಬಳಸಿಕೊಳ್ಳದೇ ಹೋದರೆ ಅದಕ್ಕೆ ಕ್ಷಮೆ ಇರದು. ಬಳಸಿಕೊಂಡರೆ ತಂತ್ರಜ್ಞಾನದಲ್ಲಿ ಮುಂದಿನ ದಶಕ ಭಾರತದ್ದಾಗಲಿದೆ.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬುಧವಾರ ನಡೆದ ‘ಸೆಮಿಕಂಡಕ್ಟರ್ ಕ್ರಾಂತಿಯಲ್ಲಿ ಭಾರತದ ನಾಯಕತ್ವದ ಸರದಿ’ ಗೋಷ್ಠಿಯಲ್ಲಿ ಮೂಡಿ ಬಂದ ಅಭಿಪ್ರಾಯವಿದು.
‘ನಾವು ಸೆಮಿಕಂಡಕ್ಟರ್ ಕ್ಷೇತ್ರದ ಸಹಿತ ಎಲ್ಲ ಕೈಗಾರಿಕಾ ವಲಯಗಳಿಗೆ ಸಂಬಂಧಿಸಿದಂತೆ ಬಂಡವಾಳ ಆಕರ್ಷಿಸುವ ಬಗ್ಗೆ ಮಾತನಾಡುತ್ತಿರುತ್ತೇವೆ. ವಾಸ್ತವದಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯ ಎರಡನ್ನೂ ಸೃಷ್ಟಿಸುವ ಜರೂರಿದೆ. ಇದು ಸಾಧ್ಯವಾದರೆ, ಬಂಡವಾಳದ ಹರಿವು ತನ್ನಿಂತಾನೇ ಆಗುತ್ತದೆ’ ಎಂದು ತಜ್ಞರು ಪ್ರತಿಪಾದಿಸಿದರು.
‘ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಈಗಿನ 4 ಸಾವಿರ ಕೋಟಿ ಡಾಲರ್ ಮೌಲ್ಯದ ವಹಿವಾಟು ಇನ್ನು ಹತ್ತು ವರ್ಷಗಳಲ್ಲಿ 40 ಸಾವಿರ ಕೋಟಿ ಡಾಲರ್ ಮೀರಲಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರವು ರಾಷ್ಟ್ರೀಯ ಸಮಸ್ಯೆಗಳನ್ನು ಮುಂದಿಟ್ಟು, ಅವುಗಳಿಗೆ ದಕ್ಷ ಪರಿಹಾರ ಕಂಡುಹಿಡಿಯುವಂತಹ ಸಂಶೋಧನೆಗಳನ್ನು ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.
‘ಸೆಮಿಕಂಡಕ್ಟರ್ ಕ್ಷೇತ್ರದ ಚಿಪ್ ವಿನ್ಯಾಸದಲ್ಲಿ ಭಾರತದ ಪಾಲು ಶೇಕಡ 25ರಷ್ಟಿದೆ. ಆದರೆ, ಉತ್ಪಾದನೆಯಲ್ಲಿ ನಾವು ಹಿಂದಿದ್ದೇವೆ. ಕೃತಕ ಬುದ್ಧಿಮತ್ತೆ ಎಲ್ಲ ಕ್ಷೇತ್ರಗಳನ್ನು ಆವರಿಸುತ್ತಿದೆ. ಅದಕ್ಕೆ ಪೂರಕವಾದ ವಾತಾವರಣ ಭಾರತದಲ್ಲಿಯೂ ಸೃಷ್ಟಿಯಾಗಬೇಕು’ ಎಂದರು.
ಉದ್ಯಮ ಪರಿಣತರಾದ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಂತೋಷ ಕುಮಾರ್, ಎನ್ಎಕ್ಸ್‌ಪಿ ಸೆಮಿಕಂಡಕ್ಟರ್ಸ್ ಉಪಾಧ್ಯಕ್ಷ ಹಿತೇಂದ್ರ ಗರ್ಗ್ ಮತ್ತು ಗ್ಲೋಬಲ್ ಫ್ಯಾಬ್ ಎಂಜಿನಿಯರಿಂಗ್ ಸೊಲ್ಯೂಷನ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ಛಡ್ಡಾ ಅಭಿಪ್ರಾಯ ವ್ಯಕ್ತಪಡಿಸಿದರು. ಲ್ಯಾಮ್ ರೀಸರ್ಚ್ ಉನ್ನತಾಧಿಕಾರಿ ರಂಗೇಶ್ ರಾಘವನ್ ಗೋಷ್ಠಿಯನ್ನು ನಿರ್ವಹಿಸಿದರು.
‘ಸೆಮಿಕಂಡಕ್ಟರ್ ಕ್ರಾಂತಿಯಲ್ಲಿ ಭಾರತದ ನಾಯಕತ್ವದ ಸರದಿ’ ಗೋಷ್ಠಿಯಲ್ಲಿ ಲ್ಯಾಮ್ ರಿಸರ್ಚ್ ಇಂಡಿಯಾದ ಕಾರ್ಪೊರೇಟ್ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ರಂಗೇಶ್ ರಾಘವನ್, ಟೆಕ್ಸಾಸ್ ಇನ್‌ವೆಸ್ಟ್‌ಮೆಂಟ್ ಇಂಡಿಯಾದ ಸಿಇಒ ಸಂತೋಷ್ ಕುಮಾರ್, ಗ್ಲೋಬಲ್ ಫ್ಯಾಬ್ ಎಂಜಿನಿಯರಿಂಗ್ ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ಚಡ್ಡಾ, ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ಸ್ ಉಪಾಧ್ಯಕ್ಷ ಮತ್ತು ಭಾರತದ ವ್ಯವಸ್ಥಾಪಕ ನಿರ್ದೇಶಕ ಹಿತೇಶ್ ಗರ್ಗ್ ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.